ADVERTISEMENT

ಈ ಡೈವ್ ಅಂದು ಹೊಡೆದಿದ್ರೆ? ಮೊದಲ ಬಾರಿಗೆ ಡೈವ್ ಹೊಡೆದ ಧೋನಿ!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 16:20 IST
Last Updated 19 ಏಪ್ರಿಲ್ 2021, 16:20 IST
   

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಬಹುಶಃ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಮೊದಲ ಬಾರಿಯೆಂಬಂತೆ ಡೈವ್ ಹೊಡೆದಿರುವುದು ಹೆಚ್ಚಿನ ಗಮನ ಸೆಳೆದಿದೆ.

ಇದನ್ನು ಗಮನಿಸಿದ ಅಭಿಮಾನಿಗಳು, ಈ ಡೈವ್ ಅಂದು ಹೊಡೆದಿದ್ರೆ ಎಂದು ವಿಮರ್ಶೆ ಮಾಡಿದ್ದಾರೆ.

ಐಪಿಎಲ್ 14ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಡೈವ್ ಹೊಡೆಯುವ ಮೂಲಕ ಕ್ರೀಸ್‌ಗೆ ತಲುಪಿದ್ದರು. ಈ ಮೂಲಕ ರನೌಟ್‌ನಿಂದ ಪಾರಾಗಿದ್ದರು.

ADVERTISEMENT

ಎರಡು ವರ್ಷಗಳ ಹಿಂದೆ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ರನೌಟ್ ಆಗಿದ್ದರು. ಹಾಗೊಂದು ವೇಳೆ ಡೈವ್ ಹೊಡೆದಿದ್ದಲ್ಲಿ ಧೋನಿ ಕ್ರೀಸ್ ತಲುಪುವ ಸಾಧ್ಯತೆಯಿತ್ತು.

ಇದನ್ನೇ ಅಭಿಮಾನಿಗಳು ಬೊಟ್ಟು ಮಾಡಿದ್ದಾರೆ. ಇನ್ನು ಕೆಲವು ಅಭಿಮಾನಿಗಳು , ಧೋನಿ ತಮ್ಮ ತಪ್ಪನ್ನು ತಿದ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ 39ರ ಹರೆಯದಲ್ಲೂ ಗರಿಷ್ಠ ಮಟ್ಟದ ಫಿಟ್ನೆಸ್ ಕಾಯ್ದುಕೊಂಡಿರುವ ಧೋನಿ, ಅರ್ಪಣಾ ಮನೋಭಾವವನ್ನು ಶ್ಲಾಘಿಸಿದ್ದಾರೆ.

ಅಂದು ಏಕದಿನ ವಿಶ್ವಕಪ್‌ನಲ್ಲಿ ರವೀಂದ್ರ ಜಡೇಜ ಜೊತೆಗೆ ಧೋನಿ ಮಹತ್ವದ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಮಾರ್ಟಿನ್ ಗಪ್ಟಿಲ್ ನೇರ ಥ್ರೋದಲ್ಲಿ ರನೌಟ್ ಆಗುವ ಮೂಲಕ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿತ್ತು. ಧೋನಿ ಅತ್ಯಂತ ಭಾವುಕರಾಗಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ್ದರು. ಅದುವೇ ಏಕದಿನದಲ್ಲಿ ಧೋನಿ ಆಡಿದ ಕೊನೆಯ ಇನ್ನಿಂಗ್ಸ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.