ADVERTISEMENT

ಐಪಿಎಲ್ ಹವಾ ಶುರು; ದುಬೈಗೆ ಬಂದಿಳಿದ ಧೋನಿ ನಾಯಕತ್ವದ ಸಿಎಸ್‌ಕೆ ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2021, 6:53 IST
Last Updated 14 ಆಗಸ್ಟ್ 2021, 6:53 IST
ಚಿತ್ರ ಕೃಪೆ: @ChennaiIPL, Twitter
ಚಿತ್ರ ಕೃಪೆ: @ChennaiIPL, Twitter   

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯು ಮತ್ತೆ ಕಾವೇರುತ್ತಿದೆ. ಕೊರೊನಾದಿಂದಾಗಿ ಅರ್ಧದಲ್ಲೇ ಮೊಟಕುಗೊಂಡಿರುವ 2021ನೇ ಸಾಲಿನ ಐಪಿಎಲ್ ಟೂರ್ನಿಯ ವೇಳಾಪಟ್ಟಿಯಲ್ಲಿ ಉಳಿದಿರುವ ಪಂದ್ಯಗಳು ಯುಎಇನಲ್ಲಿ ನಿಗದಿಯಾಗಿದೆ.

ಇದರಂತೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲವು ಆಟಗಾರರು ದುಬೈಗೆ ಬಂದಿಳಿದಿದ್ದಾರೆ.

ಭಾರತದಲ್ಲಿ ಎಪ್ರಿಲ್ 9ರಂದು ಆರಂಭವಾಗಿರುವ ಐಪಿಎಲ್ ಟೂರ್ನಿಯು, ಆಟಗಾರರಲ್ಲೂ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೇ 4ರಂದು ಅರ್ಧದಲ್ಲೇ ಮೊಟಕುಗೊಳಿಸಲಾಗಿತ್ತು.

ಈಗ ಸೆಪ್ಟೆಂಬರ್ 19 ಭಾನುವಾರದಂದು ಚೆನ್ನೈ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದೊಂದಿಗೆ ಟೂರ್ನಿಯ ಉಳಿದಿರುವ ಪಂದ್ಯಗಳಿಗೆ ಚಾಲನೆ ಸಿಗಲಿದೆ. ಅಂತೆಯೇ ಫೈನಲ್ ಪಂದ್ಯವು ಅಕ್ಟೋಬರ್ 15ರಂದು ನಿಗದಿಯಾಗಿದೆ.

ಈ ವರೆಗಿನ ಅಂಕಪಟ್ಟಿಯಲ್ಲಿ ಏಳು ಪಂದ್ಯಗಳನ್ನು ಆಡಿರುವ ಚೆನ್ನೈ ಐದು ಗೆಲುವಿನೊಂದಿಗೆ ಒಟ್ಟು 10 ಅಂಕಗಳನ್ನು ಸಂಪಾದಿಸಿದ್ದು, ಎರಡನೇ ಸ್ಥಾನದಲ್ಲಿದೆ. ಅಲ್ಲದೆ ಪ್ಲೇ-ಆಫ್ ತಲುಪುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ.

ಅತ್ತ ಮೂರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಳು ಪಂದ್ಯಗಳಲ್ಲಿ ಐದು ಗೆಲುವು, ಎರಡುಸೋಲಿನೊಂದಿಗೆ ಅಷ್ಟೇ ಅಂಕಗಳನ್ನು ಸಂಪಾದಿಸಿದ್ದು, ಮೂರನೇ ಸ್ಥಾನದಲ್ಲಿದೆ.

ಅಗ್ರ ಸ್ಥಾನದಲ್ಲಿರುವ ಡೆಲ್ಲಿ ಎಂಟು ಪಂದ್ಯಗಳಲ್ಲಿ ಆರು ಗೆಲುವಿನೊಂದಿಗೆ ಒಟ್ಟು 12 ಅಂಕಗಳನ್ನು ಸಂಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.