ADVERTISEMENT

IPL 2021 ಐಪಿಎಲ್‌ನ ಹೊಸ ಟ್ರೆಂಡ್; ಕ್ಯಾಚ್ ಹಿಡಿದು ಮೈದಾನದಲ್ಲೇ ಸೆಲ್ಫಿ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಏಪ್ರಿಲ್ 2021, 16:28 IST
Last Updated 24 ಏಪ್ರಿಲ್ 2021, 16:28 IST
ಚಿತ್ರ ಕೃಪೆ: ಐಪಿಎಲ್ ಟ್ವಿಟರ್
ಚಿತ್ರ ಕೃಪೆ: ಐಪಿಎಲ್ ಟ್ವಿಟರ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಅದೇನಪ್ಪಾ ಅಂಥ ಗಾಬರಿಯಾಗದಿರಿ. ಇದರ ಸಂಪೂರ್ಣ ಶ್ರೇಯಸ್ಸು ರಾಜಸ್ಥಾನ್ ರಾಯಲ್ಸ್ ಆಟಗಾರರಿಗೆ ಸಲ್ಲುತ್ತದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆಟಗಾರರಾದ ರಿಯಾನ್ ಪರಾಗ್ ಹಾಗೂ ರಾಹುಲ್ ತೆವಾಟಿಯಾ, ಕ್ಯಾಚ್ ಹಿಡಿದ ಬಳಿಕ ಸೆಲ್ಫಿ ಕ್ಲಿಕ್ಕಿಸುವ ಟ್ರೆಂಡ್ ಆರಂಭಿಸಿದ್ದಾರೆ.

ಸಹಜವಾಗಿಯೇ ಮೈದಾನದಲ್ಲಿ ಮೊಬೈಲ್ ತೆಗೆದುಕೊಂಡು ಹೋಗಲು ಅನುಮತಿಸಲಾಗುವುದೇ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಬಹುದು. ವಿಷಯ ಏನೆಂದರೆ ಕ್ಯಾಚ್ ಹಿಡಿದ ಬಳಿಕ ಸಾಂಕೇತಿಕವಾಗಿ ಚೆಂಡನ್ನು ಕೈಯಲ್ಲಿ ಹಿಡಿದು ಜೊತೆಯಾಗಿ ನಿಂತು ಸೆಲ್ಫಿ ಕ್ಲಿಕ್ಕಿಸುವ ತರಹನೇ ಸಂಭ್ರಮಾಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

ADVERTISEMENT

ಮುಸ್ತಾಫಿಜುರ್ ರಹಮಾನ್ ಎಸೆದ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದ ರಾಹುಲ್ ತ್ರಿಪಾಠಿ ಹೊಡೆದ ಚೆಂಡು ನೇರವಾಗಿ ರಿಯಾನ್ ಪರಾಗ್ ಕೈಯೊಳಗೆ ಭದ್ರವಾಗಿ ಸೇರಿತ್ತು. ಈ ಸಂದರ್ಭದಲ್ಲಿ ಹತ್ತಿರದಲ್ಲೇ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ರಾಹುಲ್ ತೆವಾಟಿಯಾ ಅವರನ್ನು ತಮ್ಮ ಬಳಿ ಕರೆಯಿಸಿದ ಪರಾಗ್, ಪ್ಯಾಂಟ್‌ ಕಿಸೆಯಿಂದ ಮೊಬೈಲ್ ಹೊರ ತೆಗೆಯುವಂತೆ ಸನ್ನೆ ಮಾಡಿ ಜೊತೆಯಾಗಿ ನಿಂತು ಸೆಲ್ಪಿಗೆ ಫೋಸ್ ಕೊಟ್ಟು ಸಂಭ್ರಮಿಸುತ್ತಾರೆ.

ಸ್ವಲ್ಪ ಹೊತ್ತಿನಲ್ಲೇ ರಿಯಾನ್ ಪರಾಗ್ ಮಗದೊಂದು ಕ್ಯಾಚ್ ಹಿಡಿಯುತ್ತಾರೆ. ಆಗಲೂ ತೆಯಾಟಿಯಾ ಜೊತೆಗೆ ಸೆಲ್ಫಿ ಕ್ಲಿಕ್ಕಿಸುವ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಇದು ಐಪಿಎಲ್‌ನಲ್ಲಿ ವಿನೂತನ ಸಂಭ್ರಮಕ್ಕೆ ಹೇತುವಾಗಿದೆ.

ಕಳೆದ ಪಂದ್ಯದಲ್ಲಿ ಬೆಂಗಳೂರು ಕೈಯಲ್ಲಿ ಹೀನಾಯ ಸೋಲಿನ ಪೆಟ್ಟು ತಿಂದಿರುವ ರಾಜಸ್ಥಾನ್, ತನ್ನ ತಪ್ಪುಗಳನ್ನು ತಿದ್ದಿಕೊಂಡು ಅದ್ಭುತ ಕ್ಷೇತ್ರರಕ್ಷಣೆ ಮಾಡುವ ಮೂಲಕ ಗಮನ ಸೆಳೆದಿದೆ. ಜೋಸ್ ಬಟ್ಲರ್ ನೇರ ಥ್ರೋ ಮಾಡುವ ಮೂಲಕ ರನೌಟ್ ಮಾಡಿರುವುದು, ಯಶಸ್ವಿ ಜೈಸ್ವಾಲ್ ಡೈವಿಂಗ್ ಕ್ಯಾಚ್ ಹಾಗೂ ಕ್ರಿಸ್ ಮೊರಿಸ್ ನಾಲ್ಕು ವಿಕೆಟ್ ಸೇರಿದಂತೆ ಬೌಲಿಂಗ್ ವಿಭಾಗದ ಸಾಂಘಿಕ ಪ್ರದರ್ಶನದ ಮೂಲಕ ಕೆಕೆಆರ್ ತಂಡವನ್ನು 133 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.