ADVERTISEMENT

IPL 2022: ಕೊಹ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು? ಸೆಹ್ವಾಗ್ ಉತ್ತರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2022, 12:34 IST
Last Updated 26 ಮಾರ್ಚ್ 2022, 12:34 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ.

ಈ ನಡುವೆ ಆರ್‌ಸಿಬಿ ನಾಯಕಸ್ಥಾನ ತ್ಯಜಿಸಿರುವ ವಿರಾಟ್ ಕೊಹ್ಲಿ ಹೊಸ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ. ಆದರೆ ವಿರಾಟ್ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇದಕ್ಕೆ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ವಿವರಣೆ ನೀಡಿದ್ದಾರೆ. ವಿರಾಟ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.

ಈ ಕುರಿತು 'ಕ್ರಿಕ್‌ಬಜ್‌'ಗೆ ಸೆಹ್ವಾಗ್ ನೀಡಿರುವ ಪ್ರತಿಕ್ರಿಯೆಯನ್ನು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.

ಐಪಿಎಲ್‌ನಲ್ಲಿ ಕಳೆದ ಕೆಲವು ಆವೃತ್ತಿಗಳಲ್ಲಿ ವಿರಾಟ್, ಓಪನರ್ ಆಗಿ ಬ್ಯಾಟಿಂಗ್ ಮಾಡಿದ್ದರು. ಈ ಮೂಲಕ ಮಿಶ್ರ ಫಲವನ್ನು ಕಂಡಿದ್ದರು. ಆರಂಭಿಕನಾಗಿ 15 ಇನ್ನಿಂಗ್ಸ್‌ಗಳಲ್ಲಿ 28.9ರ ಸರಾಸರಿಯಲ್ಲಿ 339 ರನ್ ಗಳಿಸಿದ್ದರು. ಅಲ್ಲದೆ 119.5ರ ಸ್ಟ್ರೇಕ್‌ರೇಟ್ ಕಾಯ್ದುಕೊಳ್ಳಲಷ್ಟೇ ಯಶಸ್ವಿಯಾಗಿದ್ದರು.

'ನಾಯಕ ಫಫ್ ಡು ಪ್ಲೆಸಿ ಜೊತೆಗೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಬಾರದು ಎಂದು ವೀರು ಸಲಹೆ ನೀಡಿದ್ದಾರೆ. ಇದರ ಬದಲು ಇನ್ನೊಬ್ಬ ಆಟಗಾರನಿಗೆ ಅವಕಾಶ ಒದಗಿಸಬೇಕು ಎಂದು ಹೇಳಿದ್ದಾರೆ. ಕೊಹ್ಲಿ ಎಂದಿನಂತೆ ನಂ.3 ಕ್ರಮಾಂಕದಲ್ಲಿ ಮುಂದುವರಿಯಬೇಕು' ಎಂದು ತಿಳಿಸಿದ್ದಾರೆ.

'ಪವರ್ ಪ್ಲೇಯಲ್ಲಿ ಕ್ರೀಸಿಗಿಳಿದರೆ ಕೊಹ್ಲಿ ಮೇಲೆ ಬೌಂಡರಿ ಬಾರಿಸಲು ಹೆಚ್ಚಿನ ಒತ್ತಡವಿರುತ್ತದೆ. ಒಂದು ವೇಳೆ ವಿಕೆಟ್ ನಷ್ಟವಾದರೆ ಇದು ಎದುರಾಳಿ ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಲಿದೆ. ಹಾಗಾಗಿ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಬೇಕು. ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಐದನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಹಿಂಬಾಲಿಸಬೇಕು. ಈ ಮೂಲಕ ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಹೊಂದಬಹುದಾಗಿದೆ' ಎಂದು ಸೆಹ್ವಾಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.