ಆರ್‌ಸಿಬಿಯ ವಿರಾಟ್ ಕೊಹ್ಲಿ, ಜಾಕೊಬ್ ಬೆಥೆಲ್ ಮತ್ತು ರೊಮಾರಿಯೊ ಶೆಫರ್ಡ್ ಬ್ಯಾಟಿಂಗ್ ವೈಖರಿ
ಚಿತ್ರಗಳು: ರಂಜು ಪಿ. ಹಾಗೂ X / @RCBTweets
ಬೆಂಗಳೂರು: ನಗರದಲ್ಲಿ ಶನಿವಾರ ಮಳೆ ಬರಲಿಲ್ಲ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೊಮೆರಿಯೊ ಶೆಫರ್ಡ್ ಗುಡುಗಿದರು. ಹದಿನಾಲ್ಕು ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅವರ ಆಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಸಂಭ್ರಮದ ಮಳೆಯಲ್ಲಿ ತೋಯ್ದು ತೊಪ್ಪೆಯಾದರು.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಸರಿಯಾದ ನಿರ್ಧಾರ ಅಲ್ಲ ಎಂಬುದನ್ನು ಶೆಫರ್ಡ್ ತೋರಿಸಿಕೊಟ್ಟರು. ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ 54 ರನ್‌ಗಳ ಹೊಳೆ ಹರಿಯಲು ವೆಸ್ಟ್ ಇಂಡೀಸ್ ಆಟಗಾರ ಕಾರಣರಾದರು. ಇದರಲ್ಲಿ ಅವರ ಪಾಲು 53 ರನ್‌ಗಳು!
ಅವರ ಅಬ್ಬರದ ಆಟದಿಂದಾಗಿ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 213 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ ಅವರು 13 ಎಸೆತಗಳಲ್ಲಿ ಮಾಡಿದ ಅರ್ಧಶತಕದ ದಾಖಲೆ ಹಾಗೆಯೇ ಉಳಿಯಿತು. ಕೆ.ಎಲ್. ರಾಹುಲ್ ಮತ್ತು ಪ್ಯಾಟ್ ಕಮಿನ್ಸ್ ಅವರೊಂದಿಗೆ ಶೆಫರ್ಡ್ (ಅಜೇಯ 53; 14ಎ, 4X4, 6X6) ಅವರು ಎರಡನೇ ಸ್ಥಾನವನ್ನು ಹಂಚಿಕೊಂಡರು. ಶೆಫರ್ಡ್ 378.57ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಸೂರೆ ಮಾಡಿದರು.
ಅವರ ಆಟದ ಬಿಸುಪು ಹೇಗಿತ್ತೆಂದರೆ; ಇನಿಂಗ್ಸ್‌ನ ಆರಂಭದಲ್ಲಿ ಜೇಕಬ್ ಬೆಥೆಲ್ ಮತ್ತು ವಿರಾಟ್ ಕೊಹ್ಲಿ ಅವರು ಮಿಂಚಿನ ಬ್ಯಾಟಿಂಗ್ ಅನ್ನೂ ಮರೆಸಿತು. ಇನಿಂಗ್ಸ್‌ನ ಮಧ್ಯಭಾಗದಲ್ಲಿ ಆರ್‌ಸಿಬಿಯ ರನ್ ಗಳಿಕೆಯ ವೇಗಕ್ಕೆ ಕಡಿವಾಣ ಹಾಕಿದ ಮಥೀಷ್ ಪಥಿರಾಣ (4–0–36–3) ಅವರ ಬೌಲಿಂಗ್ ನೆನಪು ಕೂಡ ತೆರೆಮರೆಗೆ ಸರಿಯಿತು.
ದುಬಾರಿಯಾದ ಖಲೀಲ್
ಇಂಗ್ಲೆಂಡ್‌ನ ಜೇಕಬ್ ಬೇಥೆಲ್ ಮತ್ತು ಶೆಫರ್ಡ್ ಅವರನ್ನು ಚೆನ್ನೈ ತಂಡದ ಎಡಗೈ ವೇಗಿ ಖಲೀಲ್ ಅಹಮದ್ ಎಂದಿಗೂ ಮರೆಯುವುದಿಲ್ಲ.
ಇನಿಂಗ್ಸ್ ಆರಂಭದಲ್ಲಿ ಖಲೀಲ್ ಹಾಕಿದ ಮೊದಲ ಸ್ಪೆಲ್‌ನಲ್ಲಿ (2–0–32–0) ಕೂಡ ದುಬಾರಿಯಾದರು. ಬೆಥೆಲ್ ಮೊದಲ ಓವರ್‌ನಲ್ಲಿ ಮೂರು ಬೌಂಡರಿ ಬಾರಿಸಿದರು. ಅವರ ಎರಡನೇ ಓವರ್‌ನಲ್ಲಿ ಜೇಕಬ್ ಒಂದು ಹಾಗೂ ಕೊಹ್ಲಿ ಎರಡು ಸಿಕ್ಸರ್ ಬಾರಿಸಿದರು.
ಅದರ ನಂತರ ಅವರಿಗೆ 19ನೇ ಓವರ್‌ನವರೆಗೂ ನಾಯಕ ಧೋನಿ ಬೌಲಿಂಗ್ ಮಾಡಲು ಬಿಡಲಿಲ್ಲ. ಆರನೇ ಬೌಲರ್ ಆಗಿ ಕಣಕ್ಕಿಳಿದ ಪಥಿರಾಣ ಮತ್ತು ಸ್ಪಿನ್ನರ್ ನೂರ್ ಅಹಮದ್ ಅವರು ಆರ್‌ಸಿಬಿ ರನ್ ಗಳಿಕೆಗೆ ಕಡಿವಾಣ ಹಾಕಿದ್ದರು. ಒಂದು ಹಂತದಲ್ಲಿ ಆತಿಥೇಯ ತಂಡವು 200ರ ಗಡಿ ಮುಟ್ಟುವುದು ಕೂಡ ಅನುಮಾನವಾಗಿತ್ತು. 18 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 159 ರನ್ ಗಳಿಸಿತ್ತು. ಈ ನಡುಎ 60 ರನ್‌ಗಳ ಅಂತರದಲ್ಲಿ 5 ವಿಕೆಟ್ ಕೂಡ ಕಳೆದುಕೊಂಡಿತ್ತು. ಆದರ ನಂತರದ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ಖಲೀಲ್, ಬೆಚ್ಚಿ ಬೀಳುವಂತೆ ಶೆಫರ್ಡ್ ಆಡಿದರು. ಕೊನೆಯ ಓವರ್‌ನಲ್ಲಿ ಪಥಿರಾಣ ಅವರನ್ನೂ ಶೆಫರ್ಡ್ ಬಿಡಲಿಲ್ಲ. ಪಿಚ್ ಇನ್ನೊಂದು ಬದಿಯಲ್ಲಿ ಟಿಮ್ ಡೇವಿಡ್ ಅವರು ಚಪ್ಪಾಳೆ ತಟ್ಟುತ್ತ ಶೇಫರ್ಡ್ ಆಟವನ್ನು ಆಸ್ವಾದಿಸಿದರು.
ಕೊಹ್ಲಿ 7ನೇ ಅರ್ಧಶತಕ
21 ವರ್ಷದ ಆಟಗಾರ ಜೇಕಬ್ ಜೊತೆಗೆ ಮೊದಲ ವಿಕೆಟ್‌ಗೆ 97 ರನ್ ಸೇರಿಸಿದ ವಿರಾಟ್ ಕೊಹ್ಲಿ ಆಟ ರಂಗೇರಿತು. ಅವರು ಈ ಟೂರ್ನಿಯಲ್ಲಿ ಸತತ 4ನೇ ಮತ್ತು ಒಟ್ಟಾರೆ 7ನೇ ಅರ್ಧಶತಕ ದಾಖಲಿಸಿದರು. 29 ಎಸೆತಗಳಲ್ಲಿ ಅವರು 50ರ ಗಡಿ ದಾಟಿದರು.
ಅವರಿಗಿಂತ ಮುನ್ನ ಜೇಕಬ್ ಕೂಡ ಅರ್ಧಶತಕ ಪೂರೈಸಿದರು. ಫಿಲ್ ಸಾಲ್ಟ್ ಗಾಯಗೊಂಡಿದ್ದ ಕಾರಣ ಸ್ಥಾನ ಪಡೆದಿದ್ದ ಜೇಕಬ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಮಥೀಷ ಪಥಿರಾಣ ಮತ್ತು ರವೀಂದ್ರ ಜಡೇಜ ಅವರು ಕ್ಯಾಚ್ ಪಡೆಯುವ ಭರಾಟೆಯಲ್ಲಿ ಪರಸ್ಪರ ಡಿಕ್ಕಿ ಹೊಡೆದುಕೊಂಡ ಕಾರಣ, ಜೀವದಾನ ಪಡೆದಿದ್ದ ಜೇಕಬ್ ಅಬ್ಬರಿಸಿದರು. ಇದರಿಂದಾಗಿ ಪವರ್‌ಪ್ಲೇಯಲ್ಲಿ 71 ರನ್‌ಗಳು ಸೇರಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.