ಐಪಿಎಲ್ 2025 ಟ್ರೋಫಿ ಹಿಡಿದು ನಡೆದ ವಿರಾಟ್ ಕೊಹ್ಲಿ ಅವರೊಂದಿಗೆ ಇಡೀ ತಂಡ
ಪಿಟಿಐ ಚಿತ್ರ
ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಹದಿನೆಂಟನೇ ಆವೃತ್ತಿಯ ಚಾಂಪಿಯನ್ ಆಗಿದೆ. ಈ ಟೂರ್ನಿ 2008ರಲ್ಲಿ ಆರಂಭವಾದಾಗಿನಿಂದಲೂ 'ಕಪ್'ಗಾಗಿ ಕಾದಿದ್ದ ಕೋಟ್ಯಂತರ ಅಭಿಮಾನಿಗಳ ಸಂಭ್ರಮದ ಕಟ್ಟೆಯೊಡೆದಿದೆ.
ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ರಾತ್ರಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಕಿಂಗ್ಸ್, 7 ವಿಕೆಟ್‌ಗೆ 184 ರನ್ ಗಳಿಸಿ ಅಲ್ಪ ಅಂತರದ ಸೋಲೊಪ್ಪಿಕೊಂಡಿತು.
ಆರ್‌ಸಿಬಿಯ ಸ್ಟಾರ್, ಅಭಿಮಾನಿಗಳ ಆರಾಧ್ಯ ವಿರಾಟ್ ಕೊಹ್ಲಿ ಮೈದಾನದಲ್ಲೇ ಆನಂದಭಾಷ್ಪ ಸುರಿಸಿದರು.
ಈ ಪಂದ್ಯದಲ್ಲಿ ಆರ್‌ಸಿಬಿ ಪರ ವಿರಾಟ್ (42 ರನ್) ಹೊರತುಪಡಿಸಿ ಯಾರೊಬ್ಬರೂ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಆದರೆ, ಫಿಲ್ ಸಾಲ್ಟ್ (16 ರನ್) ಮಯಂಕ್ ಅಗರವಾಲ್ (24 ರನ್), ನಾಯಕ ರಜತ್ ಪಾಟೀದಾರ್ (26 ರನ್), ಲಿಯಾಮ್ ಲಿವಿಂಗ್‌ಸ್ಟೋನ್ (25 ರನ್), ಜಿತೇಶ್ ಶರ್ಮಾ (24 ರನ್) ಹಾಗೂ ರೊಮಾರಿಯೊ ಶೆಫರ್ಡ್ (17 ರನ್) ನೀಡಿದ ಅಲ್ಪ ಕಾಣಿಕೆಯೇ 'ಚೊಚ್ಚಲ' ಕಪ್ ಗೆಲ್ಲಲು ಸಾಕಾಯಿತು.
ಈ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಅಮೋಘ ಸಾಮರ್ಥ್ಯ ತೋರಿದ ಬೌಲರ್‌ಗಳು, ಕಿಂಗ್ಸ್‌ಗೆ ಸೋಲುಣಿಸಿದರು. 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಪಡೆದ ಕೃಣಾಲ್ ಪಾಂಡ್ಯ ಪಂದ್ಯ ಶ್ರೇಷ್ಠ ಎನಿಸಿದರು. ಅವರಿಗೆ ಭುವನೇಶ್ವರ್ ಕುಮಾರ್ (38ಕ್ಕೆ 2 ವಿಕೆಟ್), ಯಶ್ ದಯಾಳ್ (18ಕ್ಕೆ 1 ವಿಕೆಟ್), ರೊಮಾರಿಯೊ ಶೆಫರ್ಡ್ (30ಕ್ಕೆ 1ವಿಕೆಟ್) ಹಾಗೂ ಜೋಶ್ ಹ್ಯಾಜಲ್‌ವುಡ್ (54ಕ್ಕೆ 1 ವಿಕೆಟ್) ಸಾಥ್ ನೀಡಿದರು.
ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಕೊಹ್ಲಿ ರನ್ ದಾಖಲೆ
ಫೈನಲ್‌ನಲ್ಲಿ ಉಪಯುಕ್ತ 42 ರನ್ ಕಲೆಹಾಕಿದ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ಒಂದೇ ತಂಡದ ವಿರುದ್ಧ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು.
ಪಂಜಾಬ್ ವಿರುದ್ಧ ಈವರೆಗೆ 36 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ, ಒಂದು ಶತಕ ಹಾಗೂ ಆರು ಅರ್ಧಶತಕ ಸಹಿತ 1,159 ರನ್ ಬಾರಿಸಿದ್ದಾರೆ. ಅವರೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 34 ಇನಿಂಗ್ಸ್‌ಗಳಲ್ಲಿ 1,146 ರನ್ ಗಳಿಸಿರುವುದು ದಾಖಲೆಯಾಗಿತ್ತು. ಪಂಜಾಬ್ ವಿರುದ್ಧ 26 ಇನಿಂಗ್ಸ್‌ಗಳಲ್ಲಿ 1,134 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಅರ್ಶದೀಪ್ 20 ವಿಕೆಟ್
ಎಡಗೈ ವೇಗಿ ಅರ್ಶದೀಪ್ ಸಿಂಗ್ 17 ಪಂದ್ಯಗಳಲ್ಲಿ 21 ವಿಕೆಟ್ ಗಳಿಸಿದರು. ಆ ಮೂಲಕ ಪಂಜಾಬ್ ಪರ ಒಂದೇ ಆವೃತ್ತಿಯಲ್ಲಿ 20ಕ್ಕಿಂತ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಆಟಗಾರ ಎನಿಸಿಕೊಂಡರು. 2018ರಲ್ಲಿ ಆ್ಯಂಡ್ರೋ ಟೈ (24 ವಿಕೆಟ್), 2020ರಲ್ಲಿ ಮೊಹಮ್ಮದ್ ಶಮಿ (20 ವಿಕೆಟ್), 2022ರಲ್ಲಿ ಕಗಿಸೊ ರಬಾಡ (23 ರನ್), ಹರ್ಷಲ್ ಪಟೇಲ್ (24 ವಿಕೆಟ್) ಈ ಸಾಧನೆ ಮಾಡಿದ್ದರು.
ಕನ್ನಡಿಗನ ದಾಖಲೆ ಮುರಿದ ಪ್ರಿಯಾಂಶ್
ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡುವ ಮುನ್ನ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಶ್ರೇಯಕ್ಕೆ ಪಂಜಾಬ್‌ನ ಪ್ರಿಯಾಂಶ್ ಆರ್ಯ ಭಾಜನರಾದರು.
ಅವರು ಈ ಬಾರಿ ಆಡಿರುವ 17 ಇನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕ ಸಹಿತ 475 ರನ್ ಕಲೆಹಾಕಿದ್ದಾರೆ. ಕನ್ನಡಿಗ ದೇವದತ್ತ ಪಡಿಕ್ಕಲ್ 2020ರಲ್ಲಿ 473 ರನ್ ಗಳಿಸಿದ್ದರು. ಅದು, ಈ ವರೆಗೆ ದಾಖಲೆಯಾಗಿತ್ತು.
ಶ್ರೇಯಸ್ ಅಯ್ಯರ್ 2015ರಲ್ಲಿ 439 ರನ್, ತಿಲಕ್ ವರ್ಮಾ 2022ರಲ್ಲಿ 397 ರನ್, ರಾಹುಲ್ ತ್ರಿಪಾಠಿ 2017ರಲ್ಲಿ 391 ರನ್ ಬಾರಿಸಿದ್ದರು.
23 ಸಿಕ್ಸ್
ಫೈನಲ್ ಪಂದ್ಯದಲ್ಲಿ ಒಟ್ಟು 23 ಸಿಕ್ಸರ್ ದಾಖಲಾದವು. ಇದು ಜಂಟಿ ದಾಖಲೆಯಾಗಿದೆ. ಆರ್‌ಸಿಬಿ ಬ್ಯಾಟರ್‌ಗಳು 9 ಹಾಗೂ ಕಿಂಗ್ಸ್ ಬ್ಯಾಟರ್‌ಗಳು 14 ಸಲ ಚೆಂಡನ್ನು ಬೌಂಡರಿಗೆ ಗೆರೆಯಾಚೆಗೆ ಬಾರಿಸಿದರು.
2016ರ ಫೈನಲ್‌ನಲ್ಲೂ ಇಷ್ಟೇ ಸಿಕ್ಸ್ ಸಿಡಿದಿದ್ದವು. ಆಗ ಫೈನಲ್‌ನಲ್ಲಿ ಸೋತಿದ್ದ ಆರ್‌ಸಿಬಿ 13 ಸಿಕ್ಸ್ ಬಾರಿಸಿದರೆ ಚಾಂಪಿಯನ್ ಆಗಿದ್ದ ಸನ್‌ರೈಸರ್ಸ್ ಹೈದರಾಬಾದ್ 10 ಸಿಕ್ಸ್ ಬಾರಿಸಿತ್ತು.
ಕ್ವಾಲಿಫೈರ್ 1 ಗೆದ್ದವರಿಗೆ ಕಪ್
ಕಳೆದ ಎಂಟು (2018–2025) ಆವೃತ್ತಿಯಲ್ಲಿ ಕ್ವಾಲಿಫೈಯರ್–1ರಲ್ಲಿ ಗೆದ್ದ ತಂಡವೇ ಫೈನಲ್‌ನಲ್ಲೂ ಗೆದ್ದಿದೆ. ಒಟ್ಟಾರೆಯಾಗಿ, ಕ್ವಾಲಿಫೈಯರ್ ಮಾದರಿಯನ್ನು 2011ರಲ್ಲಿ ಪರಿಚಯಿಸಿದಾಗಿನಿಂದ ಈವರೆಗೆ ನಡೆದ 15 ಆವೃತ್ತಿಗಳಲ್ಲಿ 12 ಸಲ ಕ್ವಾಲಿಫೈಯರ್–1 ಗೆದ್ದವರೇ ಚಾಂಪಿಯನ್ ಆಗಿದ್ದಾರೆ.
ಹೆಚ್ಚು ಫೈನಲ್‌ನಲ್ಲಿ ಜಯ
ಐಪಿಎಲ್‌ನಲ್ಲಿ ಅತಿಹೆಚ್ಚು ಫೈನಲ್ ಪಂದ್ಯಗಳಲ್ಲಿ ಜಯ ಸಾಧಿಸಿದ ಶ್ರೇಯ ರೋಹಿತ್ ಶರ್ಮಾ ಹಾಗೂ ಅಂಬಟಿ ರಾಯುಡು ಅವರದ್ದು. ಇವರಿಬ್ಬರು, 6 ಪೈನಲ್‌ಗಳಲ್ಲಿ ಜಯಿಸಿದ್ದಾರೆ.
ಇದೀಗ ಆರ್‌ಸಿಬಿಯ ಕೃಣಾಲ್ ಪಾಂಡ್ಯ, ತಾವಾಡಿದ 4ನೇ ಫೈನಲ್‌ನಲ್ಲಿ ಜಯದ ನಗೆ ಬೀರಿದರು. ರವೀಂದ್ರ ಜಡೇಜ, ಲಸಿತ್ ಮಲಿಂಗ ಅವರೂ ಇಷ್ಟೇ ಸಲ ಫೈನಲ್ ಗೆದ್ದಿದ್ದಾರೆ.
ಎಂ.ಎಸ್. ಧೋನಿ, ಕೀರನ್ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಐದು ಸಲ ಫೈನಲ್ ಜಯಿಸಿದ್ದಾರೆ.
ಕೃಣಾಲ್ ದಾಖಲೆ
ಎರಡು ಫೈನಲ್‌ಗಳಲ್ಲಿ ಪಂದ್ಯಶ್ರೇಷ್ಠ ಎನಿಸಿಕೊಂಡ ಏಕೈಕ ಆಟಗಾರ ಕೃಣಾಲ್ ಪಾಂಡ್ಯ. 2017ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆದಾಗಲೂ ಕೃಣಾಲ್ ಪಂದ್ಯದ ಆಟಗಾರ ಆಗಿದ್ದರು.
ಹೆಚ್ಚು ಫೈನಲ್ ಸೋತ ತಂಡ
10 ಸಲ ಫೈನಲ್ ತಲುಪಿರುವ ಚೆನ್ನೈ ಸೂಪರ್ ಕಿಂಗ್ಸ್ ಐದರಲ್ಲಿ ಸೋಲು ಕಂಡಿದೆ. ಆರ್‌ಸಿಬಿ, ತಾನಾಡಿದ 4 ಫೈನಲ್‌ನಲ್ಲಿ ಮೂರರಲ್ಲಿ ಸೋಲು ಕಂಡಿದೆ.
ಸನ್‌ರೈಸರ್ಸ್ ಹೈದರಾಬಾದ್ ಮೂರರಲ್ಲಿ ಎರಡನ್ನು ಸೋತಿದ್ದರೆ, ಪಂಜಾಬ್ ಕಿಂಗ್ಸ್ ಆಡಿದ ಎರಡೂ ಫೈನಲ್‌ಗಳಲ್ಲಿ ಸೋಲುಂಡಿದೆ.
ಕಡಿಮೆ ರನ್ ಅಂತರದ ಜಯ
ಫೈನಲ್‌ನಲ್ಲಿ ಪಂಜಾಬ್ ಪಡೆಯನ್ನು ಆರ್‌ಸಿಬಿ ಕೇವಲ 6 ರನ್‌ಗಳಿಂದ ಸೋಲಿಸಿತು. ಇದೂ ದಾಖಲೆ ಪಟ್ಟಿಗೆ ಸೇರಿತು.
ಮುಂಬೈ ಇಂಡಿಯನ್ಸ್ ತಂಡವು 2017ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಎದುರು ಹಾಗೂ 2019ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 1 ರನ್‌ನಿಂದ ಗೆದ್ದು ದಾಖಲೆ ಬರೆದಿತ್ತು.
2009ರ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಆರ್‌ಸಿಬಿ ವಿರುದ್ಧ 6ರನ್ ಅಂತರದ ಜಯ ಸಾಧಿಸಿತ್ತು. ಸನ್‌ರೈಸರ್ಸ್ ಹೈದರಾಬಾದ್ ಪಡೆ 2016ರ ಫೈನಲ್‌ನಲ್ಲಿ ಆರ್‌ಸಿಬಿಯನ್ನು 8 ರನ್‌ನಿಂದ ಸೋಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.