ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್
ಪಿಟಿಐ ಮತ್ತು ರಾಯಿಟರ್ಸ್ ಚಿತ್ರಗಳು
ನವದೆಹಲಿ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ಸೆಣಸಾಟ ನಡೆಸಲಿವೆ.
ಈ ತಂಡಗಳು ಎರಡು ವಾರದ ಹಿಂದಷ್ಟೇ ಬೆಂಗಳೂರಿನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಡೆಲ್ಲಿ ಪಡೆ 6 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.
ಆ ಪಂದ್ಯದಲ್ಲಿ ಅಮೋಘ ಅರ್ಧಶತಕ ಸಿಡಿಸಿ ಡೆಲ್ಲಿ ಜಯಕ್ಕೆ ಕಾರಣವಾಗಿದ್ದ ಕನ್ನಡಿಗ ಕೆ.ಎಲ್.ರಾಹುಲ್, ಪಂದ್ಯದ ಬಳಿಕ 'ಕಾಂತಾರ' ಸಿನಿಮಾದ ದೃಶ್ಯವೊಂದನ್ನು ಅನುಕರಿಸಿ ಸಂಭ್ರಮಾಚರಿಸಿದ್ದರು. 'ಬೆಂಗಳೂರು ನನ್ನ ತವರು. ಇಲ್ಲಿನ ಮೈದಾನದ ಬಗ್ಗೆ ಉಳಿದೆಲ್ಲರಿಗಿಂತಲೂ ಚೆನ್ನಾಗಿ ನನಗೆ ಗೊತ್ತು' ಎಂದು ಸಾರಿದ್ದರು.
ಹೀಗಾಗಿ, ನಾಳಿನ ಪಂದ್ಯವು ಆರ್‌ಸಿಬಿಗೆ ಮುಯ್ಯಿ ತೀರಿಸಲು ದೊರೆತ ಅವಕಾಶ ಎಂಬಂತಾಗಿದೆ. ದೆಹಲಿಯವರಾದ ವಿರಾಟ್ ಕೊಹ್ಲಿ, ತಮ್ಮ ತವರಿನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ರಾಹುಲ್‌ಗೆ ತಿರುಗೇಟು ನೀಡಲಿದ್ದಾರೆ ಎಂದು ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಟೂರ್ನಿಯಲ್ಲಿ ಅತಿಹೆಚ್ಚು (392) ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ, ಈಗಾಗಲೇ ಐದು ಅರ್ಧಶತಗಳನ್ನು ಬಾರಿಸಿದ್ದಾರೆ. ಈ ಪೈಕಿ ನಾಲ್ಕು ಆರ್‌ಸಿಬಿ ತವರು ಬೆಂಗಳೂರಿನಿಂದ ಆಚೆ ನಡೆದ ಪಂದ್ಯಗಳಲ್ಲಿ ಬಂದಿವೆ. ಇದೀಗ ತಮ್ಮ ತವರು ದೆಹಲಿಯಲ್ಲಿ ಅವರು ಹೇಗೆ ಆಡಲಿದ್ದಾರೆ ಎಂಬುದು ಕುತೂಹಲದ ಕೇಂದ್ರವಾಗಿದೆ. ಅಷ್ಟೇ ಅಲ್ಲ. ಡೆಲ್ಲಿ ತಂಡ ಆಡುತ್ತಿದ್ದರೂ, ಇಲ್ಲಿನ ಅಭಿಮಾನಿಗಳು ಕೊಹ್ಲಿಯನ್ನು ಬೆಂಬಲಿಸುವ ಸಾಧ್ಯತೆ ಇದೆ.
ಬೆಂಗಳೂರಿನ ನಿಧಾನಗತಿ ಪಿಚ್‌ನಲ್ಲಿ ಕೊಹ್ಲಿ ತಿಣುಕಾಡಿದ್ದರು. ಆದರೆ, ಅದೇ ಪಿಚ್‌ನಲ್ಲಿ ಡೆಲ್ಲಿ ತಂಡದ ರಾಹುಲ್ ಉತ್ತಮವಾಗಿ ರನ್ ಗಳಿಸಿ ಸಾಮರ್ಥ್ಯ ಸಾಬೀತು ಮಾಡಿದ್ದರು. ಡೆಲ್ಲಿ ಪರ ಈ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿರುವ ಹಾಗೂ 'ಆರೆಂಜ್ ಕ್ಯಾಪ್' ರೇಸ್‌ನಲ್ಲಿ 9ನೇ ಸ್ಥಾನದಲ್ಲಿರುವ ರಾಹುಲ್, 7 ಇನಿಂಗ್ಸ್‌ಗಳಿಂದ 4 ಅರ್ಧಶತಕ ಸಹಿತ 323 ರನ್ ಕಲೆಹಾಕಿದ್ದಾರೆ.
ಈ ಇಬ್ಬರು ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಅಭಿಮಾನಿಗಳಿಗೆ ಭರ್ತಿ ಮನರಂಜನೆ ಕಟ್ಟಿಟ್ಟ ಬುತ್ತಿ.
ಕೊಹ್ಲಿ, ರಾಹುಲ್ ಮಾತ್ರವಲ್ಲದೆ, ವೇಗಿಗಳಾದ ಜೋಶ್ ಹ್ಯಾಜಲ್‌ವುಡ್ – ಮಿಚೇಲ್ ಸ್ಟಾರ್ಕ್, ಸುಯಾಶ್ ಶರ್ಮಾ – ಕುಲದೀಪ್ ಯಾದವ್, ಕೃಣಾಲ್ ಪಾಂಡ್ಯ – ಅಕ್ಷರ್ ಪಟೇಲ್ ಪ್ರದರ್ಶನ ಹೇಗಿರಲಿದೆ ಎಂಬ ಕಾರಣಕ್ಕೆ, ಈ ಪಂದ್ಯವು ಭಾರೀ ಕುತೂಹಲ ಕೆರಳಿಸಿದೆ.
ಸ್ಟಾರ್ಕ್ vs ಹ್ಯಾಜಲ್‌ವುಡ್
ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿಗಳಾದ ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೇಲ್ ಸ್ಟಾರ್ಕ್ ಕ್ರಮವಾಗಿ ಆರ್‌ಸಿಬಿ ಮತ್ತು ಡೆಲ್ಲಿ ತಂಡಕ್ಕೆ ಆಡುತ್ತಿದ್ದಾರೆ. ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿಯುವ ಹಾಗೂ ಪಂದ್ಯ ಗೆದ್ದುಕೊಡಬಲ್ಲ ಸಾಮರ್ಥ್ಯ ಈ ಇಬ್ಬರಲ್ಲೂ ಇದೆ.
16 ವಿಕೆಟ್‌ಗಳನ್ನು ಉರುಳಿಸಿರುವ ಹ್ಯಾಜಲ್‌ವುಡ್, ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಸೂಪರ್ ಓವರ್‌ಗೆ ಸಾಕ್ಷಿಯಾಗಿದ್ದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಖರ ಯಾರ್ಕರ್‌ಗಳ ಮೂಲಕ ಡೆಲ್ಲಿ ಗೆಲುವು ತಂದುಕೊಟ್ಟಿದ್ದ ಸ್ಟಾರ್ಕ್, ಸದಾ ಅಪಾಯಕಾರಿ. ಅವರು ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಕುಲದೀಪ್ vs ಸುಯಾಶ್
ಕುಲದೀಪ್ ಯಾದವ್ ಆತಿಥೇಯ ತಂಡದ ಸ್ಪಿನ್ ಶಕ್ತಿಯಾಗಿದ್ದಾರೆ. ಸುಯಾಶ್ ಶರ್ಮಾ, ಈ ಆವೃತ್ತಿಯಲ್ಲಿ ಆರ್‌ಸಿಬಿಯ ಸ್ಪಿನ್ ಅಸ್ತ್ರವಾಗಿದ್ದಾರೆ.
ಪ್ರತಿ ಓವರ್‌ಗೆ ಕೇವಲ 6.50 ರನ್ ಬಿಟ್ಟುಕೊಟ್ಟು ಒಟ್ಟು 12 ವಿಕೆಟ್ ಕಬಳಿಸಿರುವ ಯಾದವ್, ಭಾನುವಾರ ಮಿಂಚಿದರೆ ಆರ್‌ಸಿಬಿಗೆ ದೊಡ್ಡ ಸವಾಲು ಎದುರಾಗಲಿದೆ.
ದೆಹಲಿಯವರೇ ಆಗಿರುವ ಸುಯಾಶ್ ಶರ್ಮಾ, ಈ ಬಾರಿ ಆರ್‌ಸಿಬಿ ಪರ ವಿಕೆಟ್ ಗಳಿಕೆಯಲ್ಲಿ ಅಷ್ಟೇನೂ ಯಶಸ್ಸು ಗಳಿಸಿಲ್ಲ. ಆದರೆ, ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ಸಫಲರಾಗಿದ್ದಾರೆ. ಇಲ್ಲಿನ ಪಿಚ್ ಬಗ್ಗೆ ಚೆನ್ನಾಗಿ ತಿಳಿದಿರುವ ಅವರು, ಡೆಲ್ಲಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
ಅಕ್ಷರ್ vs ಕೃಣಾಲ್
ಆಲ್‌ರೌಂಡರ್‌ಗಳಾದ ಅಕ್ಷರ್ ಪಟೇಲ್ ಹಾಗೂ ಕೃಣಾಲ್ ಪಾಂಡ್ಯ ಹೇಗೆ ಆಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸ್ಪಿನ್ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಉಪಯುಕ್ತ ಕಾಣಿಕೆ ನೀಡಬಲ್ಲ ಸಾಮರ್ಥ್ಯ ಈ ಇಬ್ಬರಲ್ಲೂ ಇದೆ.
ಅಕ್ಷರ್ ಈ ಬಾರಿ ಹೆಚ್ಚು ಬೌಲಿಂಗ್‌ನಲ್ಲಿ ಪರಿಣಾಮಕಾರಿಯಾಗಿಲ್ಲ. 8 ಪಂದ್ಯಗಳಲ್ಲಿ 23 ಓವರ್ ಬೌಲಿಂಗ್ ಮಾಡಿರುವ ಅವರು ಕೇವಲ 1 ವಿಕೆಟ್ ಪಡೆದಿದ್ದಾರೆ. ಆದರೆ, ಬ್ಯಾಟಿಂಗ್‌ನಲ್ಲಿ (174 ರನ್) ಉಪಯುಕ್ತ ಆಟವಾಡಿದ್ದಾರೆ.
ಕೃಣಾಲ್ ಪಾಂಡ್ಯ ಪ್ರದರ್ಶನ ಇದಕ್ಕೆ ತದ್ವಿರುದ್ಧ. ಬ್ಯಾಟಿಂಗ್‌ನಲ್ಲಿ ಮಂಕಾಗಿರುವ ಅವರು, ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದಾರೆ. ಬ್ಯಾಟಿಂಗ್ ಮಾಡಿರುವ 4 ಇನಿಂಗ್ಸ್‌ಗಳಲ್ಲಿ ಪಾಂಡ್ಯ ಗಳಿಸಿರುವುದು ಕೇವಲ 24 ರನ್. ಆದರೆ, 12 ಇನಿಂಗ್ಸ್‌ಗಳಲ್ಲಿ 12 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಆರ್‌ಸಿಬಿಗೆ ಜಯಕ್ಕೆ ಕೊಡುಗೆ ನೀಡಿದ್ದಾರೆ.
ಆರ್‌ಸಿಬಿ ಮೇಲುಗೈ
ಉಭಯ ತಂಡಗಳು ಈವರೆಗೆ 33 ಸಲ ಮುಖಾಮುಖಿಯಾಗಿವೆ. ಈ ಪೈಕಿ ಆರ್‌ಸಿಬಿ 19ರಲ್ಲಿ ಗೆದ್ದಿದ್ದರೆ, ಡೆಲ್ಲಿ 12 ಸಲ ಜಯದ ನಗೆ ಬೀರಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದ್ದರೆ, ಮತ್ತೊಂದು ಡ್ರಾ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.