ಜಯದ ಸಂಭ್ರಮದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು
ಪಿಟಿಐ ಚಿತ್ರ
ಮುಂಬೈ: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಈ ಸಲದ ಟೂರ್ನಿಯ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ತಂಡವು ಬುಧವಾರ ನಡೆದ ಪಂದ್ಯದಲ್ಲಿ 59 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ಇದರೊಂದಿಗೆ ಡೆಲ್ಲಿ ತಂಡದ ಕನಸು ಕಮರಿತು. ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಇದಕ್ಕೆ ಮೊದಲೇ ಪ್ಲೇ ಆಫ್ ಪ್ರವೇಶಿಸಿ ದ್ದವು. ಮುಂಬೈ ನಾಲ್ಕನೇ ತಂಡವಾಗಿದೆ.
ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸೂರ್ಯಕುಮಾರ್ ಯಾದವ್ (73; 43ಎಸೆತ, 4X7, 6X4) ಮತ್ತು ನಮನ್ ಧೀರ್ (ಔಟಾಗದೇ 24; 8ಎ, 4X2, 6X2) ಅವರ ಬ್ಯಾಟಿಂಗ್ ಬಲದಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 180 ರನ್ ಗಳಿಸಿತು. ಗುರಿ ಬೆನ್ನಟ್ಟಿದ್ದ ಡೆಲ್ಲಿ ತಂಡಕ್ಕೆ ಮುಂಬೈ ವೇಗಿ ಜಸ್‌ಪ್ರೀತ್ ಬೂಮ್ರಾ (12ಕ್ಕೆ3) ಮತ್ತು ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ (11ಕ್ಕೆ3) ಅಡ್ಡಿಯಾದರು. ಅದರಿಂದಾಗಿ ಡೆಲ್ಲಿ ತಂಡವು 18.2 ಓವರ್‌ಗಳಲ್ಲಿ 121 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.
ಅನಾರೋಗ್ಯದ ಕಾರಣದಿಂದ ಅಕ್ಷರ್ ಪಟೇಲ್ ಅವರು ಕಣಕ್ಕಿಳಿಯಲಿಲ್ಲ. ಅವರ ಬದಲಿಗೆ ಫಾಫ್ ಡುಪ್ಲೆಸಿ ಡೆಲ್ಲಿ ತಂಡವನ್ನು ಮುನ್ನಡೆಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೆ.ಎಲ್. ರಾಹುಲ್, ಡುಪ್ಲೆಸಿ, ಪೊರೆಲ್, ಸ್ಟಬ್ಸ್ ಅವರು ಇಲ್ಲಿ ವಿಫಲರಾದರು. ಸಮೀರ್ ರಿಜ್ವಿ (39; 35ಎ) ಮತ್ತು ವಿಪ್ರಜ್ ನಿಗಮ್ (20 ;11ಎ) ಕೊಂಚ ಪ್ರತಿರೋಧ ತೋರಿದರು.
ಎರಡು ಓವರ್; 48ರನ್: ಸೂರ್ಯ ಕುಮಾರ್ ಮತ್ತು ನಮನ್ ಅವರಿಬ್ಬರೂ ಮುಂಬೈ ತಂಡದ ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ 48 ರನ್ ಸೂರೆ ಮಾಡಿದರು. ಅದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು.
ಮುಂಬೈ ತಂಡದ ಆರಂಭವು ಉತ್ತಮವಾಗಿರಲಿಲ್ಲ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಆಡಲಿಲ್ಲ. ಎಡಗೈ ವೇಗಿ ಮುಸ್ತಿಫಿಜುರ್ ರೆಹಮಾನ್ ಎಸೆತದಲ್ಲಿ ರೋಹಿತ್ ಶರ್ಮಾ (5 ರನ್) ಔಟಾದಾಗ ತಂಡದ ಖಾತೆಯಲ್ಲಿ 23 ರನ್‌ಗಳಷ್ಟೇ ಇದ್ದವು.
ರಿಯಾನ್ ರಿಕೆಲ್ಟನ್ ಮತ್ತು ವಿಲ್ ಜ್ಯಾಕ್ಸ್ ಅವರ ಜೊತೆಯಾಟವನ್ನು ವೇಗಿ ಮುಕೇಶ್ ಕುಮಾರ್ ಮುರಿದರು. ನಂತರದ ಓವರ್‌ನಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಮೋಡಿಗೆ ರಿಕೆಲ್ಟನ್ ಕೂಡ ಶರಣಾದರು.
ಈ ಹಂತದಲ್ಲಿ ಜೊತೆಗೂಡಿದ ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 55 ರನ್ ಸೇರಿಸಿದರು. ಈ ಜೊತೆಯಾಟಕ್ಕೂ ಮುಕೇಶ್ ಪೆಟ್ಟುಕೊಟ್ಟರು. ವರ್ಮಾ (27; 27ಎ, 4X1, 6X1) ಅವರ ವಿಕೆಟ್ ಪಡೆದ ಮುಕೇಶ್ ಸಂಭ್ರಮಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಕೇವಲ 3 ರನ್ ಗಳಿಸಿ ನಿರ್ಗಮಿಸಿದರು.
ಇನ್ನೊಂದೆಡೆ ಬೀಸಾಟವಾಡುತ್ತಿದ್ದ ಸೂರ್ಯ ಮಾತ್ರ ತಂಡದ ಮೊತ್ತ ಹೆಚ್ಚಿಸುವತ್ತ ಗಮನ ನೀಡಿದ್ದರು. ಅವರಿಗೆ ನಮನ್ ಜೊತೆಗೂಡಿದಾಗ ಆಟ ರಂಗೇರಿತು. ಅದರಲ್ಲೂ ಕೊನೆಯ ಎರಡು ಓವರ್‌ಗಳು ಮುಂಬೈ ಪಾಲಿಗೆ ವರದಾನವಾದವು. ಮುಕೇಶ್ ಕುಮಾರ್ ಹಾಕಿದ 19ನೇ ಓವರ್‌ನಲ್ಲಿ 27 ರನ್‌ಗಳು ಬಂದವು. ಚಾಮೀರ ಹಾಕಿದ ಕೊನೆಯ ಓವರ್‌ನಲ್ಲಿ ಒಟ್ಟು 21 ರನ್‌ಗಳು ದಾಖಲಾದವು.
ಸಂಕ್ಷಿಪ್ತ ಸ್ಕೋರು
ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 5ಕ್ಕೆ180 (ರಿಯಾನ್ ರಿಕೆಲ್ಟನ್ 25, ಸೂರ್ಯಕುಮಾರ್ ಯಾದವ್ ಅಜೇಯ 73, ತಿಲಕ್ ವರ್ಮಾ 27, ನಮನ್ ಧೀರ್ ಅಜೇಯ 24, ಮುಕೇಶ್ ಕುಮಾರ್ 48ಕ್ಕೆ2)
ಡೆಲ್ಲಿ ಕ್ಯಾಪಿಟಲ್ಸ್: 18.2 ಓವರ್‌ಗಳಲ್ಲಿ 121 (ಸಮೀರ್ ರಿಜ್ವಿ 39, ವಿಪ್ರಜ್ ನಿಗಮ್ 20, ಮಿಚೆಲ್ ಸ್ಯಾಂಟನರ್ 11ಕ್ಕೆ3, ಜಸ್‌ಪ್ರೀತ್ ಬೂಮ್ರಾ 12ಕ್ಕೆ3) ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 59 ರನ್‌ಗಳ ಜಯ.
ಪಂದ್ಯದ ಆಟಗಾರ: ಸೂರ್ಯಕುಮಾರ್ ಯಾದವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.