ಸೂರ್ಯಕುಮಾರ್ ಯಾದವ್ ಹಾಗೂ ಎಬಿ ಡಿ ವಿಲಿಯರ್ಸ್
ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅವರು, ಐಪಿಎಲ್‌ನಲ್ಲಿ ಹೊಸ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ.
ಈ ಬಾರಿ ಆಡಿರುವ 15 ಪಂದ್ಯಗಳಲ್ಲಿ 67.30ರ ಸರಾಸರಿಯಲ್ಲಿ 673 ರನ್ ಗಳಿಸಿರುವ ಸೂರ್ಯ, ಪಂಜಾಬ್ ಕಿಂಗ್ಸ್ ವಿರುದ್ಧ ಇಂದು (ಭಾನುವಾರ, ಜೂನ್ 1) ನಡೆಯುವ ಕ್ವಾಲಿಫೈಯರ್–2 ಪಂದ್ಯದಲ್ಲಿ 15 ರನ್ ಗಳಿಸಿದರೆ ದಿಗ್ಗಜ ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿರುವ ದಾಖಲೆಯನ್ನು ಮುರಿಯಲಿದ್ದಾರೆ.
ಆರಂಭಿಕನಲ್ಲದೆ, ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಖ್ಯಾತಿ ಅವರದ್ದಾಗಲಿದೆ.
ವಿಲಿಯರ್ಸ್ ಅವರು 2016ರ ಆವೃತ್ತಿಯಲ್ಲಿ ಆಡಿದ 16 ಇನಿಂಗ್ಸ್‌ಗಳಲ್ಲಿ 1 ಶತಕ ಹಾಗೂ 6 ಅರ್ಧಶತಕ ಸಹಿತ 687 ಗಳಿಸಿದ್ದರು. ಅದು ಸದ್ಯ ದಾಖಲೆಯಾಗಿದೆ.
ಆರೆಂಜ್ ಕ್ಯಾಪ್ ಮೇಲೂ ಕಣ್ಣು
ವಿಲಿಯರ್ಸ್ ದಾಖಲೆಯಷ್ಟೇ ಅಲ್ಲದೆ, ಈ ಬಾರಿ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಳ್ಳುವ ಅವಕಾಶವೂ ಸೂರ್ಯಕುಮಾರ್‌ಗೆ ಇದೆ. ಅದಕ್ಕಾಗಿ ಅವರು 87 ರನ್ ಗಳಿಸಬೇಕಿದೆ. ಒಂದು ವೇಳೆ ಮುಂಬೈ ಫೈನಲ್ ತಲುಪಿದರೆ, ಮತ್ತೊಂದು ಪಂದ್ಯದಲ್ಲಿ ಬ್ಯಾಟಿಂಗ್ ಮಾಡಬಹುದಾಗಿದೆ.
ಸದ್ಯ ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ ಅವರು ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು, 15 ಪಂದ್ಯಗಳಲ್ಲಿ 759 ರನ್ ಕಲೆಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.