ವಿರಾಟ್ ಕೊಹ್ಲಿ ಚಿತ್ರವಿರುವ ಪೋಷಾಕು ಧರಿಸಿದ್ದ ಅಭಿಮಾನಿಗಳು
–ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್
ಬೆಂಗಳೂರು: ‘ಇದು ಚಿನ್ನಸ್ವಾಮಿ ಫಾಲ್ಸ್..ಎಂಥ ಮಳೆ ಮಾರ್ರೆ..’
ಶನಿವಾರ ರಾತ್ರಿ ನಗರದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ತುಂಬಿದ್ದು ಹೌದು. ಆದರೆ, ಐಪಿಎಲ್ ಪಂದ್ಯ ಆಯೋಜನೆಗೊಂಡಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಕ್ರಿಕೆಟ್‌ಪ್ರಿಯರಿಗೆ ‘ಜಲಪಾತ’ ದರ್ಶನವಾಯಿತು.
ಸಂಜೆ ಆರಂಭವಾದ ಮಳೆ ರಾತ್ರಿ ಸುಮಾರು 11ರವರೆಗೂ ಸುರಿಯುತ್ತಲೇ ಇತ್ತು. ಇದರಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ರಾತ್ರಿ 10.24ಕ್ಕೆ ರದ್ದು ಮಾಡಿದ ಘೋಷಣೆ ಹೊರಬೀಳುವವರೆಗೂ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಹೊರಹೋಗಿರಲಿಲ್ಲ. ಆದರೆ, ಕೆಲವು ಗ್ಯಾಲರಿಯ ಮೇಲ್ಚಾವಣಿಗಳು ಸೋರುತ್ತಿದ್ದವು. ಅದರಿಂದಾಗಿ ಜನರು ನೆನಸಿಕೊಳ್ಳಬೇಕಾಯಿತು. ಇಂತಹ ಒಂದು ದೃಶ್ಯವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ (@269signoff) ಪ್ರೇಕ್ಷಕರ ಮಾತುಗಳು ಹರಿದಾಡುತ್ತಿವೆ. ‘ಎಂಟ್ರಿಗೆ ₹4400 ಕೊಟ್ಟು ಫಾಲ್ಸ್ ನೋಡಲು ಬಂದಿದ್ದೇವೆ’ ಎಂದೂ ಅವರು ಹೇಳುತ್ತಾರೆ.
ಮಳೆ ನಿಂತ 45 ನಿಮಿಷಗಳ ಅವಧಿಯಲ್ಲಿಯೇ ಮೈದಾನವನ್ನು ಆಟಕ್ಕೆ ಸಜ್ಜುಗೊಳಿಸಬಹುದಾದ ಸಬ್ ಏರ್ ವ್ಯವಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ. ಆದ್ದರಿಂದ ಮಳೆ ನಿಂತು ಪಂದ್ಯ ಆರಂಭವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿಯೇ ಬಹುತೇಕರು ತಮ್ಮ ಜಾಗ ಬಿಟ್ಟು ಕದಲಿರಲಿಲ್ಲ.
‘ದುಬಾರಿ ಟಿಕೆಟ್‌ಗಳನ್ನು ಕಷ್ಟಪಟ್ಟು ಖರೀದಿಸಿ ಬಂದಿದ್ದೇವೆ. ಮಳೆಯಿಂದ ಪಂದ್ಯ ನಡೆಯಲಿಲ್ಲ. ಆದರೆ ಮಳೆ, ಚಳಿಯಿಂದ ರಕ್ಷಿಸಿಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಬಹಳಷ್ಟು ಕಡೆ ಚಾವಣಿಗಳು ಮುರಿದುಹೋಗಿವೆ. ದುರಸ್ತಿ ಮಾಡಿಸಬೇಕಲ್ಲವೇ’ ಎಂದು ಬಿ.ಟಿ.ಎಂ ಬಡಾವಣೆಯಿಂದ ಬಂದಿದ್ದ ವಸಂತ್ ವೈ.ಎಸ್. ಪ್ರಶ್ನಿಸುತ್ತಾರೆ.
ಅಭಿಮಾನಿಗಳ ಸಂಭ್ರಮ
ಈಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ ಅವರ ಗೌರವಕ್ಕಾಗಿ ಅಭಿಮಾನಿಗಳು ಬಿಳಿ ಪೋಷಾಕು ಧರಿಸಿ ಕ್ರೀಡಾಂಗಣಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಕೆಲವು ಅಭಿಮಾನಿಗಳು ಆಸಕ್ತಿಕರ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕ್ರೀಡಾಂಗಣದ ಮೇಲಿಂದ ಬೆಳ್ಳಕ್ಕಿಗಳ ಹಿಂಡು ಹಾರಿ ಹೋಗುವ ದೃಶ್ಯ ತುಣುಕನ್ನು ಇನ್ಸ್ಟಾಗ್ರಾಮ್‌ನಲ್ಲಿ (@siliconcity.bengaluru) ಹಾಕಿರುವ ಪ್ರೇಕ್ಷಕರೊಬ್ಬರು ‘ಪ್ರಕೃತಿ ಕೂಡ ಶ್ವೇತವರ್ಣಕ್ಕೆ ತಿರುಗಿದೆ. ಕಿಂಗ್ ಕೊಹ್ಲಿ ಗೌರವವಂದನೆ ಸಲ್ಲಿಸುತ್ತಿದೆ’ ಎಂದು ಬರೆದಿದ್ದಾರೆ.
ಮಳೆಯನ್ನೂ ಲೆಕ್ಕಿಸದೇ ಕ್ರೀಡಾಂಗಣದಲ್ಲಿಯೇ ಸುಮಾರು ಆರೇಳು ತಾಸು ಕಾದಿದ್ದ ಅಭಿಮಾನಿಗಳಿಗೆ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡದವರು ಎಕ್ಸ್‌ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ಟೀಶರ್ಟ್‌ಗಳಿಗೆ ಬೇಡಿಕೆ
18 ನಂಬರ್ ಅಚ್ಚಾಗಿದ್ದ ಬಿಳಿ ಬಣ್ಣದ ಟೀಶರ್ಟ್‌ಗಳಿಗೆ ಭಾರಿ ಬೇಡಿಕೆ ಕುದುರಿತ್ತು. ಕ್ರೀಡಾಂಗಣದ ಹೊರಗೆ, ಮಹಾತ್ಮಾ ಗಾಂಧಿ ರಸ್ತೆ ಮತ್ತು ಚರ್ಚ್‌ಸ್ಟ್ರೀಟ್‌ನಲ್ಲಿ ಟೀಶರ್ಟ್‌ಗಳ ಮಾರಾಟ ಜೋರಾಗಿತ್ತು. ₹ 1300 ರಿಂದ ₹ 1500ರವರೆಗೂ ಮೌಲ್ಯ ನೀಡಿದ ಅಭಿಮಾನಿಗಳೂ ಖರೀದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.