ಜಿತೇಶ್ ಶರ್ಮಾ
ಚಿತ್ರ (ಕೃಪೆ: X/@RCBTweets)
ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುವ ಅದೃಷ್ಟ ವಿಕೆಟ್ ಕೀಪರ್, ಬಲಗೈ ಬ್ಯಾಟರ್ ಜಿತೇಶ್ ಶರ್ಮಾ ಅವರಿಗೆ ಒಲಿದು ಬಂದಿದೆ.
ತಂಡದ ಕಾಯಂ ನಾಯಕ ರಜತ್ ಪಾಟೀದಾರ್ ಇನ್ನಷ್ಟೇ ಸಂಪೂರ್ಣವಾಗಿ ಫಿಟ್ ಆಗಬೇಕಾಗಿರುವ ಕಾರಣ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಇಂದು ಲಖನೌದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜಿತೇಶ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆರ್‌ಸಿಬಿ ನಾಯಕತ್ವ ವಹಿಸಿದ 9ನೇ ಆಟಗಾರ...
ಜಿತೇಶ್ ಶರ್ಮಾ ಆರ್‌ಸಿಬಿ ಪರ ನಾಯಕತ್ವ ವಹಿಸಿದ ಒಂಬತ್ತನೇ ಕಪ್ತಾನ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ಆ ಮೂಲಕ ದಿಗ್ಗಜರಾದ ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಅವರೊಂದಿಗೆ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಆರ್‌ಸಿಬಿ ಪರ ನಾಯಕತ್ವ ವಹಿಸಿದ ಆಟಗಾರರು:
ರಾಹುಲ್ ದ್ರಾವಿಡ್ (2008),
ಕೆವಿನ್ ಪೀಟರ್ಸನ್ (2009),
ಅನಿಲ್ ಕುಂಬ್ಳೆ (2009-10),
ಡೇನಿಯಲ್ ವೆಟೊರಿ (2011-12),
ವಿರಾಟ್ ಕೊಹ್ಲಿ (2011-23),
ಶೇನ್ ವಾಟ್ಸನ್ (2017),
ಫಫ್ ಡುಪ್ಲೆಸಿ (2022-24),
ರಜತ್ ಪಾಟೀದಾರ್ (2025),
ಜಿತೇಶ್ ಶರ್ಮಾ (2025)
ರಜತ್ ಪಾಟೀದಾರ್ ಇಂಪ್ಯಾಕ್ಟ್ ಪ್ಲೇಯರ್...
ಈ ಮೊದಲು ರಜತ್ ಪಾಟೀದಾರ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಕೋಚ್ ಆ್ಯಂಡಿ ಫ್ಲವರ್ ಮಾಹಿತಿ ನೀಡಿದ್ದರು. ಆದರೆ ಈಗಾಗಲೇ ಪ್ಲೇ-ಆಫ್ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲಿ ರಜತ್ ಪಾಟೀದಾರ್, 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಅದೇ ರೀತಿ ದೇವದತ್ ಪಡಿಕ್ಕಲ್ ಸ್ಥಾನದಲ್ಲಿ ಮಯಂಕ್ ಅಗರವಾಲ್ ಕಾಣಿಸಿಕೊಂಡಿದ್ದಾರೆ.
ಆರ್‌ಸಿಬಿ ಈ ಪಂದ್ಯವನ್ನೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.