ವಿರಾಟ್ ಕೊಹ್ಲಿ
(ರಾಯಿಟರ್ಸ್ ಚಿತ್ರ)
ಚಂಡೀಗಢ: ಮೊದಲು ಬೌಲರ್‌ಗಳ ಸಾಂಘಿಕ ದಾಳಿ ಬಳಿಕ ವಿರಾಟ್ ಕೊಹ್ಲಿ (73*) ಹಾಗೂ ದೇವದತ್ತ ಪಡಿಕ್ಕಲ್ (61) ಆಕರ್ಷಕ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು (ಭಾನುವಾರ) ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರ ಸರಿಯೆಂದು ಸಾಬೀತುಪಡಿಸಿದ ಬೌಲರ್‌ಗಳು, ಪಂಜಾಬ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಪ್ರಿಯಾಂಶ್ ಆರ್ಯ (22), ಪ್ರಭ್‌ಸಿಮ್ರಾನ್ (33), ಜೋಸ್ ಇಂಗ್ಲಿಸ್ (29), ಶಶಾಂಕ್ ಸಿಂಗ್ (31*) ಹಾಗೂ ಮಾರ್ಕೊ ಜಾನ್ಸೆನ್ (25*) ಉಪಯುಕ್ತ ಆಟದ ಹೊರತಾಗಿಯೂ ಪಂಜಾಬ್ ಆರು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಾಯಕ ಶ್ರೇಯಸ್ ಅಯ್ಯರ್ (6) ಹಾಗೂ ನೆಹಲ್ ವಧೇರಾ (5) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಆರ್‌ಸಿಬಿ ಪರ ಕೃಣಾಲ್ ಪಾಂಡ್ಯ (25ಕ್ಕೆ 2) ಹಾಗೂ ಸುಯೇಶ್ ಶರ್ಮಾ (26ಕ್ಕೆ 2) ತಲಾ ಎರಡು ವಿಕೆಟ್ ಗಳಿಸಿ ಮಿಂಚಿದರು.
ಕೊಹ್ಲಿ-ಪಡಿಕ್ಕಲ್ ಶತಕದ ಜೊತೆಯಾಟ...
ಬಳಿಕ ಗುರಿ ಬೆನ್ನಟ್ಟಿದ ಆರ್‌ಸಿಬಿ 18.5 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 73 ರನ್ ಗಳಿಸಿ (7 ಬೌಂಡರಿ, 1 ಸಿಕ್ಸರ್) ಅಜೇಯರಾಗುಳಿದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅಲ್ಲದೆ ದೇವದತ್ತ ಪಡಿಕ್ಕಲ್ ಅವರೊಂದಿಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಬಿರುಸಿನ ಆಟವಾಡಿದ ಪಡಿಕ್ಕಲ್ 35 ಎಸೆತಗಳಲ್ಲಿ 61 ರನ್ ಗಳಿಸಿ (5 ಬೌಂಡರಿ, 4 ಸಿಕ್ಸರ್) ಅಬ್ಬರಿಸಿದರು.
ತವರಿನಾಚೆಯ ಅಂಗಳದಲ್ಲಿ ಸತತ ಐದನೇ ಗೆಲುವು...
ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ತವರಿನಾಚೆಯ ಅಂಗಳದಲ್ಲಿ ಆರ್‌ಸಿಬಿ ಆಡಿರುವ ಎಲ್ಲ ಐದು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.
ಈ ಮೊದಲು ಕೋಲ್ಕತ್ತದಲ್ಲಿ ಕೆಕೆಆರ್ ವಿರುದ್ಧ ಏಳು ವಿಕೆಟ್, ಚೆನ್ನೈಯಲ್ಲಿ ಸಿಎಸ್‌ಕೆ ವಿರುದ್ಧ 50 ರನ್, ಮುಂಬೈಯಲ್ಲಿ ಎಂಐ ವಿರುದ್ಧ 12 ರನ್ ಮತ್ತು ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್ ಅಂತರದ ಜಯ ಗಳಿಸಿತ್ತು.
ಅದೇ ಹೊತ್ತಿಗೆ ತವರಿನಲ್ಲಿ ಆಡಿರುವ ಎಲ್ಲ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಸೋಲನುಭವಿಸಿದೆ.
ವಿರಾಟ್ ಕೊಹ್ಲಿ
ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿತ...
ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಆರ್‌ಸಿಬಿ (+0.472) ಪಂಜಾಬ್‌ಗಿಂತಲೂ ಉತ್ತಮ ರನ್‌ರೇಟ್ (+0.177) ಕಾಯ್ದುಕೊಂಡಿದೆ.
ಈವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಐದು ಗೆಲುವು ದಾಖಲಿಸಿರುವ ಆರ್‌ಸಿಬಿ ಒಟ್ಟು 10 ಅಂಕಗಳನ್ನು ಸಂಪಾದಿಸಿದೆ. ಮತ್ತೊಂದೆಡೆ ಎಂಟು ಪಂದ್ಯಗಳಲ್ಲಿ ಐದು ಗೆಲುವುಗಳನ್ನು ಹೊಂದಿರುವ ಪಂಜಾಬ್ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಕೊಹ್ಲಿ ದಾಖಲೆ: 67ನೇ ಸಲ 50 ಪ್ಲಸ್ (ಶತಕ ಸೇರಿದಂತೆ) ಸಾಧನೆ...
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 67ನೇ ಸಲ 50ಕ್ಕೂ ಹೆಚ್ಚು ರನ್‌ಗಳ (ಶತಕ ಸೇರಿದಂತೆ) ಸಾಧನೆ ಮಾಡಿದ್ದಾರೆ. ಈ ಮೂಲಕ ಡೇವಿಡ್ ವಾರ್ನರ್ ಹಿಂದಿಕ್ಕಿರುವ ಕೊಹ್ಲಿ, ನೂತನ ದಾಖಲೆ ಬರೆದಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು 50+ ರನ್ ಸಾಧನೆ (ಶತಕ ಸೇರಿದಂತೆ):
ವಿರಾಟ್ ಕೊಹ್ಲಿ: 67 (8 ಶತಕ)
ಡೇವಿಡ್ ವಾರ್ನರ್: 66 (4 ಶತಕ)
ಶಿಖರ್ ಧವನ್: 53 (2 ಶತಕ)
ರೋಹಿತ್ ಶರ್ಮಾ: 45 (2 ಶತಕ)
ಕೆ.ಎಲ್. ರಾಹುಲ್: 43 (4 ಶತಕ)
ಎಬಿ ಡಿವಿಲಿಯರ್ಸ್: 43 (3 ಶತಕ)
ಇನ್ನು ಅತಿ ಹೆಚ್ಚು ಅರ್ಧಶತಕ ಗಳಿಸಿದ ಬ್ಯಾಟರ್‌ಗಳ ಪೈಕಿ ಡೇವಿಡ್ ವಾರ್ನರ್ (62) ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ (59) ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.