ADVERTISEMENT

ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಾರೆ ಎಂದ ಕೊಹ್ಲಿ: ಸಿಟ್ಟಾದ ರೋಹಿತ್ ಫ್ಯಾನ್ಸ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2025, 5:05 IST
Last Updated 4 ಜೂನ್ 2025, 5:05 IST
<div class="paragraphs"><p>ವಿರಾಟ್‌ ಕೊಹ್ಲಿ</p></div>

ವಿರಾಟ್‌ ಕೊಹ್ಲಿ

   

ಪಿಟಿಐ ಚಿತ್ರ

ಅಹಮದಾಬಾದ್‌: ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅವರು, ಇಂಪ್ಯಾಕ್ಟ್ ಪ್ಲೇಯರ್‌ ಆಗಿ ಆಡಲಾರೆ. ಪೂರ್ಣ 20 ಓವರ್‌ ಮೈದಾನದಲ್ಲಿದ್ದು ಪಂದ್ಯದ ಮೇಲೆ ಇಂಪ್ಯಾಕ್ಟ್‌ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ADVERTISEMENT

ಈ ಹೇಳಿಕೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಈ ಬಾರಿಯ ಐಪಿಎಲ್‌ ಟೂರ್ನಿಯುದ್ದಕ್ಕೂ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬ್ಯಾಟಿಂಗ್‌ ಮಾಡಿದ್ದರು. ಹಾಗಾಗಿ, ಅವರನ್ನುದ್ದೇಶಿಸಿಯೇ ಕೊಹ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ರೋಹಿತ್‌ ಅಭಿಮಾನಿಗಳು ಟೀಕಿಸುತ್ತಿದ್ದರೆ, ಅವರ ಕಾಲೆಳೆಯಲು ಕೊಹ್ಲಿ ಅಭಿಮಾನಿಗಳು ಮುಂದಾಗಿದ್ದಾರೆ.

ಐಪಿಎಲ್‌–2025 ಫೈನಲ್‌ ಪಂದ್ಯದ ಬಳಿಕ ವೀಕ್ಷಕ ವಿವರಣೆಗಾರ ಮ್ಯಾಥ್ಯೂ ಹೈಡನ್‌ ಅವರೊಂದಿಗೆ ಮಾತನಾಡಿದ ಕೊಹ್ಲಿ, 'ನಾನು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಲಾರೆ. ಪೂರ್ಣ 20 ಓವರ್‌ವರೆಗೆ ಮೈದಾನದಲ್ಲಿ ಇರಲು ಹಾಗೂ ಅಲ್ಲಿ ಇಂಪ್ಯಾಕ್ಟ್‌ ಮಾಡಲು ಬಯಸುತ್ತೇನೆ. ಆ ರೀತಿಯ ಆಟಗಾರ ನಾನು. ಅಂತಹ ದೃಷ್ಟಿಕೋನವನ್ನು ದೇವರು ನನಗೆ ನೀಡಿದ್ದಾನೆ' ಎಂದು ಹೇಳಿದ್ದಾರೆ.

ಮುಂದುವರಿದು, ಈ ಗೆಲುವಿಗಾಗಿ ಮತ್ತು ಇಂದು ರಾತ್ರಿ ಕೊನೆಗೂ ಟ್ರೋಫಿನನ್ನು ನನ್ನ ಮಡಿಲಿಗೆ ನೀಡಿದ್ದಕ್ಕಾಗಿ ದೇವರಿಗೆ ಕೃತಜ್ಞನಾಗಿರುತ್ತೇನೆ. ಸಾಧ್ಯವಾದಷ್ಟು ವಿನಮ್ರನಾಗಿರುತ್ತೇನೆ. ನನ್ನಿಂದ ಆದಷ್ಟು ಶ್ರಮಿಸುತ್ತೇನೆ ಎಂದಿದ್ದಾರೆ.

ನಿರ್ವಹಣೆ, ಆಟಗಾರರ ತಂಡ ಅತ್ಯುತ್ತಮವಾಗಿದೆ. ಉತ್ತಮ ಆಟಗಾರರು, ಪಂದ್ಯ ಗೆದ್ದುಕೊಡಬಲ್ಲವರು, ಆಟವನ್ನು ಮುನ್ನಡೆಸುವ ಸಾಮರ್ಥ್ಯವುಳ್ಳವರು ತಂಡದಲ್ಲಿದ್ದರು ಎಂದು ಅಭಿಪ್ರಾಯಪಟ್ಟಿರುವ ಕೊಹ್ಲಿ, ಮೆಗಾ ಹರಾಜು ಸಂದರ್ಭದಲ್ಲಿ ನಮ್ಮ ತಂತ್ರಗಳನ್ನು ಸಾಕಷ್ಟು ಜನರು ಪ್ರಶ್ನಿಸಿದ್ದರು. ಆದರೆ, ಹರಾಜಿನ ಎರಡನೇ ದಿನದಲ್ಲಿ ತಂಡ ಕೂಡಿಕೊಂಡ ಆಟಗಾರರ ಬಗ್ಗೆ ಸಂತಸವಿತ್ತು. ತಂಡದ ಸಾಮರ್ಥ್ಯದ ಮೇಲೆ ವಿಶ್ವಾಸವಿತ್ತು ಎಂದು ಹೇಳಿದ್ದಾರೆ.

ಪ್ರತಿಯೊಬ್ಬರ ಕೊಡುಗೆ ಇಲ್ಲದಿದ್ದರೆ ಇದು (ಫೈನಲ್‌ ಗೆಲುವು) ಸಾಧ್ಯವಾಗುತ್ತಿರಲಿಲ್ಲ. ಪರಿಸ್ಥಿತಿ ಕಠಿಣವಾದಾಗಲೆಲ್ಲಾ ಪ್ರತಿಯೊಬ್ಬ ಆಟಗಾರರನ್ನು ತಂಡದ ಆಡಳಿತ ಬೆಂಬಲಿಸಿತು. ಸಕಾರಾತ್ಮಕವಾಗಿರುವಂತೆ ನೋಡಿಕೊಂಡಿತು. ಹಾಗಾಗಿ, ಇದು ಎಲ್ಲರ ಗೆಲುವು ಎಂದು ಹೇಳಿದ್ದಾರೆ.

ಇಲ್ಲಿ ನಿಂತು ನನ್ನ ಬಗ್ಗೆ ನಾನು ಮಾತನಾಡಿಕೊಳ್ಳಲು ಬಯಸುವುದಿಲ್ಲ. ನನ್ನ ಕುರಿತು ಈಗಾಗಲೇ ಸಾಕಷ್ಟು ಮಾತುಗಳನ್ನಾಡಲಾಗುತ್ತಿದೆ. ಈ ಗೆಲುವು ಬೆಂಗಳೂರಿಗೆ, ಪ್ರತಿಯೊಬ್ಬ ಆಟಗಾರ, ಅವರ ಕುಟುಂಬ ಮತ್ತು ತಂಡದ ಆಡಳಿತದ್ದು. ಇದು, ವೃತ್ತೀಜೀವನದಲ್ಲಿ ನಾನು ಅನುಭವಿಸಿದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ಮುಂದುವರಿದು, ಯುವಕರು ಟೆಸ್ಟ್‌ ಕ್ರಿಕೆಟ್ ಅನ್ನು ಗೌರವದಿಂದ ಕಾಣಬೇಕು ಎಂದು ಒತ್ತಾಯಿಸಿರುವ ಕೊಹ್ಲಿ, ಟೆಸ್ಟ್ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಜಗತ್ತಿನ ಎಲ್ಲಿಬೇಕಾದರೂ ಉತ್ತಮವಾಗಿ ಆಡಬಲ್ಲಿರಿ. ಜನರು ನಿಮ್ಮ ಆಟವನ್ನು ಶ್ಲಾಘಿಸುತ್ತಾರೆ. ಹಾಗಾಗಿ, ವಿಶ್ವ ಕ್ರಿಕೆಟ್‌ನಲ್ಲಿ ಗೌರವ ಬಯಸುವುದಾದರೆ, ಟೆಸ್ಟ್‌ ಮಾದರಿಯಲ್ಲಿ ತೊಡಗಿಕೊಳ್ಳಿ. ನಿಮ್ಮ ಮನಸ್ಸು ಮತ್ತು ಆತ್ಮವನ್ನು ಅದಕ್ಕೆ ಒಪ್ಪಿಸಿ. ನೀವು ಅದ್ಭುತ ಪ್ರದರ್ಶನ ನೀಡಿ ಹೊರನಡೆದಾಗ ಕ್ರಿಕೆಟ್‌ ಜಗತ್ತಿನ ದಂತಕತೆಗಳೊಂದಿಗೆ ಗೌರವ ಹಂಚಿಕೊಳ್ಳುತ್ತೀರಿ ಎಂದು ಸಲಹೆ ನೀಡಿದ್ದಾರೆ.

'ಅಭಿಮಾನಿಗಳ ಗೆಲುವು'
ಇದು ತಂಡಕ್ಕೆ ದಕ್ಕಿದ ಗೆಲುವಷ್ಟೇ ಅಲ್ಲ. ಆರ್‌ಸಿಬಿ ಅಭಿಮಾನಿಗಳ ಜಯವೂ ಹೌದು. ಇದು 18 ದೀರ್ಘ ವರ್ಷಗಳ ಕಾಯುವಿಕೆ. ಈ ಅವಧಿಯಲ್ಲಿ ನನ್ನ ಯೌವನ, ಮೇರು ಮಟ್ಟದ ಆಟ, ಅನುಭವ ಧಾರೆ ಎರೆದಿದ್ದೇನೆ. ಪ್ರತಿ ವರ್ಷ ಗೆಲುವಿಗೆ ನನ್ನಿಂದ ಏನೆಲ್ಲಾ ಸಾಧ್ಯವೊ ಎಲ್ಲವನ್ನೂ ಕೊಟ್ಟಿದ್ದೇನೆ. ಕೊನೆಗೂ ಗೆದ್ದಿರುವುದು ನಂಬಲ ಸಾಧ್ಯವಾದ ಅನುಭವ. ಇಂಥ ಸುದಿನವನ್ನು ನಿರೀಕ್ಷಿಸಿರಲಿಲ್ಲ. ಈ ಫ್ರಾಂಚೈಸಿಗೆ ಎಬಿ ಡಿವಿಲಿಯರ್ಸ್‌ ಅವರು ನೀಡಿರುವ ಕಾಣಿಕೆ ಅಮೋಘವಾದುದು. 'ಇದು ನಮ್ಮ ಗೆಲುವಷ್ಟೇ ಅಲ್ಲ. ನಿಮ್ಮದೂ ಹೌದು. ನಮ್ಮ ಜೊತೆ ನೀವೂ ಸಂಭ್ರಮ ಅಚರಿಸಬೇಕೆಂದು ಹೇಳಿದ್ದೆ' ಎಂದು ಅವರಿಗೆ ಹೇಳಿದ್ದೆ. ಅವರು ನಾಲ್ಕು ವರ್ಷ ಹಿಂದೆಯೇ ನಿವೃತ್ತರಾದರೂ ನಮ್ಮ ತಂಡದ ಪರ ಅತಿ ಹೆಚ್ಚು 'ಪಂದ್ಯದ ಆಟಗಾರ' ಗೌರವ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.