ADVERTISEMENT

IPL 2025 | RCB vs RR: ತವರಿನಲ್ಲಿ ಆರ್‌ಸಿಬಿಗೆ ಮೊದಲ ಜಯ

ಗಿರೀಶ ದೊಡ್ಡಮನಿ
Published 24 ಏಪ್ರಿಲ್ 2025, 15:51 IST
Last Updated 24 ಏಪ್ರಿಲ್ 2025, 15:51 IST
   

ಬೆಂಗಳೂರು:  ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಗುರುವಾರ ‘ಕೆಂಪು ಸಮುದ್ರ’ ಭೋರ್ಗರೆಯಿತು. ಪ್ರೇಕ್ಷಕರ ಗ್ಯಾಲರಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಪಾಲಿಗೆ ಸುಗ್ಗಿ ಕುಣಿತದ ವೇದಿಕೆಯಾಯಿತು. ಅವರ ಈ ಸಂಭ್ರಮಕ್ಕೆ ಕಾರಣವಾಗಿದ್ದು ವೇಗಿ ಜೋಶ್ ಹೇಜಲ್‌ವುಡ್. ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಜೋಶ್ ಅವರ ಅಮೋಘ ಬೌಲಿಂಗ್ (4–0–33–4) ಬಲದಿಂದ ಅರ್‌ಸಿಬಿ ತಂಡವು ತವರಿನಂಗಳದಲ್ಲಿ ಮೊದಲ ಜಯ ಸಾಧಿಸಿತು. 

206 ರನ್‌ಗಳ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕೊನೆಯ 2 ಓವರ್‌ಗಳಲ್ಲಿ 18 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಧ್ರುವ ಜುರೇಲ್  ಉತ್ತಮ ಲಯದಲ್ಲಿದ್ದರು. ಆದರೆ 19ನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ  ಜುರೇಲ್  ಮತ್ತು ಜೋಫ್ರಾ ಆರ್ಚರ್ ವಿಕೆಟ್‌ಗಳನ್ನು ಕಿತ್ತ ಹೇಜಲ್‌ವುಡ್ ಆರ್‌ಸಿಬಿ  ತಂಡದ ಗೆಲುವಿನ ಹಾದಿಯನ್ನು ಸುಗಮ ಗೊಳಿಸಿದರು. ಕೊನೆ ಓವರ್‌ನಲ್ಲಿ ಯಶ್ ದಯಾಳ್ ಕೂಡ ಜವಾಬ್ದಾರಿಯುತ ಬೌಲಿಂಗ್ ಮಾಡಿದರು. ಅದರಿಂದಾಗಿ ಆರ್‌ಸಿಬಿ 11 ರನ್‌ಗಳ ರೋಚಕ ಗೆಲುವು ದಾಖಲಿಸಿತು. 

ಪ್ರಸಕ್ತ ಟೂರ್ನಿಯಲ್ಲಿ ರಜತ್ ಪಾಟೀದಾರ್ ಬಳಗವು ಇಲ್ಲಿ ಆಡಿದ್ದ 3 ಪಂದ್ಯಗಳಲ್ಲಿಯೂ ಸೋತಿತ್ತು. ಆದರೆ ತವರಿನಾಚೆ ಆಡಿದ್ದ ಎಲ್ಲ ಪಂದ್ಯಗಳನ್ನು ಗೆದ್ದಿತ್ತು.  

ADVERTISEMENT

ರಾಜಸ್ಥಾನ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಅವರ ಚೆಂದದ ಅರ್ಧ ಶತಕಗಳ ಬಲದಿಂದ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 205 ರನ್ ಗಳಿಸಿತು. ಅದಕ್ಕುತ್ತರವಾಗಿ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 9ಕ್ಕೆ194 ರನ್ ಗಳಿಸಿತು. ಕೊನೆಯ ಹಂತದಲ್ಲಿ ರಾಜಸ್ಥಾನ 29 ರನ್‌ಗಳ ಅಂತರದಲ್ಲಿ ಐದು ವಿಕೆಟ್‌ ಕಳೆದುಕೊಂಡಿತು.

ಗುರಿ ಬೆನ್ನಟ್ಟಿದ್ದ ಪ್ರವಾಸಿ ಬಳಗಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (49; 19ಎ) ಮತ್ತು 14ರ ಪೋರ ವೈಭವ್ ಸೂರ್ಯವಂಶಿ (16; 12ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 52 ರನ್‌ ಸೇರಿಸಿದರು.  ವೇಗಿ ಭುವನೇಶ್ವರ್ ಕುಮಾರ್ ಅವರು ಸೂರ್ಯವಂಶಿ ಅವರನ್ನು ಬೌಲ್ಡ್ ಮಾಡುವ ಮೂಲಕ ಜೊತೆಯಾಟ ಮುರಿದರು. ಯಶಸ್ವಿ ಔಟಾದ ನಂತರವೂ ನಿತೀಶ್ ರಾಣಾ (28; 22ಎ) ಹಾಗೂ ರಿಯಾನ್ ಪರಾಗ್ (22 10ಎ) ತಮ್ಮ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟರು. 

ತಂಡವು  9 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ  110 ರನ್‌ ಪೇರಿಸಿತ್ತು. ಈ ಹಂತದಲ್ಲಿ ಆರ್‌ಸಿಬಿಯಿಂದ ಗೆಲುವು ಕೈಜಾರಿದಂತೆ ಕಾಣುತ್ತಿತ್ತು. ಅದರೆ, ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ ಅವರು  ಪರಾಗ್ ಮತ್ತು ರಾಣಾ ವಿಕೆಟ್ ಕಬಳಿಸಿ ಆರ್‌ಸಿಬಿ ಬಳಗದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರಿಸಿದರು.  ಆದರೆ ಜುರೇಲ್ (47; 34ಎ) ಮತ್ತು ಹೆಟ್ಮೆಯರ್ (11; 8ಎ) ರಾಯಲ್ಸ್ ಬಳಗದ ಭರವಸೆಯಾಗಿದ್ದರು. ಅವರ ಆತಂಕವನ್ನು ಹೇಜಲ್‌ವುಡ್ ದೂರಗೊಳಿಸಿದರು.

ಕೊಹ್ಲಿ–ಪಡಿಕ್ಕಲ್ ಜೊತೆಯಾಟ: ಈ ಸಲದ ಐಪಿಎಲ್‌ನಲ್ಲಿ ಐದನೇ ಅರ್ಧಶತಕ ಗಳಿಸಿದ ವಿರಾಟ್ (70; 42ಎ, 4X8, 6X2) ಮತ್ತು ಪಡಿಕ್ಕಲ್ (50; 27ಎ, 4X4, 6X3) ಅವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ 95 ರನ್‌ ಸೇರಿಸಿದರು.   ಫಜಲ್ ಹಕ್ ಫಾರೂಕಿ ಹಾಕಿದ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಫಿಲ್ ಸಾಲ್ಟ್ ಅವರ  ಕ್ಯಾಚ್ ಪಡೆಯುವಲ್ಲಿ ಮಿಡ್‌ಆಫ್‌ ನಲ್ಲಿದ್ದ ಪರಾಗ್ ವಿಫಲರಾದರು. ಇದರ ಲಾಭ ಪಡೆದ ಸಾಲ್ಟ್‌ (26; 23ಎ) ವಿರಾಟ್ ಜೊತೆ ಸೇರಿ ಮೊದಲ ವಿಕೆಟ್ ಜೊತೆಯಾಟದಲ್ಲಿ  61  ರನ್ ಸೇರಿಸಿದರು.  ಪವರ್‌ಪ್ಲೇ ನಂತರದ ಬೌಲಿಂಗ್ ಮಾಡಿದ ಸ್ಪಿನ್ನರ್ ವನಿಂದು ಹಸರಂಗ ಅವರು ಸಾಲ್ಟ್‌ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. 

 ಕ್ರೀಸ್‌ಗೆ ಬಂದ ದೇವದತ್ತ ಜೊತೆಗೆ ವಿರಾಟ್ ಚೆಂದದ ಇನಿಂಗ್ಸ್‌ ಕಟ್ಟಿದರು. ಯಾವುದೇ ಅವಸರ ಅಥವಾ ಅಬ್ಬರದ ಆಟವಾಡದಿದ್ದರೂ ಮೊತ್ತ ಏರುವಂತೆ ನೋಡಿಕೊಂಡರು. ವಿರಾಟ್ 32 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಅದರಲ್ಲಿ 8 ಬೌಂಡರಿಗಳಿದ್ದವು.

ಇನಿಂಗ್ಸ್‌ನ 13 ಓವರ್‌ಗಳಲ್ಲಿ ಒಂದೂ ಸಿಕ್ಸರ್‌ ದಾಖಲಾಗಲಿಲ್ಲ. ಪರಾಗ್ ಹಾಕಿದ 14ನೇ ಓವರ್‌ನ ಮೊದಲ ಎಸೆತವನ್ನು ಲಾಂಗ್‌ ಆಫ್‌ಗೆ ಸಿಕ್ಸರ್ ಎತ್ತಿದ ಎಡಗೈ ಬ್ಯಾಟರ್ ದೇವದತ್ತ ವೇಗದ ಆಟಕ್ಕೆ ಚಾಲನೆ ನೀಡಿದರು. ಅದೇ ಓವರ್‌ನಲ್ಲಿ ವಿರಾಟ್ ಕೂಡ ಒಂದು ಸಿಕ್ಸರ್ ಹೊಡೆದರು. 

ದೇವದತ್ತ ತಮಗೆ ಲಭಿಸಿದ ಎರಡು ಜೀವದಾನಗಳನ್ನು ಸಮರ್ಥವಾಗಿ ಬಳಸಿಕೊಂಡರು.  ಅವರು 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದರಲ್ಲಿ ಒಟ್ಟು 3 ಸಿಕ್ಸರ್‌ಗಳಿದ್ದವು. ಸಂದೀಪ್ ಶರ್ಮಾ ಬೌಲಿಂಗ್‌ನಲ್ಲಿ ನಿತೀಶ್ ರಾಣಾ ಪಡೆದ ‘ಜಗ್ಲಿಂಗ್‌ ಕ್ಯಾಚ್‌’ ನಿಂದಾಗಿ ದೇವದತ್ತ ಆಟಕ್ಕೆ ತೆರೆಬಿತ್ತು. 

ರಾಯಲ್ ಚಾಲೆಂಜರ್ಸ್ ಬೆಂಗಳೂರು: 5 ವಿಕೆಟ್‌ಗೆ 205 (20 ಓವರುಗಳಲ್ಲಿ)

ಸಾಲ್ಟ್‌ ಸಿ ಹೆಟ್ಮೆಯರ್ ಬಿ ಹಸರಂಗ 26 (23ಎ, 4x4)

ಕೊಹ್ಲಿ ಸಿ ರಾಣಾ ಬಿ ಆರ್ಚರ್ 70 (42ಎ, 4x8, 6x2)

ಪಡಿಕ್ಕಲ್‌ ಸಿ ರಾಣಾ ಬಿ ಶರ್ಮಾ 50 (27ಎ, 4x4, 6x3)

ಡೇವಿಡ್‌ ರನೌಟ್‌ (ಹೆಟ್ಮೆಯರ್‌/ಜುರೆಲ್‌) 23 (15ಎ, 4x2, 6x1)

ಪಾಟೀದಾರ್ ಸಿ ಜುರೇಲ್‌ ಬಿ ಶರ್ಮಾ 1 (3ಎ)

ಜಿತೇಶ್ ಔಟಾಗದೇ 20 (10ಎ, 4x4)

ಇತರೆ: ‌15 (ಲೆಗ್‌ಬೈ 1, ವೈಡ್‌ 14)

‌ವಿಕೆಟ್ ಪತನ: 1–61 (ಫಿಲ್‌ ಸಾಲ್ಟ್‌, 6.4), 2–156 (ವಿರಾಟ್ ಕೊಹ್ಲಿ, 15.1), 3–161 (ದೇವದತ್ತ ಪಡಿಕ್ಕಲ್‌, 16.1), 4–163 (ರಜತ್ ಪಾಟೀದಾರ್, 16.5), 5–205 (ಟಿಮ್ ಡೇವಿಡ್‌, 19.6).

ಬೌಲಿಂಗ್‌: ಜೋಫ್ರಾ ಆರ್ಚರ್ 4–0–33–1; ಫಜಲ್ ಹಕ್‌ ಫಾರೂಕಿ 3–0–30–0; ತುಷಾರ್ ದೇಶಪಾಂಡೆ 2–0–36–0; ಸಂದೀಪ್‌ ಶರ್ಮಾ 4–0–45–2; ವನಿಂದು ಹಸರಂಗ 4–0–30–1; ರಿಯಾನ್ ಪರಾಗ್ 3–0–30–0.

ರಾಜಸ್ಥಾನ ರಾಯಲ್ಸ್‌: 9ಕ್ಕೆ 194 (20 ಓವರ್‌ಗಳಲ್ಲಿ)

ಜೈಸ್ವಾಲ್‌ ಸಿ ಶೆಫರ್ಡ್‌ ಬಿ ಹೇಜಲ್‌ವುಡ್‌ 49 (19ಎ, 4x7, 6x3)

ವೈಭವ್‌ ಬಿ ಭುವನೇಶ್ವರ್‌ 16 (12ಎ, 6x2)

ನಿತೀಶ್‌ ಸಿ ಭುವನೇಶ್ವರ್‌ ಬಿ ಕೃಣಾಲ್‌ 28 (22ಎ, 4x3, 6x1)

ರಿಯಾನ್‌ ಸಿ ಜಿತೇಶ್‌ ಬಿ ಕೃಣಾಲ್‌ 22 (10ಎ, 4x2, 6x2)

ಜುರೇಲ್‌ ಸಿ ಜಿತೇಶ್‌ ಬಿ ಹೇಜಲ್‌ವುಡ್‌ 47 (34ಎ, 4x3, 6x3)

ಹೆಟ್ಮೆಯರ್‌ ಸಿ ಜಿತೇಶ್ ಬಿ ಹೇಜಲ್‌ವುಡ್‌ 11 (8ಎ, 4x1)

ಶುಭಂ ಸಿ ಸಾಲ್ಟ್‌ ಬಿ ದಯಾಳ್‌ 12 (7ಎ, 4x1, 6x1)

ಆರ್ಚರ್‌ ಸಿ ಪಾಟೀದಾರ್‌ ಬಿ ಹೇಜಲ್‌ವುಡ್‌ 0 (1ಎ)

ಹಸರಂಗ ರನೌಟ್‌ (ಡೇವಿಡ್‌/ಜಿತೇಶ್‌) 1 (3ಎ)

ತುಷಾರ್‌ ಔಟಾಗದೇ 1 (2ಎ)

ಫಾರೂಕಿ ಔಟಾಗದೇ 2 (2ಎ)

ಇತರೆ: 5 (ಬೈ 1, ವೈಡ್‌ 4)

ವಿಕೆಟ್ ಪತನ: 1-52 (ವೈಭವ್ ಸೂರ್ಯವಂಶಿ, 4.2), 2-72 (ಯಶಸ್ವಿ ಜೈಸ್ವಾಲ್, 5.5), 3-110 (ಪರಾಗ್, 9.1), 4-134 (ನಿತೀಶ್ ರಾಣಾ, 13.3), 5-162 (ಶಿಮ್ರಾನ್ ಹೆಟ್ಮೆಯರ್, 16.3), 6-189 (ಧ್ರುವ್ ಜುರೇಲ್, 18.3), 7-189 (ಆರ್ಚರ್, 18.4), 8-189 (ಶುಭಂ ದುಬೆ, 19.1), 9–191 (ಹಸರಂಗ)

ಬೌಲಿಂಗ್‌: ಭುವನೇಶ್ವರ್‌ ಕುಮಾರ್ 4–0–50–1, ಯಶ್‌ ದಯಾಳ್‌ 3–0–33–1, ಜೋಶ್‌ ಹೇಜಲ್‌ವುಡ್‌ 4–0–33–4, ರೊಮಾರಿಯೊ ಶೆಫರ್ಡ್‌ 1–0–15–0, ಸುಯಶ್‌ ಶರ್ಮಾ 4–0–31–0, ಕೃಣಾಲ್‌ ಪಾಂಡ್ಯ 4–0–31–2

ಪಂದ್ಯದ ಆಟಗಾರ: ಹೇಜಲ್‌ವುಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.