ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್
(ಪಿಟಿಐ ಚಿತ್ರ)
ಮುಲ್ಲನಪುರ (ಪಂಜಾಬ್): ಅನುಭವಿ ವಿರಾಟ್ ಕೊಹ್ಲಿ ಮಾರ್ಗದರ್ಶನದಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಆಟ ಆರಳಿತು. ಇವರಿಬ್ಬರ ಅರ್ಧ ಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಆ ಮೂಲಕ ತವರಿನಿಂದಾಚೆಗಿನ ಪಂದ್ಯಗಳಲ್ಲಿ ದಿಗ್ವಿಜಯ ಮುಂದುವರಿಸಿತು.
ಎರಡು ದಿನಗಳ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ತಂಡದ ಕೈಲಿ ಅನುಭವಿಸಿದ ಸೋಲಿಗೆ ಮುಯ್ಯಿಯನ್ನೂ ತೀರಿಸಿಕೊಂಡಿತು. ಗೆಲುವಿಗೆ 158 ರನ್‌ಗಳ ಗುರಿ ಎದುರಿಸಿದ್ದ ಬೆಂಗಳೂರಿನ ತಂಡ ಪ್ರಯಾಸವಿಲ್ಲದೇ 18.5 ಓವರುಗಳಲ್ಲಿ 3 ವಿಕೆಟ್‌ಗೆ 159 ರನ್ ಬಾರಿಸಿ ಸಂಭ್ರಮಿಸಿತು. ಅಂಕಪಟ್ಟಿಯಲ್ಲಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಿತು.
ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದ ಎಡಗೈ ಬ್ಯಾಟರ್ ಪಡಿಕ್ಕಲ್ (61, 35ಎ) ಸೊಗಸಾದ ಆಟವಾಡಿ ಐಪಿಎಲ್‌ನಲ್ಲಿ ಮೊದಲ ಅರ್ಧ ಶತಕ ದಾಖಲಿಸಿದರು. ‘ಚೇಸ್ ಮಾಸ್ಟರ್’ ಕೊಹ್ಲಿ 54 ಎಸೆತಗಳಲ್ಲಿ 73 ರನ್ ಬಾರಿಸಿ ಅಜೇಯರಾಗುಳಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 103 ರನ್ ಸೇರಿಸಿದರು.
ಇಬ್ಬರೂ ಸಾಹಸಗಳಿಗೆ ಹೋಗದೇ ಸಾಂಪ್ರದಾಯಿಕ ಹೊಡೆತಗಳನ್ನು ಆಡಿದರು. ವೇಗಿಗಳ ಜೊತೆಗೆ ಸ್ಪಿನ್ನರ್‌ಗಳನ್ನೂ ವಿಶ್ವಾಸದಿಂದ ಎದುರಿಸಿದರು. ಎಡಗೈ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ಬೌಲಿಂಗ್‌ನಲ್ಲಿ ತಮ್ಮ ಐದನೇ ಸಿಕ್ಸರ್ ಬಾರಿಸುವ ಯತ್ನದಲ್ಲಿ ಪಡಿಕ್ಕಲ್ ಲಾಂಗ್‌ಆನ್‌ನಲ್ಲಿ ಕ್ಯಾಚಿತ್ತರು. ಅಷ್ಟರಲ್ಲಿ ಆರ್‌ಸಿಬಿ ಗೆಲುವು ಖಚಿತವಾಗಿತ್ತು.
ಈ ಆವೃತ್ತಿಯಲ್ಲಿ ನಾಲ್ಕನೇ ಅರ್ಧಶತಕವನ್ನು ದಾಟಿದ ಮೇಲೆ ಕೊಹ್ಲಿ ಆಕ್ರಮಣಕಾರಿಯಾದರು. ಯಜುವೇಂದ್ರ ಚಾಹಲ್ ಬೌಲಿಂಗ್‌ನಲ್ಲಿ ಎತ್ತಿದ ನೇರ ಸಿಕ್ಸರ್ ಅವರ ಅತ್ಯುತ್ತಮ ಹೊಡೆತವೆನಿಸಿತು.
ಮಿಂಚಿದ ಸ್ಪಿನ್ನರ್‌ಗಳು:
ಇದಕ್ಕೆ ಮೊದಲು, ಆರ್‌ಸಿಬಿ ಸ್ಪಿನ್ನರ್‌ಗಳಾದ ಕೃಣಾಲ್ ಪಾಂಡ್ಯ (25ಕ್ಕೆ2) ಮತ್ತು ಸುಯಶ್ ಶರ್ಮಾ (27ಕ್ಕೆ2) ಅವರು ಕಿಂಗ್ಸ್ ತಂಡವನ್ನು 20 ಓವರುಗಳಲ್ಲಿ 6 ವಿಕೆಟ್‌ಗೆ 157 ರನ್‌ಗಳಿಗೆ ಕಟ್ಟಿಹಾಕಲು ನೆರವಾಗಿದ್ದರು. ಆರ್‌ಸಿಬಿ ಟಾಸ್ ಗೆದ್ದು ನಿರೀಕ್ಷೆಯಂತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಪ್ರಿಯಾಂಶ್ ಆರ್ಯ (22) ಮತ್ತು ಪ್ರಭಸಿಮ್ರನ್ ಸಿಂಗ್ (33) ಅವರು ಕೇವಲ 4.2 ಓವರುಗಳಲ್ಲಿ 42 ರನ್ ಸೇರಿಸಿ ಪಂಜಾಬ್‌ಗೆ ಬಿರುಸಿನ ಆರಂಭ ಒದಗಿಸಿದ್ದರು. ಕೃಣಾಲ್ ಅವರನ್ನು ಐದನೇ ಓವರಿನಲ್ಲಿ ದಾಳಿಗಿಳಿಸುವ ಪಾಟೀದಾರ್ ನಿರ್ಧಾರ ತಕ್ಷಣವೇ ಫಲ ನೀಡಿತು. ಪಾಂಡ್ಯ ಎರಡನೇ ಎಸೆತದಲ್ಲೇ ಆರ್ಯ ವಿಕೆಟ್ ಪಡೆದರು. ಇದರೊಂದಿಗೆ ಪಂಜಾಬ್ ಇನಿಂಗ್ಸ್ ಹಳಿತಪ್ಪಿತು. 14 ರನ್‌ಗಳ ಅಂತರದಲ್ಲಿ 3 ವಿಕೆಟ್‌ಗಳು ಬಿದ್ದವು.
ನಾಯಕ ಶ್ರೇಯಸ್ ಅಯ್ಯರ್ (6) ಮತೊಮ್ಮೆ ನಿರಾಸೆ ಮೂಡಿಸಿದರು. ನೇಹಲ್ ವಧೇರಾ (5) ಅವರ ರನ್‌ಔಟ್ ಆತಿಥೇಯರ ಬೇಗುದಿ ಹೆಚ್ಚಿಸಿತು. ಸುಯಶ್ ಒಂದೇ ಓವರಿನಲ್ಲಿ (14ನೇ ಓವರ್) ಇಂಗ್ಲಿಸ್ ಮತ್ತು ಸ್ಟೊಯಿನಿಸ್ ವಿಕೆಟ್ ಪಡೆದಿದ್ದರಿಂದ ಆರ್‌ಸಿಬಿ ಮೇಲುಗೈ ಸಾಧಿಸಿತು.
ಶಶಾಂಕ್ ಸಿಂಗ್ (ಔಟಾಗದೇ 31, 33ಎ) ಮತ್ತು ಮಾರ್ಕೊ ಯಾನ್ಸೆನ್ (ಔಟಾಗದೇ 25) ಅವರು ತಂಡದ ಮೊತ್ತ 150ರ ಗಡಿ ದಾಟಿಸಿದರು.
ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್...
2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಭಾನುವಾರ) ನಡೆಯುತ್ತಿರುವ ಮೊದಲು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.
ಈ ಪಂದ್ಯವು ಚಂಡೀಗಢದಲ್ಲಿ ನಡೆಯುತ್ತಿದೆ. ಉಭಯ ತಂಡಗಳು ಒಂದೇ ದಿನದ ಅಂತರದಲ್ಲಿ ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ.
ಟಾಸ್ ಗೆದ್ದಿರುವ ಆರ್‌ಸಿಬಿ ತಂಡದ ನಾಯಕ ರಜತ್ ಪಾಡೀದಾರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಸೋತಿದೆ. ಆದರೆ ತವರಿನಾಚೆಯ ತಾಣಗಳಲ್ಲಿ ಆಡಿದ ಎಲ್ಲ ನಾಲ್ಕು ಪಂದ್ಯಗಳಲ್ಲಿಯೂ ಜಯಭೇರಿ ಬಾರಿಸಿದೆ. ಈಗ ಎವೇ ಪಂದ್ಯಗಳಲ್ಲಿ ಸತತ ಐದನೇ ಗೆಲುವು ದಾಖಲಿಸುವ ಇರಾದೆಯಲ್ಲಿದೆ.
ಶುಕ್ರವಾರ ರಾತ್ರಿ ಇದೇ ಕಿಂಗ್ಸ್ ತಂಡವು ಆರ್‌ಸಿಬಿಯನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು. ಈಗ ಆರ್‌ಸಿಬಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಏಳು ಪಂದ್ಯಗಳಲ್ಲಿ ಐದು ಗೆಲುವು ದಾಖಲಿಸಿರುವ ಪಂಜಾಬ್, 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ಆರ್‌ಸಿಬಿ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವಿನೊಂದಿಗೆ ಎಂಟು ಅಂಕ ಸಂಪಾದಿಸಿದ್ದು, ಐದನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.