ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ಲಖನೌ: ಎಡಗೈ ಬ್ಯಾಟರ್ ಇಶಾನ್ ಕಿಶನ್ ಮತ್ತು ಶ್ರೀಲಂಕಾದ ವೇಗಿ ಇಶಾನ್ ಮಾಲಿಂಗ ಅವರ ಅಮೋಘ ಆಟದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಜಯಭೇರಿ ಬಾರಿಸಿತು.
ಶುಕ್ರವಾರ ಇಲ್ಲಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ 42 ರನ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯಿಸಿತು. ಈ ಸಲದ ಟೂರ್ನಿಯಲ್ಲಿ ಆರ್‌ಸಿಬಿಯು ತವರಿನಾಚೆಯ ತಾಣದಲ್ಲಿ ಸೋತ ಮೊದಲ ಪಂದ್ಯ ಇದಾಗಿದೆ.
ಈ ಪಂದ್ಯದಲ್ಲಿ ಜಯಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಛಲದಲ್ಲಿದ್ದ ಆರ್‌ಸಿಬಿಗೆ ಕೊಂಚ ಹಿನ್ನಡೆ ಯಾದಂತಾಗಿದೆ. ಈಗಾಗಲೇ ಪ್ಲೇ ಆಫ್ ಅರ್ಹತೆ ಗಿಟ್ಟಿಸಿರುವ ಬೆಂಗಳೂರು ತಂಡಕ್ಕೆ ಇನ್ನೊಂದು ಪಂದ್ಯ ಮಾತ್ರ ಬಾಕಿ ಇದೆ.
ಸನ್‌ರೈಸರ್ಸ್ ಎದುರು 232 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆರ್‌ಸಿಬಿಗೆ ಫಿಲ್ ಸಾಲ್ಟ್ (62; 32ಎ, 4X4, 6X5) ಮತ್ತು ವಿರಾಟ್ ಕೊಹ್ಲಿ (43; 25ಎ, 4X7, 6X1) ಅಮೋಘ ಆರಂಭ ನೀಡಿದರು. ಇವರಿಬ್ಬರೂ ಸೇರಿ ಮೊದಲ ವಿಕೆಟ್ ಜೊತೆಯಾಟದಲ್ಲಿ 80 ರನ್ (7 ಓವರ್) ಸೇರಿಸಿದರು. ಅರ್ಧಶತಕದತ್ತ ಸಾಗಿದ್ದ ಕೊಹ್ಲಿ ವಿಕೆಟ್ ಗಳಿಸಿದ ಹರ್ಷ ದುಬೆ ಸಂಭ್ರಮಿಸಿದರು. ಆದರೆ, ಸಾಲ್ಟ್ ಭರವಸೆಯ ಆಟ ಮುಂದುವರಿಸಿದರು. ಅವರೊಂದಿಗೆ ಮಯಂಕ್ ಅಗರವಾಲ್ (11; 10ಎ) ಸ್ವಲ್ಪ ಹೊತ್ತು ಹೋರಾಟ ನಡೆಸಿದರು. ಆದರೆ ಮಯಂಕ್ ವಿಕೆಟ್ ಗಳಿಸಿದ ನಿತೀಶ್ ರೆಡ್ಡಿ ಜೊತೆಯಾಟ ಮುರಿದರು.
12ನೇ ಓವರ್‌ನಲ್ಲಿ ಸಾಲ್ಟ್ ವಿಕೆಟ್ ಪಡೆದ ಪ್ಯಾಟ್ ಕಮಿನ್ಸ್ ತಮ್ಮ ತಂಡದತ್ತ ಗೆಲುವು ವಾಲುವಂತೆ ಮಾಡಿದರು.
ಇದರ ನಂತರ 60 ರನ್‌ಗಳ ಅಂತರದಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಲ್ಲಿ ಇಶಾನ್ ಮಾಲಿಂಗ ಅವರದ್ದು ಸಿಂಹಪಾಲು. ‘ಇಂಪ್ಯಾಕ್ಟ್ ಆಟಗಾರ’ನಾಗಿ ಬಂದ ರಜತ್ ಪಾಟೀದಾರ್ (18 ರನ್) ಮತ್ತು ರೊಮೆರಿಯೊ ಶೆಫರ್ಡ್ ಅವರಿಬ್ಬರನ್ನೂ ಹೆಡೆಮುರಿ ಕಟ್ಟಿದ ಮಾಲಿಂಗ ಸನ್‌ರೈಸರ್ಸ್ ಗೆಲುವಿನ ಕನಸಿಗೆ ಮತ್ತಷ್ಟು ಬಲ ತುಂಬಿದರು. ಇನ್ನೊಂದೆಡೆ ಹೋರಾಟ ಮಾಡುತ್ತಿದ್ದ ಹಂಗಾಮಿ ನಾಯಕ ಜಿತೇಶ್ ಶರ್ಮಾ (24 ರನ್) ಅವರಿಗೆ ಜಯದೇವ್ ಉನದ್ಕತ್ ಪೆವಿಲಿಯನ್ ದಾರಿ ತೋರಿಸಿದರು. ಆರ್‌ಸಿಬಿಯು 19.5 ಓವರ್‌ಗಳಲ್ಲಿ 189 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.
ಇಶಾನ್ ಅಬ್ಬರ: ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇಶಾನ್ (ಅಜೇಯ 94; 48ಎ) ಅವರ ಬೀಸಾಟದ ಬಲದಿಂದ ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ಗಳಿಗೆ 231 ರನ್ ಗಳಿಸಿತು.
ಈಗಾಗಲೇ ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿರುವ ಸನ್‌ರೈಸರ್ಸ್ ತಂಡಕ್ಕೆ ಈ ಪಂದ್ಯದಲ್ಲಿ ಉತ್ತಮ ಆರಂಭ ದೊರೆಯಿತು. ಅಭಿಷೇಕ್ ಶರ್ಮಾ (34; 17ಎ, 4X3, 6X3) ಮತ್ತು ಟ್ರಾವಿಸ್ ಹೆಡ್ (17; 10ಎ, 4X3) ಅವರು ಪಟಪಟನೆ ರನ್ ಗಳಿಸಿದರು. ನಾಲ್ಕೇ ಓವರ್‌ಗಳಲ್ಲಿ ತಂಡವು ಅರ್ಧಶತಕದ ಗಡಿ ದಾಟಿತು.
ಲುಂಗಿ ಎನ್‌ಗಿಡಿ ಎಸೆತವೊಂದನ್ನು ಫ್ಲಿಕ್ ಮೂಲಕ ಸಿಕ್ಸರ್‌ಗೆತ್ತಲು ಅಭಿಷೇಕ್ ಮಾಡಿದ ಪ್ರಯತ್ನ ವಿಫಲವಾಯಿತು. ಬೌಂಡರಿ ಲೈನ್‌ನಲ್ಲಿದ್ದ ಫಿಲ್ ಸಾಲ್ಟ್ ಅಮೋಘವಾಗಿ ಪಡೆದ ಕ್ಯಾಚ್‌ಗೆ ಶರ್ಮಾ ಆಟಕ್ಕೆ ತೆರೆಬಿತ್ತು. ನಂತರದ ಓವರ್‌ನಲ್ಲಿ ಹೆಡ್ ವಿಕೆಟ್ ಗಳಿಸಿದ ಭುವನೇಶ್ವರ್ ಕುಮಾರ್ ಸಂಭ್ರಮಿಸಿದರು. ಆದರೆ ಅದೇ ಓವರ್‌ನಲ್ಲಿ ಇಶಾನ್ ಕೈಗವಸಿಗೆ ಸವರಿ ಹಿಂದೆ ಸಾಗಿದ ಚೆಂಡನ್ನು ಹಿಡಿತಕ್ಕೆ ಪಡೆಯುವ ಪ್ರಯತ್ನ ಮಾಡಿದ ಜಿತೇಶ್ ಸಫಲರಾಗಲಿಲ್ಲ. ಇದು ಆರ್‌ಸಿಬಿಗೆ ದುಬಾರಿಯಾಯಿತು.
ಟೂರ್ನಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಇಶಾನ್ ಮತ್ತೆ ಅಂತಹದೇ ಆಟವನ್ನು ತೋರಿಸಿದರು. 22 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಇನ್ನೊಂದು ಬದಿಯಲ್ಲಿ ಹೆನ್ರಿಚ್ ಕ್ಲಾಸೆನ್ (24; 13ಎ) ಮತ್ತು ಅನಿಕೇತ್ ವರ್ಮಾ (26; 9ಎ) ಅವರು ತಮ್ಮ ಕಾಣಿಕೆ ನೀಡಿ ನಿರ್ಗಮಿಸಿದರು. ಉಳಿದ ಬ್ಯಾಟರ್‌ಗಳೂ ದೊಡ್ಡ ಇನಿಂಗ್ಸ್ ಆಡಲಿಲ್ಲ.
ಸಂಕ್ಷಿಪ್ತ ಸ್ಕೋರ್
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 6ಕ್ಕೆ231 (ಅಭಿಷೇಕ್ ಶರ್ಮಾ 34, ಟ್ರಾವಿಸ್ ಹೆಡ್ 17, ಇಶಾನ್ ಕಿಶನ್ ಔಟಾಗದೇ 94, ಹೆನ್ರಿಚ್ ಕ್ಲಾಸನ್ 24, ಅನಿಕೇತ್ ವರ್ಮಾ 26, ಪ್ಯಾಟ್ ಕಮಿನ್ಸ್ ಔಟಾಗದೇ 13, ರೊಮೆರಿಯೊ ಶೆಫರ್ಡ್ 14ಕ್ಕೆ2)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 19.5 ಓವರ್‌ಗಳಲ್ಲಿ 189 (ಫಿಲಿಪ್ ಸಾಲ್ಟ್ 62, ವಿರಾಟ್ ಕೊಹ್ಲಿ 43, ರಜತ್ ಪಾಟೀದಾರ್ 18, ಜಿತೇಶ್ ಶರ್ಮಾ 24, ಪ್ಯಾಟ್ ಕಮಿನ್ಸ್ 28ಕ್ಕೆ3, ಇಶಾನ್ ಮಾಲಿಂಗ 37ಕ್ಕೆ2)
ಪಂದ್ಯದ ಆಟಗಾರ: ಇಶಾನ್ ಕಿಶನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.