ಹೆನ್ರಿಕ್ ಕ್ಲಾಸೆನ್ ಮತ್ತು ಟ್ರಾವಿಸ್ ಹೆಡ್
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತ ಪೇರಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿದೆ.
ಎಚ್‌ಆರ್‌ಎಚ್ ಪರ ಹೆನ್ರಿಕ್ ಕ್ಲಾಸೆನ್ ಔಟಾಗದೆ ಕೇವಲ 39 ಎಸೆತಗಳಲ್ಲಿ 9 ಸಿಕ್ಸರ್, 7 ಬೌಂಡರಿ ಸಹಿತ ಶತಕ (105) ಸಿಡಿಸಿ ಸಂಭ್ರಮಿಸಿದರು. ಇತ್ತ ಟ್ರಾವಿಸ್ ಹೆಡ್ 40 ಎಸೆತಗಳಲ್ಲಿ 6 ಸಿಕ್ಸರ್, 6 ಬೌಂಡರಿ ಸಹಿತ ಅರ್ಧಶತಕ (76) ಸಿಡಿಸಿದರೆ, ಅಭಿಷೇಕ್ ಶರ್ಮಾ 32, ಇಶಾನ್ ಕಿಶನ್ 29, ಅನಿಕೇತ್ ವರ್ಮಾ ಔಟಾಗದೆ 12 ರನ್ ಗಳಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.
ಕೆಕೆಆರ್ ಪರ ಸುನೀಲ್ ನಾರಾಯಣ್ 2, ವೈಭವ್ ಅರೋರಾ 1 ವಿಕೆಟ್ ಪಡೆದರು.
ಇವೆರಡು ತಂಡಗಳು 2024ರ ಫೈನಲ್‌ನಲ್ಲಿ ಆಡಿದ್ದವು. ಆದರೆ, ಈ ಬಾರಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿವೆ. ಆದರೆ, ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ತಮ್ಮ ಸ್ಥಾನ ಸುಧಾರಿಸಿಕೊಳ್ಳಲು ಇದು ಅವಕಾಶವಾಗಿದೆ.
ಕಳೆದ ಬಾರಿಯ ಫೈನಲ್ ಏಕಪಕ್ಷೀಯವಾಗಿದ್ದು, ಶ್ರೇಯಸ್ ಅಯ್ಯರ್ ಬಳಗ, ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಈ ಬಾರಿ ಗೆದ್ದ ತಂಡ ಆರನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.