ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್
–ಪಿಟಿಐ ಚಿತ್ರ
ಹೈದರಾಬಾದ್: ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಬೃಹತ್ ಮೊತ್ತಗಳನ್ನು ಪೇರಿಸುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕಳೆದ ಕೆಲವು ಪಂದ್ಯಗಳಿಂದ ಮಂಕಾಗಿದೆ. ಭಾನುವಾರ ತನ್ನ ತವರಿನಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಲಯಕ್ಕೆ ಮರಳುವ ಒತ್ತಡದಲ್ಲಿದೆ.
ಸನ್‌ರೈಸರ್ಸ್ ತಂಡವು ಆಡಿದ ಕಳೆದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 190, 163 ಮತ್ತು 120 ರನ್‌ಗಳ ಮೊತ್ತಗಳನ್ನು ಪೇರಿಸಿತ್ತು. ಅಲ್ಲದೇ ಸತತ ಸೋಲುಗಳಿಂದಾಗಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದಿದೆ. ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ 286 ರನ್‌ಗಳ ಮೊತ್ತ ಗಳಿಸಿ ತಂಡವು ಈ ರೀತಿ ಕುಸಿಯುತ್ತಿರುವುದು ನಾಯಕ ಪ್ಯಾಟ್ ಕಮಿನ್ಸ್ ಅವರ ಒತ್ತಡ ಹೆಚ್ಚಿಸಿದೆ.
ತಂಡದ ರನ್ ಯಂತ್ರಗಳಾದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್, ಹೆನ್ರಿಚ್ ಕ್ಲಾಸೆನ್, ಅಭಿನವ್ ಮನೋಹರ್ ಅವರು ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ಅವರು ಲಯಕ್ಕೆ ಮರಳಿದರೆ ಮತ್ತೆ ರನ್ ಹೊಳೆ ಹರಿಯುವುದರಲ್ಲಿ ಅನುಮಾನವೇ ಇಲ್ಲ.
ಆದರೆ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ತಂಡವು ತಾನು ಆಡಿದ ಕಳೆದ ಎರಡೂ ಪಂದ್ಯಗಳಲ್ಲಿ ಅಮೋಘ ಜಯ ಸಾಧಿಸಿದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅದರ ತವರಿನಲ್ಲಿಯೇ ಮಣಿಸಿರುವುದು ಗಿಲ್ ಬಳಗದ ಆತ್ಮವಿಶ್ವಾಸವನ್ನು ವೃದ್ದಿಸಿದೆ. ತಂಡದ ವೇಗಿ ಮೊಹಮ್ಮದ್ ಸಿರಾಜ್, ಕನ್ನಡಿಗ ಪ್ರಸಿದ್ಧ ಕೃಷ್ಣ, ಸ್ಪಿನ್ನರ್ ರಶೀದ್ ಖಾನ್, ಮೊಹಮ್ಮದ್ ಅರ್ಷದ್ ಖಾನ್ ಅವರು ಉತ್ತಮ ಲಯದಲ್ಲಿದ್ದಾರೆ.
ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಚೆಂದದ ಬ್ಯಾಟಿಂಗ್ ಮಾಡಿದ್ದ ಜೋಸ್ ಬಟ್ಲರ್ ಲಯಕ್ಕೆ ಮರಳಿದ್ದರು. ಅವರೊಂದಿಗೆ ಗಿಲ್, ಬಿ. ಸಾಯಿ ಸುದರ್ಶನ್, ಶಾರೂಕ್ ಖಾನ್ ಮತ್ತು ರಾಹುಲ್ ತೆವಾಟಿಯಾ ಕೂಡ ರನ್ ಹೊಳೆ ಹರಿಸಬಲ್ಲ ಸಮರ್ಥರಾಗಿದ್ದಾರೆ. ಎದುರಾಳಿ ತಂಡದ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಬಲ್ಲ ಬ್ಯಾಟರ್‌ಗಳು ಇವರಾಗಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.