ವೈಭವ್ ಸೂರ್ಯವಂಶಿ
(ರಾಯಿಟರ್ಸ್ ಚಿತ್ರ)
ಜೈಪುರ: 14 ವರ್ಷದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕದ (101) ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಸೋಮವಾರ ಪಿಂಕ್ ಸಿಟಿಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ನಾಯಕ ಶುಭಮನ್ ಗಿಲ್ (84), ಜೋಸ್ ಬಟ್ಲರ್ (50*) ಹಾಗೂ ಸಾಯಿ ಸುದರ್ಶನ್ (39) ಬಿರುಸಿನ ಆಟದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 209 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ 14ರ ಪೋರನ ನಿರ್ಭೀತಿಯ ಬ್ಯಾಟಿಂಗ್ ಎದುರು ಟೈಟನ್ಸ್ ಬೌಲರ್‌ಗಳು ಬೆಚ್ಚಿದರು. ಅಲ್ಲದೆ ರಾಜಸ್ಥಾನ ತಂಡವು 15.5 ಓವರ್‌ಗಳಲ್ಲೇ ಗುರಿ ಮುಟ್ಟಿತು.
38 ಎಸೆತಗಳನ್ನು ಎದುರಿಸಿದ ವೈಭವ್, 11 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಅಬ್ಬರಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಯಶಸ್ವಿ ಜೈಸ್ವಾಲ್ 70 ರನ್ ಗಳಿಸಿ ಅಜೇಯರಾಗುಳಿದರು.
ಇದರೊಂದಿಗೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಜಸ್ಥಾನ ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿತು. ಈ ಪಂದ್ಯದಲ್ಲಿ ವೈಭವ್ ಹಾಗೂ ರಾಜಸ್ಥಾನ ತಂಡವು ಹಲವು ದಾಖಲೆಯನ್ನು ಪುಡಿಗಟ್ಟಿತು. ಈ ಬಗ್ಗೆ ವಿವರ ಇಲ್ಲಿದೆ...
ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತಿ ಕಿರಿಯ ಬ್ಯಾಟರ್...
ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ವೈಭವ್, ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಗಳಿಸಿದರು. ಅಲ್ಲದೆ ಐಪಿಎಲ್ ಸೇರಿದಂತೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಶತಕ ಗಳಿಸಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 14 ವರ್ಷ 32ನೇ ದಿನದಲ್ಲಿ ವೈಭವ್ ಈ ಸಾಧನೆ ಮಾಡಿದ್ದಾರೆ.
ಐಪಿಎಲ್‌ನ 2ನೇ ವೇಗದ ಶತಕ...
ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಆ ಮೂಲಕ ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಸ್ ಗೇಲ್ ಸಾಲಿಗೆ ಸೇರಿದ ವೈಭಲ್ ಐಪಿಎಲ್ ಇತಿಹಾಸದಲ್ಲೇ ಎರಡನೇ ಅತಿ ವೇಗದ ಶತಕ ಸಿಡಿಸಿದರು. ಅಲ್ಲದೆ ಐಪಿಎಲ್‌ನಲ್ಲಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿದ್ದಾರೆ.
2013ರಲ್ಲಿ ಆರ್‌ಸಿಬಿ ಪ್ರತಿನಿಧಿಸಿದ್ದ ಗೇಲ್, ಪುಣೆ ವಾರಿಯರ್ಸ್ ವಿರುದ್ಧ 30 ಎಸೆತಗಳಲ್ಲಿ ಶತಕ ಗಳಿಸಿರುವುದು ಐಪಿಎಲ್‌ನ ವೇಗದ ಶತಕವಾಗಿದೆ.
ವೇಗದಲ್ಲಿ ಗುರಿ ಬೆನ್ನಟ್ಟಿದ ರಾಜಸ್ಥಾನ...
ಗುಜರಾತ್ ನೀಡಿದ 210 ರನ್‌ಗಳ ಗುರಿಯನ್ನು ಲೆಕ್ಕಕ್ಕೆ ಇಲ್ಲದಂತೆ ಚೇಸ್ ಮಾಡಿದ ರಾಜಸ್ಥಾನ 15.5 ಓವರ್‌ಗಳಲ್ಲಿ ಗುರಿ ಬೆನ್ನಟ್ಟಿತು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಅತಿ ಕಡಿಮೆ ಓವರ್‌ಗಳಲ್ಲಿ ಗುರಿ ಮುಟ್ಟಿದ ದಾಖಲೆಯನ್ನು ಬರೆಯಿತು. ರಾಜಸ್ಥಾನ ಗುರಿ ಮುಟ್ಟಿದಾಗ ಇನ್ನೂ 25 ಎಸೆತಗಳು ಬಾಕಿ ಉಳಿದಿತ್ತು ಎಂಬುದು ವೈಭವ್ ಅಬ್ಬರಕ್ಕೆ ಸಾಕ್ಷಿಯಾಗಿತ್ತು.
ಸೂರ್ಯವಂಶಿ 'ವೈಭವ'; 11 ಸಿಕ್ಸರ್, 7 ಬೌಂಡರಿ
ವೈಭವ್ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ, 11 ಸಿಕ್ಸರ್‌ಗಳಿದ್ದವು. ಅಂದರೆ ತಾವು ಗಳಿಸಿದ 101 ರನ್‌ಗಳ ಪೈಕಿ 94 ರನ್‌ಗಳು ಬೌಂಡರಿ ಹಾಗೂ ಸಿಕ್ಸರ್‌ಗಳ ( ಶೇ 93.06) ಮೂಲಕವೇ ಹರಿದು ಬಂದಿತ್ತು. ಇದು ಕೂಡ ದಾಖಲೆಯಾಗಿದೆ.
ಮೊದಲ ವಿಕೆಟ್‌ಗೆ 166 ರನ್ ಜೊತೆಯಾಟ...
ಎಡಗೈ ಸ್ಫೋಟಕ ಆರಂಭಿಕ ಬ್ಯಾಟರ್ ವೈಭವ್, ಜೈಸ್ವಾಲ್ ಜೊತೆ ಸೇರಿಕೊಂಡು ಮೊದಲ ವಿಕೆಟ್‌ಗೆ 11.5 ಓವರ್‌ಗಳಲ್ಲಿ 166 ರನ್‌ಗಳ ಜೊತೆಯಾಟ ಕಟ್ಟಿದರು. ಇದು ಯಾವುದೇ ವಿಕೆಟ್‌ಗೆ ರಾಜಸ್ಥಾನ ಪರ ದಾಖಲಾದ ಗರಿಷ್ಠ ಜೊತೆಯಾಟದ ದಾಖಲೆಯಾಗಿದೆ. 2022ರಲ್ಲಿ ಜೋಸ್ ಬಟ್ಲರ್ ಹಾಗೂ ದೇವದತ್ತ ಪಡಿಕ್ಕಲ್ ಮೊದಲ ವಿಕೆಟ್‌ಗೆ 155 ರನ್ ಪೇರಿಸಿದ್ದರು.
11 ಸಿಕ್ಸರ್, ವೈಭವ್ ದಾಖಲೆ...
ಐಪಿಎಲ್ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಭಾರತೀಯ ಬ್ಯಾಟರ್‌ಗಳ ಸಾಲಿನಲ್ಲಿ ಮುರಳಿ ವಿಜಯ್ ದಾಖಲೆಯನ್ನು ವೈಭವ್ ಸರಿಗಟ್ಟಿದ್ದಾರೆ. 2010ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ವಿಜಯ್, 11 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಪವರ್ ಪ್ಲೇನಲ್ಲಿ ಹರಿದು ಬಂದಿದ್ದು 87 ರನ್...
ಮೊದಲ ಆರು ಓವರ್‌ಗಳ ಅಂತ್ಯಕ್ಕೆ ರಾಜಸ್ಥಾನದ ಸ್ಕೋರ್ 87/0. ಐಪಿಎಲ್ ಪವರ್‌ಪ್ಲೇನಲ್ಲಿ ರಾಜಸ್ಥಾನ ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ. ಅಲ್ಲದೆ 7.4 ಓವರುಗಳಲ್ಲಿ ತಂಡದ ಮೊತ್ತ 100 ಹಾಗೂ 10.2 ಓವರುಗಳಲ್ಲಿ 150ರ ಗಡಿ ದಾಟಿತ್ತು.
ಬಾಲಕನ ಅತ್ಯಮೋಘ ಆಟ...
ತಮ್ಮ 3ನೇ ಐಪಿಎಲ್ ಇನಿಂಗ್ಸ್‌ನಲ್ಲಿ ವೈಭವ್ ಸೂರ್ಯವಂಶಿ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಮೂಲಕ ಈ ಸಾಧನೆ ಮಾಡಿದ ಅತಿ ಕಿರಿಯ ಬ್ಯಾಟರ್ ಎನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.