ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ
ರಾಯಿಟರ್ಸ್ ಚಿತ್ರ
ಚೆನ್ನೈ: ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ತಂಡದ ವೈಫಲ್ಯದ ಕುರಿತು ಮಾತನಾಡಿರುವ ನಾಯಕ ಎಂ.ಎಸ್.ಧೋನಿ, ನಾಲ್ಕೈದು ಆಟಗಾರರು ಒಂದೇ ಸಲ ಲಯ ಕಳೆದುಕೊಂಡರೆ ನಿರೀಕ್ಷಿತ ಫಲಿತಾಂಶ ಕಾಣುವುದು ಕಷ್ಟ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಧೋನಿ ಪಡೆ 5 ವಿಕೆಟ್ ಅಂತರದ ಸೋಲು ಅನುಭವಿಸಿತು. ಇದು, ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ ಈ ತಂಡಕ್ಕೆ ಎದುರಾರ 7ನೇ ಸೋಲು. ತವರಿನಲ್ಲಿ ಸತತ ನಾಲ್ಕನೇ ಮುಖಭಂಗ.
ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 19.5 ಓವರ್‌ಗಳಲ್ಲಿ 154 ರನ್ ಗಳಿಸಿ ಆಲೌಟ್ ಆಗಿತ್ತು. ಈ ಗುರಿ ಬೆನ್ನತ್ತಿದ ರೈಸರ್ಸ್ ಇನ್ನೂ 8 ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ಗೆ 155 ರನ್ ಗಳಿಸಿತು.
ಪಂದ್ಯದ ಬಳಿಕ ಮಾತನಾಡಿರುವ ಧೋನಿ, 'ಇಂತಹ ಟೂರ್ನಿಗಳಲ್ಲಿ ಒಂದು ಅಥವಾ ಎರಡು ವಿಭಾಗಗಳಲ್ಲಿ ದೋಷಗಳಿದ್ದರೆ ಸರಿಪಡಿಸಿಕೊಳ್ಳಬಹುದು. ಆದರೆ, ತಂಡದಲ್ಲಿರುವ ಬಹುತೇಕ ಆಟಗಾರರು ಸರಿಯಾಗಿ ಆಡದಿದ್ದರೆ, ತುಂಬಾ ಕಷ್ಟವಾಗುತ್ತದೆ' ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಆಡುವ ಹನ್ನೊಂದರ ಬಳಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡದ ಚೆನ್ನೈ, ಈ ಬಾರಿ ಆಡಿರುವ 9 ಪಂದ್ಯಗಳಲ್ಲಿ 19 ಆಟಗಾರರನ್ನು ಆಡಿಸಿದೆ. ಈ ಕುರಿತು, ಉತ್ತಮ ಸಂಯೋಜನೆ ಹುಡುಕಬೇಕಿತ್ತು. ಹಾಗಾಗಿ, ಬದಲಾವಣೆ ಮಾಡದೆ ಬೇರೆ ದಾರಿ ಇರಲಿಲ್ಲ ಎಂದಿದ್ದಾರೆ ಧೋನಿ.
'ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಒಂದುವೇಳೆ, ಹೆಚ್ಚಿನವರು ಚೆನ್ನಾಗಿ ಆಡಿದರೆ, ಕೆಲವರಿಗೆ ಹೆಚ್ಚುವರಿ ಅವಕಾಶ ನೀಡಬಹುದು. ಅಂದುಕೊಂಡಂತೆ ಆಗದಿದ್ದರೆ, ಮತ್ತೊಬ್ಬ ಆಟಗಾರನತ್ತ ಮುಖ ಮಾಡಬೇಕಾಗುತ್ತದೆ. ಆದರೆ, ಒಂದೇ ಸಲ ನಾಲ್ಕೈದು ಆಟಗಾರರು ಸರಿಯಾಗಿ ಆಡದಿದ್ದರೆ ಬದಲಾವಣೆಗಳನ್ನು ಮಾಡಲೇಬೇಕಾಗುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಿರುವ ಸಿಎಸ್‌ಕೆ ಬ್ಯಾಟರ್‌ಗಳು, ಪವರ್‌ಪ್ಲೇ ಅವಧಿಯಲ್ಲೂ ರನ್ ಗಳಿಸಲು ಪರದಾಡುತ್ತಿದ್ದಾರೆ.
ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೇ ಸ್ಥಾನ
ಆಡಿರುವ 9 ಪಂದ್ಯಗಳಲ್ಲಿ ಚೆನ್ನೈ ಗೆದ್ದಿರುವುದು ಕೇವಲ 2 ಪಂದ್ಯಗಳಲ್ಲಿ. ಹೀಗಾಗಿ, ಕೇವಲ 4 ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಉಳಿದಿರುವ ಐದೂ ಪಂದ್ಯಗಳಲ್ಲಿ ಜಯ ಸಾಧಿಸಿದರೂ, ಉಳಿದ ಪಂದ್ಯಗಳ ಫಲಿತಾಂಶಗಳು ಚೆನ್ನೈ ತಂಡದ ಪ್ಲೇ ಆಫ್ ಹಾದಿಯನ್ನು ನಿರ್ಧರಿಸಲಿವೆ. ಹೀಗಾಗಿ, ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಸಿಎಸ್‌ಕೆ ಈ ಬಾರಿ, ಪ್ಲೇ ಆಫ್ ತಲುಪುವುದು ಅನುಮಾನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.