ಐಪಿಎಲ್ ಲಾಂಛನ
ಚಿತ್ರ: IPL ವೆಬ್‌ಸೈಟ್
ಮುಂಬೈ: ಅಬುಧಾಬಿಯಲ್ಲಿ ಇದೇ 16ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಬಿಡ್ ಪ್ರಕ್ರಿಯೆಯಲ್ಲಿ 350 ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಲ್ಲಿ 240 ಮಂದಿ ಭಾರತೀಯ ಆಟಗಾರರಿದ್ದಾರೆ.
ಏಕದಿನ ಕ್ರಿಕೆಟ್ ನಿವೃತ್ತಿಯನ್ನು ವಾಪಾಸ್ ಪಡೆದು ಕಣಕ್ಕೆ ಮರಳಿರುವ ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್ ಅವರೂ ಈ ಪಟ್ಟಿಯಲ್ಲಿದ್ದಾರೆ. ಅವರಿಗೆ ಮೂಲಬೆಲೆ ಒಂದು ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಆಸ್ಟ್ರೇಲಿಯಾ ಬ್ಯಾಟರ್ ಸ್ಟೀವ್ ಸ್ಮಿತ್ ಅವರ ಮೂಲಬೆಲೆಯನ್ನೂ ಎರಡು ಕೋಟಿ ರೂಪಾಯಿಗೆ ನಿಗದಿ ಮಾಡಲಾಗಿದೆ. ಸ್ಮಿತ್ ಅವರು 2021ರಲ್ಲಿ ಕೊನೆಯ ಸಲ ಐಪಿಎಲ್ ಆಡಿದ್ದರು.
ಆಟಗಾರರ ಬಿಡ್ ಪ್ರಕ್ರಿಯೆಗೆ 1390 ಆಟಗಾರರು ನೋಂದಾಯಿಸಿದ್ದರು. ನಂತರ ಅದು 1005ಕ್ಕೆ ಇಳಿಯಿತು. ಅಂತಿಮ ಪಟ್ಟಿಯಲ್ಲಿ 350 ಆಟಗಾರರು ಉಳಿದಿದ್ದಾರೆ. ಒಟ್ಟು 10 ತಂಡಗಳು 77 ಸ್ಥಾನಗಳಿಗಾಗಿ ಆಟಗಾರರನ್ನು ಖರೀದಿಸಲಿವೆ.
ಹರಾಜು ಪ್ರಕ್ರಿಯೆಯ ಮೊದಲ ಸೆಟ್‌ನಲ್ಲಿ ಭಾರತದ ಪೃಥ್ವಿ ಶಾ, ಸರ್ಫರಾಜ್ ಖಾನ್ ಅವರು ತಲಾ ₹75 ಲಕ್ಷ ಮೂಲಬೆಲೆಯೊಂದಿಗೆ ಇದ್ದಾರೆ. ಆಸ್ಟ್ರೇಲಿಯಾದ ಕ್ಯಾಮರಾನ್ ಗ್ರೀನ್ ಮತ್ತು ಜೇಕ್ ಫ್ರೆಸರ್ ಮೆಕ್‌ಗರ್ಕ್ ಅವರೂ ಈ ಸಾಲಿನಲ್ಲಿದ್ದಾರೆ. ನ್ಯೂಜಿಲೆಂಡ್‌ನ ಡೆವೊನ್ ಕಾನ್ವೆ, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರು (ಮೂಲಬೆಲೆ ತಲಾ ₹ 2 ಕೋಟಿ) ಕಣದಲ್ಲಿದ್ದಾರೆ. ಈ ಮೊದಲು ಕೋಲ್ಕತ್ತ ನೈಟ್ ರೈಡರ್ಸ್‌ನಲ್ಲಿದ್ದ ವೆಂಕಟೇಶ್ ಅಯ್ಯರ್ (₹ 2 ಕೋಟಿ) ಅವರಿಗೆ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ.
ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ₹ 64.3 ಕೋಟಿ ಪರ್ಸ್ ಮೌಲ್ಯದೊಂದಿಗೆ ಬಿಡ್‌ನಲ್ಲಿ ಭಾಗವಹಿಸುವುದು. ಐದು ಸಲದ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (₹ 43.4 ಕೋಟಿ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (₹ 25.5 ಕೋಟಿ) ನಂತರದ ಸ್ಥಾನಗಳಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.