
ಅಡಿಲೇಡ್: ಅಬುಧಾಬಿಯಲ್ಲಿ ನಿನ್ನೆ(ಡಿ.16) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಆವೃತ್ತಿಯ ಮಿನಿ ಹರಾಜಿನಲ್ಲಿ ₹25.2 ಕೋಟಿ ಬಾಚಿಕೊಂಡಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಆ್ಯಷಸ್ ಪಂದ್ಯದಲ್ಲಿ ಎರಡೇ ಬಾಲಿಗೆ ಡಕ್ ಔಟ್ ಆಗಿದ್ದಾರೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆ್ಯಷಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಗ್ರೀನ್ ಅವರು ಸೊನ್ನೆ ಸುತ್ತಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು 94 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಾಗ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಗ್ರೀನ್, ಜೋಪ್ರಾ ಆರ್ಚರ್ ಎಸೆತದಲ್ಲಿ ಬ್ರೈಡನ್ ಕಾರ್ಸೆಗೆ ಕ್ಯಾಚ್ ನೀಡುವ ಮೂಲಕ ವಿಕೆಟ್ ಒಪ್ಪಿಸಿದರು.
ಆ್ಯಷಸ್ ಸರಣಿಯಲ್ಲಿ 3 ಇನಿಂಗ್ಸ್ ಬ್ಯಾಟಿಂಗ್ ಮಾಡಿರುವ ಗ್ರೀನ್ 69 ರನ್ ಗಳಿಸಿದ್ದಾರೆ. ಸರಣಿಯಲ್ಲಿ 16 ಓವರ್ ಬೌಲಿಂಗ್ ಮಾಡಿದ್ದು, ಕೇವಲ 1 ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾ ತಂಡವು ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರ ಶತಕದ ನೆರವಿನಿಂದ ಮೊದಲ ದಿನದ ಅಂತ್ಯಕ್ಕೆ 83 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ.
ಐಪಿಎಲ್ ಮಿನಿ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಅವರನ್ನು ₹25.2 ಕೋಟಿ ಮೊತ್ತಕ್ಕೆ ಕೆಕೆಆರ್ ತಂಡವು ಖರೀದಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.