ADVERTISEMENT

ಐಪಿಎಲ್‌ ಹರಾಜು ಫೆಬ್ರುವರಿ 11ರಂದು ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 8:26 IST
Last Updated 7 ಜನವರಿ 2021, 8:26 IST
   

ನವದೆಹಲಿ: ಈ ವರ್ಷದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರುವರಿ 11ರಂದು ನಡೆಯುವ ಸಾಧ್ಯತೆಯಿದೆ. ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿ ಸಲ್ಲಿಸುವಂತೆ ಎಂಟು ಫ್ರಾಂಚೈಸ್‌ಗಳಿಗೆ ಐಪಿಎಲ್‌ ಜನವರಿ 20ರ ಗಡುವನ್ನು ನೀಡಿದೆ.

ಕಳೆದ ಸೋಮವಾರ ಆನ್‌ಲೈನ್‌ ಮೂಲಕ ನಡೆದ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ಈ ಎರಡು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. 2021ರ ಆವೃತ್ತಿಗೆ ಇನ್ನೂ ದಿನಾಂಕ ಮತ್ತು ಸ್ಥಳಗಳನ್ನು ನಿಗದಿಪಡಿಸಿಲ್ಲ. ಮುಂದಿನ ಐಪಿಎಲ್‌ ಕೂಡ ಎಂಟು ತಂಡಗಳಿಗೆ ಮಾತ್ರ ಸೀಮಿತ ಎಂದು ಬಿಸಿಸಿಐ ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದೆ.

ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಸ್ಥಳವೂ ನಿಗದಿಯಾಗಿಲ್ಲ. ಆದರೆ ಈ ಪ್ರಕ್ರಿಯೆ ಭಾರತ– ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ಮೊದಲ ಮತ್ತು ಎರಡನೇ ಪಂದ್ಯದ ನಡುವೆ ಇರುವ ಅವಧಿಯಲ್ಲಿ ಆಗುವ ಸಾಧ್ಯತೆಯಿದೆ ಎಂದು ಇಎಸ್‌ಪಿಎನ್‌– ಕ್ರಿಕ್‌ಇನ್ಫೊ ವರದಿ ಮಾಡಿದೆ.

ADVERTISEMENT

ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್‌ ನಡುವೆ ಮೊದಲ ಟೆಸ್ಟ್‌ ಚೆನ್ನೈನಲ್ಲಿ ಫೆಬ್ರುವರಿ 5 ರಿಂದ 9ರವರೆಗೆ ಮೊದಲ ಟೆಸ್ಟ್‌ ನಿಗದಿಯಾಗಿದೆ. ಎರಡನೇ ಟೆಸ್ಟ್‌ ಫೆಬ್ರುವರಿ 13 ರಿಂದ 17ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.