ಕ್ಯಾಮರೂನ್ ಗ್ರೀನ್‌ಗಾಗಿ ಬಿಡ್ ಸಲ್ಲಿಸಿದ ಮುಂಬೈ ಇಂಡಿಯನ್ಸ್
ಕೃಪೆ: @mipaltan
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಬರೋಬ್ಬರಿ ₹ 25.20 ಕೋಟಿಗೆ ಕೋಲ್ಕತ್ತ ನೈಟ್‌ರೈಡರ್ಸ್ ಪಾಲಾಗಿದ್ದಾರೆ.
ಆದರೆ, ಅವರ ಹರಾಜಿನ ವೇಳೆ ನಡೆದ ಪ್ರಸಂಗ ಸಾಮಾಜಿಕ ಮಾಧ್ಯಮಗಳಲ್ಲಿ ಹಾಸ್ಯಕ್ಕೆ ಆಹಾರವಾಗಿದೆ.
ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಪರ್ಸ್‌ನಲ್ಲಿ ಇದ್ದದ್ದು ₹ 2.75 ಕೋಟಿ ಮಾತ್ರ.
ಐಪಿಎಲ್‌ನ ಅಧಿಕೃತ ಪ್ರಸಾರ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್, ಹರಾಜಿಗೂ ಮುನ್ನ ನಡೆಸಿದ್ದ ಅಣಕು ಹರಾಜಿನಲ್ಲೇ ಗ್ರೀನ್ ಅವರಿಗೆ ₹ 30 ಕೋಟಿ ನಿಗದಿಯಾಗಿತ್ತು. ಆದ್ದರಿಂದ, ಅವರು ದುಬಾರಿ ಆಟಗಾರನಾಗುವುದು ಮೊದಲೇ ಖಾತ್ರಿಯಾಗಿತ್ತು. ಅಷ್ಟೇ ಅಲ್ಲ. ಗ್ರೀನ್ ಅವರ ಮೂಲ ಬೆಲೆಯೇ ₹ 2 ಕೋಟಿ. ಆದಾಗ್ಯೂ, ಅವರಿಗಾಗಿ ಮುಂಬೈ ಇಂಡಿಯನ್ಸ್ ಬಿಡ್ ಸಲ್ಲಿಸಿತು.
ಮುಂಬೈ ಪರ ಹಾಜರಾಗಿದ್ದ ಆಕಾಶ್ ಅಂಬಾನಿ ಅವರು, ಗ್ರೀನ್ ಹೆಸರು ಘೋಷಣೆಯಾಗುತ್ತಿದ್ದಂತೆ ಮೂಲ ಬೆಲೆಗೆ ಬಿಡ್ ಮಾಡಿದರು. ಇದು, ಅಲ್ಲಿದ್ದವರಲ್ಲಿ ನಗೆಯುಕ್ಕಿಸಿತು.
ಆ ಸಂದರ್ಭದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸ್ವತಃ ಮುಂಬೈ ಬಳಗ ತನ್ನ ಟ್ವಿಟರ್ ಖಾತೆಯಲ್ಲಿ, ನಗುವಿನ ಇಮೋಜಿಯೊಂದಿಗೆ 'ಕ್ಯಾಮರೂನ್ ಗ್ರೀನ್‌ಗಾಗಿ ಮೊದಲ ಬಿಡ್' ಎಂದು ಬರೆದುಕೊಂಡಿದೆ.
ಕೋಲ್ಕತ್ತ, ಚೆನ್ನೈ ಪೈಪೋಟಿ
ಗ್ರೀನ್ ಅವರನ್ನು ಖರೀದಿಸಲು ಕೋಲ್ಕತ್ತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಕೊನೆಗೂ ಕೋಲ್ಕತ್ತ ಮೇಲುಗೈ ಸಾಧಿಸಿತು. ಐಪಿಎಲ್ ಗರಿಷ್ಠ ವೇತನ ನಿಯಮದ ಪ್ರಕಾರ ಗ್ರೀನ್ ಅವರಿಗೆ ಪ್ರಸಕ್ತ ಋತುವಿಗೆ ₹ 18 ಕೋಟಿ ಮಾತ್ರ ಸಂದಾಯವಾಗಲಿದೆ.
ಉಳಿದ ಹಣವು ಬಿಸಿಸಿಐ ಆಟಗಾರರ ಅಭಿವೃದ್ಧಿ ಕಾರ್ಯಕ್ರಮ ನಿಧಿಗೆ ಸೇರಲಿದೆ. ಗ್ರೀನ್ ಅವರು ಈ ಹಿಂದೆ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳಲ್ಲಿಯೂ ಆಡಿದ್ದರು. ಐಪಿಎಲ್‌ನಲ್ಲಿ ಅವರು 29 ಪಂದ್ಯಗಳಿಂದ 707 ರನ್ ಗಳಿಸಿದ್ದು, 16 ವಿಕೆಟ್ ಕೂಡ ಪಡೆದಿದ್ದಾರೆ.
ಮುಂಬೈ ಸೇರಿದ ಆಟಗಾರರು
ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಒಟ್ಟು 5 ಆಟಗಾರರನ್ನು ಖರೀದಿಸಿದೆ. ಅದರಲ್ಲಿ ಒಬ್ಬರಷ್ಟೇ ವಿದೇಶಿ ಆಟಗಾರ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರನ್ನು ಮೂಲಬೆಲೆ ₹ 1 ಕೋಟಿಗೆ ಕೊಂಡುಕೊಂಡಿದೆ.
ಉಳಿದಂತೆ ರಾಷ್ಟ್ರೀಯ ತಂಡದ ಪರ ಒಮ್ಮೆಯೂ ಕಾಣಿಸಿಕೊಳ್ಳದ ಹಾಗೂ ತಲಾ ₹ 30 ಲಕ್ಷ ಮೂಲ ಬೆಲೆ ಹೊಂದಿರುವ ಮಯಂಕ್ ರಾವತ್ (ದೆಹಲಿ), ಅಥರ್ವ ಅಂಕೋಲಕರ್ (ಮಹಾರಾಷ್ಟ್ರ), ಮೊಹಮ್ಮದ್ ಇಝರ್ (ಬಿಹಾರ), ದಾನಿಷ್ ಮಾಲೇವರ್ (ಮಹಾರಾಷ್ಟ್ರ) ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.