ಜಸ್‌ಪ್ರೀತ್ ಬೂಮ್ರಾ
ಪಿಟಿಐ ಚಿತ್ರ
ದುಬೈ: ವಿಶ್ವದ ಅಗ್ರಮಾನ್ಯ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರನ್ನು ಪುರುಷರ ‘ವರ್ಷದ ಟೆಸ್ಟ್ ಕ್ರಿಕೆಟರ್’ ಗೌರವಕ್ಕೆ ಸೋಮವಾರ ಆಯ್ಕೆ ಮಾಡಲಾಗಿದೆ.
‘ವರ್ಷದ ಆಟಗಾರ’ ಮತ್ತು ‘ವರ್ಷದ ಆಟಗಾರ್ತಿ’ ಪುರಸ್ಕಾರಕ್ಕೆ ಆಯ್ಕೆಯಾಗುವ ಹೆಸರನ್ನು ಐಸಿಸಿ ಮಂಗಳವಾರ ಪ್ರಕಟಿಸಲಿದೆ. ಬೂಮ್ರಾ ‘ವರ್ಷದ ಆಟಗಾರ’ ಗೌರವಕ್ಕೂ ಪಾತ್ರರಾಗಿ ‘ಡಬಲ್’ ಸಾಧನೆಗೆ ಪಾತ್ರರಾಗುವ ಹಾದಿಯಲ್ಲಿದ್ದಾರೆ.
ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಬೂಮ್ರಾ ಸ್ಥಾನ ಪಡೆದಿದ್ದರು. ಕಳೆದ 12 ತಿಂಗಳ ಅವಧಿಯಲ್ಲಿ ಬೂಮ್ರಾ ಟಸ್ಟ್ ರಂಗದಲ್ಲಿ ಪ್ರಾಬಲ್ಯ ಮೆರೆದಿದ್ದರು. ಕೇವಲ 13 ಪಂದ್ಯಗಳಿಂದ 14.92ರ ಸರಾಸರಿಯಲ್ಲಿ 71 ವಿಕೆಟ್‌ಗಳನ್ನು ಬಾಚಿಕೊಂಡಿದ್ದರು. 357 ಓವರುಗಳನ್ನು ಮಾಡಿದ್ದರು.
‘ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆ ಯಾಗುತ್ತಿ ರುವುದು ಸಂತಸ ಮೂಡಿಸಿದೆ. ಇದು ನನ್ನ ಹೃದಯಕ್ಕೆ ತುಂಬಾ ಆಪ್ತವಾದ ಮಾದರಿ. ಕಳೆದ ವರ್ಷ ನನ್ನ ಪಾಲಿಗೆ ವಿಶೇಷವಾದುದು’ ಎಂದು ಬೂಮ್ರಾ ಪ್ರತಿಕ್ರಿಯಿಸಿದ್ದಾರೆ.
‘ಈ ವರ್ಷ ತುಂಬಾ ಆಡುವ ಅವಕಾಶ ದೊರೆಯಿತು. ಪಡೆದ ಹಲವು ವಿಕೆಟ್‌ಗಳೂ ವಿಶೇಷವಾದುವು. ವಿಶಾಖಪಟ್ಟಣದಲ್ಲಿ ಓಲಿ ಪೋಪ್ ಅವರ ವಿಕೆಟ್‌ಗೆ ತುಂಬಾ ವಿಶೇಷ. ಆ ವಿಕೆಟ್ ಪಂದ್ಯ ನಮ್ಮ ಕಡೆ ವಾಲುವಂತೆ ಮಾಡಿತು’ ಎಂದು ಬೂಮ್ರಾ ಹೇಳಿಕೆಯನ್ನು ಐಸಿಸಿ ಬಿಡುಗಡೆ ಮಾಡಿದೆ.
31 ವರ್ಷ ವಯಸ್ಸಿನ ಬೂಮ್ರಾ, ಇತ್ತೀಚಿನ ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿಯಲ್ಲಿ 32 ವಿಕೆಟ್ ಪಡೆದಿದ್ದರು. 2018ರಲ್ಲಿ ವಿರಾಟ್ ಕೊಹ್ಲಿ ನಂತರ ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಪುರುಷ ಕ್ರಿಕೆಟಿಗ ಎನಿಸಿದ್ದಾರೆ ಬೂಮ್ರಾ.
ಒಮರ್‌ಝೈಗೆ ಗೌರವ: ಪುರುಷರ ವಿಭಾಗದಲ್ಲಿ ಅಫ್ಗಾನಿಸ್ತಾನದ ಆಲ್‌ರೌಂಡರ್ ಅಜ್ಮತ್‌ವುಲ್ಲಾ ಒಮರ್‌ಝೈ ಅವರು ಚುರುಕಿನ ವೇಗದ ದಾಳಿ ಮತ್ತು ಬಿರುಸಿನ ಬ್ಯಾಟಿಂಗ್‌ನಿಂದಾಗಿ ಸೋಮವಾರ ಐಸಿಸಿ ಪುರುಷರ ಏಕದಿನ ಕ್ರಿಕೆಟರ್ 2024 ಗೌರವಕ್ಕೆ ಭಾಜನರಾಗಿದ್ದಾರೆ.
ಅವರು ತಮ್ಮ ತಂಡದ ಪರ ರಹಮಾನುಲ್ಲಾ ಗುರ್ಬಾಝ್ ನಂತರ ಎರಡನೇ ಅತಿ ಹೆಚ್ಚಿನ ರನ್ ಗಳಿಸಿದ್ದರು. ಸ್ಪಿನ್ನರ್ ಎ.ಎಂ. ಘಝನ್‌ಫರ್ ನಂತರ ಎರಡನೇ ಅತಿ ಯಶಸ್ವಿ ಬೌಲರ್ ಎನಿಸಿದ್ದರು. ಅವರು ಕಳೆದ ವರ್ಷ 417 ರನ್ ಕಲೆಹಾಕಿದ್ದರೆ, 14 ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.