
ಜೆಮಿಮಾ ರಾಡ್ರಿಗಸ್
ನವಿ ಮುಂಬೈ: ಸತತ ವೈಫಲ್ಯಗಳಿಂದ ಅಸುರಕ್ಷಿತ ಭಾವನೆ ಕಾಡುವುದು ಸಹಜ. ಕ್ರಿಕೆಟ್ ಜೀವನದಲ್ಲಿ ಇಂಥ ತಲ್ಲಣಗಳನ್ನು ಎದುರಿಸಿದವರು ಜೆಮಿಮಾ ರಾಡ್ರಿಗಸ್. ವಿಶ್ವಕಪ್ ಪ್ರವಾಸದಲ್ಲೂ ಅವರು ವೈಫಲ್ಯ, ಅವಮಾನಗಳಿಂದ ಉದ್ವೇಗಕ್ಕೆ ಒಳಗಾಗಿ ನಿತ್ಯ ಎಂಬಂತೆ ಏಕಾಂಗಿಯಾಗಿ ಕಣ್ಣೀರುಹಾಕಿದ್ದರು.
ಈ ಎಲ್ಲ ತಳಮಳಗಳ ನಡುವೆಯೇ 25 ವರ್ಷ ವಯಸ್ಸಿನ ಮುಂಬೈ ಆಟಗಾರ್ತಿ, ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೆಮಿಫೈನಲ್ ಪಂದ್ಯದಲ್ಲಿ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ ತಂಡ ತವರು ನೆಲದಲ್ಲಿ ಆರಂಭಿಕ ಕುಸಿತದ ಆತಂಕದಲ್ಲಿದ್ದಾಗಲೇ ಅಜೇಯ ಶತಕದ (127*, 134ಎ) ಆಟವಾಡಿದ್ದಾರೆ.
ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ಅವರು ಶತಕ ಬಾರಿಸಿದ ತಕ್ಷಣ ಸಂಭ್ರಮಿಸಲಿಲ್ಲ. ಪಂದ್ಯ ಮುಗಿದ ತಕ್ಷಣ ಸಂಭ್ರಮಿಸಿದರೂ ಭಾವುಕರಾದರು. ‘ಶತಕ ಹೊಡೆದಾಗ ನನ್ನ ಕೆಲಸ ಮುಗಿದಿರಲಿಲ್ಲ. ತಂಡವನ್ನು ಗೆಲ್ಲಿಸಬೇಕಿತ್ತು. ಈ ಪಂದ್ಯ ಎಷ್ಟು ಮುಖ್ಯವೆಂಬುದು ಗೊತ್ತಿತ್ತು’ ಎಂದು ಪಂದ್ಯದ ನಂತರ ಪ್ರತಿಕ್ರಿಯಿಸಿದರು.
2022ರ ವಿಶ್ವಕಪ್ ತಂಡದಿಂದ ಅವರನ್ನು ಕೈಬಿಡಲಾಗಿತ್ತು. ಈ ಬಾರಿ ತಂಡಕ್ಕೆ ಆಯ್ಕೆಯಾಗಿದ್ದು ಅನುಭವದ ಆಧಾರದಲ್ಲಿ. ದೊರೆತ ಅವಕಾಶಗಳಲ್ಲಿ ಅಲ್ಪಸ್ಕೋರುಗಳನ್ನು ಗಳಿಸಿದ್ದರಿಂದ ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೆ ಅವರನ್ನು ಕೈಬಿಡಲಾಯಿತು.
‘ತಂಡದಿಂದ ಕೈಬಿಟ್ಟಾಗ ನಮ್ಮ ಸಾಮರ್ಥ್ಯದ ಬಗ್ಗೆಯೇ ಅನುಮಾನಗಳು ಶುರುವಾಗುತ್ತವೆ. ಟೂರ್ನಿಯುದ್ದಕ್ಕೂ ಮಾನಸಿಕ ಯಾತನೆಗೊಳಗಾಗಿದ್ದೆ. ಈ ಪ್ರವಾಸದಲ್ಲಿ ಹೆಚ್ಚುಕಮ್ಮಿ ಪ್ರತಿದಿನ ಎಂಬಂತೆ ನಾನು ಅತ್ತಿದ್ದಿದೆ. ಚೆನ್ನಾಗಿ ಆಡುತ್ತಿಲ್ಲವೆಂಬ ನೋವು ನನ್ನನ್ನು ಕಾಡುತ್ತಿತ್ತು’ ಎಂದು ಅವರು ಭಾವನೆಗಳನ್ನು ಹಂಚಿಕೊಂಡರು.
‘ಪಂದ್ಯ ಆರಂಭಕ್ಕೆ ಐದು ನಿಮಿಷ ಮೊದಲಷ್ಟೇ ಮೂರನೇ ಕ್ರಮಾಂಕದಲ್ಲಿ ಆಡಬೇಕೆಂದು ತಮಗೆ ತಿಳಿಸಲಾಯಿತು’ ಎಂದು ಹೇಳಿದ್ದಾರೆ.
ನಾಯಕಿ ಹರ್ಮನ್‌ಪ್ರೀತ್ ಕೌರ್ (89) ಜೊತೆ ಅವರು ಮೂರನೇ ವಿಕೆಟ್‌ಗೆ 167 ರನ್ ಸೇರಿಸಿದ್ದು, ಪಂದ್ಯದ ಚಿತ್ರಣವನ್ನು ಬದಲಿಸಿತು. ಪಂದ್ಯದ ಮೇಲೆ ಆಸ್ಟ್ರೇಲಿಯಾ ಹೊಂದಿದ್ದ ಹಿಡಿತವನ್ನು ಸಡಿಲಿಸಿತು.
36ನೇ ಓವರಿನಲ್ಲಿ ಹರ್ಮನ್‌ಪ್ರೀತ್ ನಿರ್ಗಮಿಸಿದ್ದರು. ಜೊತೆಗೆ ಸ್ವತಃ ಒಂದು ಜೀವದಾನ ಪಡೆದಿದ್ದರೂ, ವಿಚಲಿತರಾಗದೇ, ಮುಂಬೈನ ತೀವ್ರ ಸೆಕೆಯ ವಾತಾವರಣದಲ್ಲಿ ಅವರು ದಿಟ್ಟ ಹೋರಾಟ ನಡೆಸಿದರು.
ಅಮನ್ಜೋತ್ ಕೌರ್ ಗೆಲುವಿನ ಬೌಂಡರಿ ಸಿಡಿಸಿದ ಬಳಿಕ, ಪಿಚ್‌ನಲ್ಲಿ ಮಂಡಿಯೂರಿ ಬಾಗಿದ ಅವರು ಕಣ್ಣೀರಾದರು. ಕ್ರೀಡಾಂಗಣದಾಚೆಗೆ ಬಂದು ತಮ್ಮಷ್ಟೇ ಭಾವುಕರಾಗಿದ್ದ ಪೋಷಕರನ್ನು ಆಲಂಗಿಸಿಕೊಂಡರು.
2018ರಲ್ಲಿ ಪದಾರ್ಪಣೆ ಮಾಡಿದ್ದ ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮಿಮಾ, ಏಕದಿನ ಮಾದರಿಯಲ್ಲಿ 35ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 1725 ರನ್ ಪೇರಿಸಿದ್ದಾರೆ.
‘ತಂಡಕ್ಕೆ ಸದಾ ಉತ್ತಮವಾಗಿ ಆಡಬೇಕೆಂಬ ತುಡಿತವಿರುವವರು ಜೆಮಿಮಾ. ಅವರ ಮೇಲಿನ ನಂಬಿಕೆಯನ್ನು ಎಂದೂ ಕಳೆದುಕೊಂಡಿರಲಿಲ್ಲ. ಗುರುವಾರ ಅವರ ಆಟ ತುಂಬಾ ಸ್ಮರಣೀಯವಾದುದು’ ಎಂದು ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದರು.
‘ವಿದೇಶಿ ಲೀಗ್‌ಗಳಲ್ಲಿ ಆಡಿದ ಅನುಭವ ಜೆಮಿಮಾಗೆ ನೆರವಾಯಿತು. ಇನಿಂಗ್ಸ್‌ಗೆ ಹೇಗೆ ವೇಗ ಹೆಚ್ಚಿಸಬೇಕು ಎಂಬ ಕಲೆ ಅವರಲ್ಲಿದೆ ’ ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟರು.
ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಬಿಟ್ಟರೆ, ಬೇರಾವುದೇ ತಂಡ ಮಹಿಳಾ ಏಕದಿನ ವಿಶ್ವಕಪ್ ಗೆದ್ದಿಲ್ಲ. ಭಾನುವಾರ ನಡೆಯುವ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದ್ದು, ಯಾರೇ ಗೆದ್ದರೂ ಅದು ಆ ತಂಡಕ್ಕೆ ಮೊದಲ ಕಿರೀಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.