
ಜೆಮಿಮಾ ರಾಡ್ರಿಗಸ್
(ಚಿತ್ರ ಕೃಪೆ: X/@BCCIWomen)
ನವಿ ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಾದ ಸ್ಮರಣೀಯ ಗೆಲುವಿನ ಬಳಿಕ ಭಾರತೀಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್, ಭಾವುಕರಾಗಿದ್ದಾರೆ.
ಆಸ್ಟ್ರೇಲಿಯಾ ಒಡ್ಡಿದ 339 ರನ್ ಗುರಿ ಬೆನ್ನಟ್ಟಿದ ಭಾರತ 48.3 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇದೀಗ ಚೊಚ್ಚಲ ಕಿರೀಟದ ನಿರೀಕ್ಷೆಯಲ್ಲಿರುವ ಭಾರತ, ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.
134 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ ಅಜೇಯ 127 ರನ್ ಗಳಿಸಿದ ಜೆಮಿಮಾ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಭಾರತದ ಗೆಲುವಿನ ಬಳಿಕ ತಂಡದ ಆಟಗಾರ್ತಿಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಪಂದ್ಯದ ಬಳಿಕ ಭಾವುಕರಾದ ಜೆಮಿಮಾ, ತಾವು ಎದುರಿಸಿದ ಕಠಿಣ ಸವಾಲುಗಳ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
'ಯೇಸು ಕ್ರಿಸ್ತನ ಮೇಲೆ ಇಟ್ಟ ನಂಬಿಕೆಯು ತನ್ನನ್ನು ಈ ದಾಖಲೆ ರನ್ ಚೇಸ್ ಮಾಡುವಲ್ಲಿ ನೆರವಾಯಿತು' ಎಂದು ಅವರು ಹೇಳಿದ್ದಾರೆ.
'ಕೊನೆಯಲ್ಲಿ ನಾನು ಬೈಬಲ್ ಗ್ರಂಥದ ಪದಗಳನ್ನು ಉಚ್ಚರಿಸುತ್ತಿದ್ದೆ. ನೀನು ಧೈರ್ಯವಾಗಿ ನಿಲ್ಲು, ದೇವರು ನಿಮಗಾಗಿ ಹೋರಾಡುತ್ತಾನೆ' ಎಂದು ಪಂದ್ಯದ ಬಳಿಕ ಜೆಮಿಮಾ ನುಡಿದಿದ್ದಾರೆ.
'ಈ ಪ್ರವಾಸದ ಸಮಯದಲ್ಲಿ ಪ್ರತಿದಿನವೂ ನಾನು ಅಳುತ್ತಿದ್ದೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ನನ್ನಿಂದ ಸಾಧ್ಯ ಎಂದು ತಿಳಿದಿತ್ತು. ಉಳಿದೆಲ್ಲವನ್ನು ದೇವರು ನೋಡಿಕೊಳ್ಳುತ್ತಾನೆ. ಕ್ರೀಸಿನಲ್ಲಿದ್ದಾಗ ನಾನು ನನ್ನೊಂದಿಗೆ ಮಾತನಾಡುತ್ತಲೇ ಇದ್ದೆ' ಎಂದು ತಿಳಿಸಿದ್ದಾರೆ.
'ನಾನು ನನ್ನೊಳಗೆಯೇ ಹೋರಾಡಿದ್ದೇನೆ. ಕಠಿಣ ಪರಿಸ್ಥಿತಿಯಲ್ಲಿ ಶಾಂತವಾಗಿರಲು ಪ್ರಯತ್ನಿಸಿದ್ದೆ. ಯೇಸು ದೇವರಿಗೆ ಕೃತಜ್ಞತೆ ಹೇಳಲು ಬಯಸುತ್ತೇನೆ. ಏಕೆಂದರೆ ನನ್ನಿಂದ ಮಾತ್ರ ಏನನ್ನು ಮಾಡಲು ಸಾಧ್ಯವಾಗುತ್ತಿಲಿಲ್ಲ' ಎಂದು ಹೇಳಿದ್ದಾರೆ.
ವಿಐಪಿ ಸ್ಟ್ಯಾಂಡ್‌ಗಳಲ್ಲಿ ಕುಳಿತಿದ್ದ ತಮ್ಮ ಕುಟುಂಬದ ಸದಸ್ಯರಿಗೆ ಫ್ಲೈಯಿಂಗ್ ಕಿಸ್ ಮಾಡಿದ ಜೆಮಿಮಾ, ಎಲ್ಲರ ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ. 'ನನ್ನ ತಂದೆ, ತಾಯಿ, ತರಬೇತುದಾರರು ಹಾಗೂ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಇಚ್ಚಿಸುತ್ತೇನೆ. ಕಳೆದೊಂದು ತಿಂಗಳು ನಿಜವಾಗಿಯೂ ಕಷ್ಟಕರವಾಗಿತ್ತು. ನನಗಿದು ಕನಸಿನಂತೆ ಭಾಸವಾಗುತ್ತಿದೆ. ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದಿದ್ದಾರೆ.
ಕೊನೆಯ ಹಂತದಲ್ಲಿ ದೈಹಿಕವಾಗಿ ತುಂಬಾನೇ ಬಳಲಿದ್ದೆ. ಆದರೆ ಸಹ ಆಟಗಾರ್ತಿಯರು ಹಾಗೂ ನೆರೆದಿದ್ದ ಅಭಿಮಾನಿಗಳು ತಮ್ಮನ್ನು ಹುರಿದುಂಬಿಸಿರುವುದಾಗಿ ಜೆಮಿಮಾ ಹೇಳಿದ್ದಾರೆ.
ಶತಕದ ಬಳಿಕ ಜೆಮಿಮಾ ಸಂಭ್ರಮಾಚರಣೆ ಮಾಡಿರಲಿಲ್ಲ. ಈ ಕುರಿತು ಕೇಳಿದಾಗ, 'ಇಂದು ನನ್ನ ಅರ್ಧಶತಕ ಅಥವಾ ಶತಕಕ್ಕೆ ಹೆಚ್ಚಿನ ಮಹತ್ವ ಇರಲಿಲ್ಲ. ಭಾರತಕ್ಕಾಗಿ ಪಂದ್ಯ ಗೆಲ್ಲಿಸುವುದು ನನ್ನ ಗುರಿಯಾಗಿತ್ತು' ಎಂದು ಹೇಳಿದ್ದಾರೆ.
ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ಜೆಮಿಮಾ, ತಮ್ಮ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್ ಕಟ್ಟುವ ಮೂಲಕ ಭಾರತಕ್ಕೆ ಸ್ಮರಣೀಯ ಗೆಲುವು ಒದಗಿಸಿಕೊಡುವಲ್ಲಿ ನೆರವಾಗಿದ್ದಾರೆ.
'ನಾನು ಉತ್ತಮ ಲಯದಲ್ಲಿದ್ದೆ. ಆದರೆ ಒಂದರ ಬಳಿಕ ಒಂದರಂತೆ ಘಟನೆಗಳು ನಡೆಯುತ್ತಿದ್ದವು. ಕಳೆದ ಸಲ ವಿಶ್ವಕಪ್‌ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿಯೂ ಕೆಲವೊಂದು ಪಂದ್ಯಗಳಿಂದ ಕೈಬಿಡಲಾಯಿತು. ಹಾಗಿದ್ದರೂ ನಂಬಿಕೆಯನ್ನು ಕೈಬಿಟ್ಟಿರಲಿಲ್ಲ. ತಂಡಕ್ಕಾಗಿ ಸಿಕ್ಕ ಅವಕಾಶದಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಯತ್ನಿಸಿದ್ದೆ' ಎಂದು ಜೆಮಿಮಾ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.