ADVERTISEMENT

ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಭಾರತ ತಂಡದಲ್ಲಿ ಕಮಲಿನಿ, ವೈಷ್ಣವಿಗೆ ಸ್ಥಾನ

ಪಿಟಿಐ
Published 9 ಡಿಸೆಂಬರ್ 2025, 14:43 IST
Last Updated 9 ಡಿಸೆಂಬರ್ 2025, 14:43 IST
ಜಿ. ಕಮಲಿನಿ
ಜಿ. ಕಮಲಿನಿ   

ನವದೆಹಲಿ: ಉದಯೋನ್ಮುಖ ಆಟಗಾರ್ತಿಯರಾದ ಗುಣಲನ್ ಕಮಲಿನಿ ಮತ್ತು ವೈಷ್ಣವಿ ಶರ್ಮಾ ಅವರು ಭಾರತ ಮಹಿಳಾ ಟಿ20 ಕ್ರಿಕೆಟ್‌ ತಂಡದಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಗಳಿಸಿದ್ದಾರೆ. 

ಶ್ರೀಲಂಕಾ ಎದುರು ಇದೇ 21 ರಿಂದ 30ರವರೆಗೆ ನಡೆಯಲಿರುವ ಟಿ20 ಸರಣಿಯಲ್ಲಿ ಆಡಲಿರುವ ತಂಡದಲ್ಲಿ ಅವರಿಬ್ಬರೂ ಸ್ಥಾನ ಗಿಟ್ಟಿಸಿದ್ದಾರೆ. ಸರಣಿಯ ಮೊದಲೆರಡು ಪಂದ್ಯಗಳು ವಿಶಾಖಪಟ್ಟಣದಲ್ಲಿ ನಡೆಯಲಿವೆ. ನಂತರದ ಮೂರು ಪಂದ್ಯಗಳು ತಿರುವನಂತಪುರದಲ್ಲಿ ಆಯೋಜನೆಯಾಗಿವೆ. ಮಂಗಳವಾರ ಪ್ರಕಟಿಸಲಾದ ತಂಡದಲ್ಲಿ 15 ಆಟಗಾರ್ತಿಯರು ಸ್ಥಾನ ಗಳಿಸಿದ್ದಾರೆ. ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿದ್ದು, ಸ್ಮೃತಿ ಮಂದಾನ ಉಪನಾಯಕಿಯಾಗಿದ್ದಾರೆ. ವಿಶ್ವಕಪ್ ಫೈನಲ್ ವಿಜಯದ ರೂವಾರಿ ಶಫಾಲಿ ವರ್ಮಾ ಕೂಡ ತಂಡದಲ್ಲಿದ್ದಾರೆ. 

17 ವರ್ಷದ ವಿಕೆಟ್‌ಕೀಪರ್–ಬ್ಯಾಟರ್ ಕಮಲಿನಿ ಅವರು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್‌)ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಒಂಬತ್ತು ಪಂದ್ಯಗಳನ್ನು ಆಡಿದ್ದಾರೆ. 19 ವರ್ಷದ ವೈಷ್ಣವಿ ಅವರು ಡಬ್ಲ್ಯುಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇರಲಿಲ್ಲ. 

ADVERTISEMENT

ಕಮಲಿನಿ ಮತ್ತು ವೈಷ್ಣವಿ ಅವರು ತಂಡದಲ್ಲಿ ಕ್ರಮವಾಗಿ ರಾಧಾ ಯಾದವ ಮತ್ತು ಉಮಾ ಚೆಟ್ರಿ ಅವರ ಬದಲಿಗೆ ಸ್ಥಾನ ಪಡೆದಿದ್ದಾರೆ. 

ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ದೀಪ್ತಿ ಶರ್ಮಾ, ಸ್ನೇಹ ರಾಣಾ, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ಹರ್ಲೀನ್ ಡಿಯೊಲ್, ಅಮನ್ಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ, ರೇಣುಕಾ ಸಿಂಗ್ ಠಾಕೂರ್, ರಿಚಾ ಘೋಷ್ (ವಿಕೆಟ್‌ಕೀಪರ್), ಜಿ. ಕಮಲಿನಿ (ವಿಕೆಟ್‌ಕೀಪರ್), ಶ್ರೀಚರಣಿ, ವೈಷ್ಣವಿ ಶರ್ಮಾ.