ಐಪಿಎಲ್
ಕೋಲ್ಕತ್ತ: ಆತಿಥೇಯ ಕೋಲ್ಕತ್ತ ನೈಟ್‌ರೈಡರ್ಸ್ (ಕೆಕೆಆರ್) ಹಾಗೂ ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳ ನಡುವೆ ಏ. 6ರಂದು ಕೋಲ್ಕತ್ತದಲ್ಲಿ ನಿಗದಿಯಾಗಿದ್ದ ಪಂದ್ಯವನ್ನು ಗುವಾಹಟಿಗೆ ಸ್ಥಳಾಂತರಿಸಲಾಗಿದೆ.
ರಾಮನವಮಿ ದಿನದಂದು ಪಶ್ಚಿಮ ಬಂಗಾಳದಾದ್ಯಂತ 20,000ಕ್ಕೂ ಹೆಚ್ಚು ಮೆರವಣಿಗೆ ನಡೆಸಲಾಗುವುದು ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿರುವ ಬೆನ್ನಲ್ಲೇ, ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಪಂದ್ಯವನ್ನು ಮುಂದೂಡುವಂತೆ ಪಶ್ಚಿಮ ಬಂಗಾಳದ ಪೊಲೀಸರು ಬಂಗಾಳ ಕ್ರಿಕೆಟ್ ಸಂಸ್ಥೆಯನ್ನು (ಸಿಎಬಿ) ಕೋರಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸ್ನೇಹಶೀಶ್ ಗಂಗೂಲಿ, ‘ಪಂದ್ಯದ ದಿನಾಂಕ ಬದಲಿಸುವಂತೆ ಪೊಲೀಸರ ಮನವಿಯನ್ನು ಬಿಸಿಸಿಐಗೆ ಕಳುಹಿಸಲಾಗಿತ್ತು. ಪಂದ್ಯದ ದಿನಾಂಕ ಬದಲಾವಣೆಗೆ ಅವಕಾಶವಿಲ್ಲ. ಹೀಗಾಗಿ ಕೋಲ್ಕತ್ತ ಬದಲು, ಗುವಾಹಟಿಗೆ ಸ್ಥಳಾಂತರಗೊಂಡ ಮಾಹಿತಿ ಲಭ್ಯವಾಗಿದೆ’ ಎಂದಿದ್ದಾರೆ.
‘ಕೆಕೆಆರ್ ಮತ್ತು ಎಲ್‌ಎಸ್‌ಜಿ ತಂಡಗಳಿಗೆ ಸ್ಥಳೀಯ ಬೆಂಬಲ ಹೆಚ್ಚಾಗಿ ಸಿಗುವುದರಿಂದ ಕ್ರೀಡಾಂಗಣ ಭರ್ತಿಯಾಗಲಿದೆ’ ಎಂದು ಎಲ್‌ಎಸ್‌ಜಿ ತಂಡದ ಮಾಲೀಕರೂ ಆಗಿರುವ ಆರ್‌ಪಿಎಸ್‌ಜಿ ಸಮೂಹ ಅಧ್ಯಕ್ಷ ಸಂಜೀವ್ ಗೊಯೆಂಕಾ ಹೇಳಿದ್ದಾರೆ.
18ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 22ರಂದು ಆರಂಭವಾಗಲಿದೆ. ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ಸೆಣಸಾಟ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.