ADVERTISEMENT

ರಣಜಿ | ಕೋಟ್ಲಾದಲ್ಲಿ ಕೊಹ್ಲಿ ಆಟ: ಕ್ರೀಡಾಂಗಣದಲ್ಲಿ ಕಿಕ್ಕಿರಿದ ಪ್ರೇಕ್ಷಕರು

ಪಿಟಿಐ
Published 30 ಜನವರಿ 2025, 16:15 IST
Last Updated 30 ಜನವರಿ 2025, 16:15 IST
<div class="paragraphs"><p>ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದಲ್ಲಿ ದೆಹಲಿ ತಂಡದ ಆಟಗಾರರೊಂದಿಗೆ ವಿರಾಟ್ ಕೊಹ್ಲಿ</p></div>

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದಲ್ಲಿ ದೆಹಲಿ ತಂಡದ ಆಟಗಾರರೊಂದಿಗೆ ವಿರಾಟ್ ಕೊಹ್ಲಿ

   

ಪಿಟಿಐ ಚಿತ್ರ

ನವದೆಹಲಿ: ತಮ್ಮ ಪ್ರತಿಭೆಯಿಂದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜಗತ್ತಿನಲ್ಲೇ ಜನಪ್ರಿಯತೆ ಪಡೆದಿದ್ದಾರೆ. ಇಂಥ ಆಟಗಾರ ತಮ್ಮ ತಂಡದಲ್ಲಿರುವುದೇ ಹೆಮ್ಮೆ ಹಾಗೂ ಅದೃಷ್ಟ ಎಂದೇ ಭಾವಿಸಿದ ದೆಹಲಿ ತಂಡದ ಸದಸ್ಯರು, ರೈಲ್ವೇಸ್‌ ವಿರುದ್ಧ ಗುರುವಾರದಿಂದ ಆರಂಭವಾದ ರಣಜಿ ಪಂದ್ಯದಲ್ಲಿ ತುಂಬು ಉತ್ಸಾಹದಿಂದ ಆಡಿದರು. 

ADVERTISEMENT

ಇಷ್ಟು ಮಾತ್ರವಲ್ಲ, ದೇಸಿ ಕ್ರಿಕೆಟ್‌ನಲ್ಲಿ 12 ವರ್ಷಗಳ ನಂತರ ಆಡಲು ಬಂದ ನೆಚ್ಚಿನ ಆಟಗಾರ ಕೊಹ್ಲಿ ಕಣ್ತುಂಬಿಕೊಳ್ಳಲು, ಅರುಣ್ ಜೇಟ್ಲಿ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು.

‘ತಂಡದಲ್ಲಿರುವ ಬಹಳಷ್ಟು ಯುವ ಕ್ರಿಕೆಟಿಗರು ಕೊಹ್ಲಿ ಅವರ ಆಟವನ್ನು ಟಿ.ವಿ.ಯಲ್ಲಿ ನೋಡುತ್ತಾ ಬೆಳೆದವರು. ಆದರೆ ಅವರೊಂದಿಗೆ ಆಡುವ ಅವಕಾಶ ಇಂದು ಲಭಿಸಿದೆ. ಕೊಹ್ಲಿ ಅವರ ತುಂಬು ಉತ್ಸಾಹ ತಂಡದ ಮೇಲೂ ಪ್ರಭಾವ ಬೀರಿದೆ. ಬೆಳಿಗ್ಗೆ ಕ್ರೀಡಾಂಗಣಕ್ಕೆ ಬಂದಿಳಿದಾಗ, ಪ್ರೇಕ್ಷಕರ ದೊಡ್ಡ ಸಾಲೇ ಗೇಟಿನ ಬಳಿ ನಿಂತಿತ್ತು. ಹೀಗಾಗಿ ಇದು ಹಿಂದಿನಂತೆಯೇ ಸಾಮಾನ್ಯ ಪಂದ್ಯ ಆಗಿರುವುದಿಲ್ಲ ಎಂದೆನಿಸಿತು’ ಎಂದು ಸೈನಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

‘ಡ್ರೆಸಿಂಗ್ ಕೊಠಡಿಯನ್ನು ಕೊಹ್ಲಿಯೊಂದಿಗೆ ಹಂಚಿಕೊಳ್ಳುವುದು, ಕ್ರೀಡಾಂಗಣದಲ್ಲಿ ಸ್ಲಪಿನಲ್ಲಿ ಪಕ್ಕದಲ್ಲಿ ನಿಲ್ಲುವುದು, ಆಟದಲ್ಲಿ ಅವರಿಂದ ಮಾರ್ಗದರ್ಶನ ಪಡೆಯುವುದು ಎಲ್ಲವೂ ಸಂಭ್ರಮದ ಕ್ಷಣಗಳೇ ಆಗಿವೆ’ ಎಂದು ಸೈನಿ ಹೇಳಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಣಜಿ ಪಂದ್ಯ ವೀಕ್ಷಿಸಲು ಸೇರಿದ್ದ ಪ್ರೇಕ್ಷಕರು

ಸೈನಿ ಅವರು ಕೊಹ್ಲಿಯೊಂದಿಗೆ ಭಾರತ ತಂಡ ಮತ್ತು ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದಾರೆ. ಉಪೇಂದ್ರ ಯಾದವ್ ಅವರು ಅಮೋಘ 95 ರನ್‌ಗಳ ಗಳಿಸಿದರೂ, ರೈಲ್ವೇಸ್ ತಂಡವನ್ನು 241 ರನ್‌ಗಳಿಗೆ ಉತ್ಸಾಹ ಭರಿತ ದೆಹಲಿ ತಂಡ ಕಟ್ಟಿಹಾಕಿತು.

ಪಂದ್ಯಕ್ಕೆ ಆಗಮಿಸಿದ ಪ್ರೇಕ್ಷಕರ ಸಂಖ್ಯೆ ಹೆಚ್ಚಾದ ಕಾರಣ, ಹೆಚ್ಚುವರಿಯಾಗಿ 10 ಸಾವಿರ ಸೀಟುಗಳನ್ನು ಹಾಕಲಾಗಿದೆ ಎಂದು ಡಿಡಿಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಪ್ರೇಕ್ಷಕರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆಯೂ ಜರುಗಿದೆ.

95 ರನ್ ಗಳಿಸಿದ ಉಪೇಂದ್ರ ಯಾದವ್ ಪ್ರತಿಕ್ರಿಯಿಸಿ, ‘ರಣಜಿ ಪಂದ್ಯ ನೋಡಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವುದನ್ನು ನೋಡಿಯೇ ಇಲ್ಲ. ದೊಡ್ಡ ಆಟಗಾರ ದೇಸಿ ಕ್ರಿಕೆಟ್‌ನಲ್ಲಿ ನಮ್ಮೊಂದಿಗೆ ಆಡುತ್ತಿರುವುದು ನಮಗೂ ಹೆಮ್ಮೆಯ ಸಂಗತಿ. ಇಷ್ಟೊಂದು ಜನರನ್ನು ನಾವು ಐಪಿಎಲ್‌ನಲ್ಲಿ ನೋಡಿದ್ದೆವು. ಇಂದು ಅಂಥದ್ದೇ ವಾತಾವರಣ ನಿರ್ಮಾಣವಾಗಿದೆ’ ಎಂದರು.

ದಿನದ ಆಟ ಆರಂಭವಾದಾಗ ದೆಹಲಿ ಪರ ನವದೀಪ್ ಸೈನಿ, ಸಿದ್ಧಾಂತ ಶರ್ಮಾ ಮತ್ತು ಮನಿ ಗೆರೇವಾಲ್ ಪ್ರಕರ ಬೌಲಿಂಗ್ ದಾಳಿಯಿಂದಾಗಿ ರೈಲ್ವೇಸ್ ತಂಡವು 66 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಬಂದ ಉಪೇಂದ್ರ ಯಾದವ್ ಹಾಗೂ ಕರಣ್ ಶರ್ಮಾ ಜೋಡಿ 104 ರನ್ ಪೇರಿಸಿತು. ಕರಣ್ ಅವರು 105 ಎಸೆತಗಳಲ್ಲಿ 50 ರನ್ ಗಳಿಸಿದರು. ಮೊಹಮ್ಮದ್ ಸೈಫ್, ಹಿಮಾಂಶು ಸಂಗ್ವಾನ್‌ ಹಾಗೂ ಸೂರಜ್ ಅಹುಜಾ ಹೊರತುಪಡಿಸಿ ಉಳಿದ ಯಾರೂ ಒಂದಂಕಿ ದಾಟಲಿಲ್ಲ. ಹೀಗಾಗಿ ರೈಲ್ವೇಸ್ 241ಕ್ಕೆ ಆಲ್‌ಔಟ್ ಆಯಿತು. 

ಗುರಿಯನ್ನು ಬೆನ್ನಟ್ಟಿದ ದೆಹಲಿ ತಂಡವು 10 ರನ್ ಗಳಿಸಿದ ಆರಂಭಿಕ ಬ್ಯಾಟರ್ ಅರ್ಪಿತ್ ರಾಣಾ (10) ಅವರ ವಿಕೆಟ್ ಕಳೆದುಕೊಂಡು ದಿನದ ಆಟ ಮುಗಿಯುವ ಹೊತ್ತಿಗೆ 1 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತ್ತು. ಸನತ್ ಸಂಗ್ವಾನ್ (9) ಹಾಗೂ ಯಶ್ ಧುಲ್‌ (17) ಆಟ ಮುಂದುವರಿಸಿದ್ದಾರೆ. ಕೊಹ್ಲಿ ಇನ್ನಷ್ಟೇ ಆಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.