ವಿರಾಟ್ ಕೊಹ್ಲಿ
(ಎಕ್ಸ್ ಚಿತ್ರ)
ಮೆಲ್ಬರ್ನ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಯುವ ಬ್ಯಾಟರ್ ಸ್ಯಾಮ್ ಕೊನ್‌ಸ್ಟಸ್ ಅವರೊಂದಿಗೆ ವಾಗ್ವಾದ ನಡೆಸಿ ದಂಡನೆಗೆ ಒಳಗಾಗಿರುವ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿಗೆ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಮತ್ತೆ ಕಹಿ ಅನುಭವ ಎದುರಾಗಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಅಭಿಮಾನಿಗಳು ಕೊಹ್ಲಿ ಅವರನ್ನು ಗೇಲಿ ಮಾಡುವ ಮೂಲಕ ನಿರಂತರವಾಗಿ ಕಾಡಿದ್ದಾರೆ. ಕೊಹ್ಲಿ ಏಕಾಗ್ರತೆಗೆ ಭಂಗವನ್ನುಂಟು ಮಾಡುವ ಪ್ರೇಕ್ಷಕರ ಯತ್ನವು ಯಶಸ್ವಿಯಾಗಿದೆ.
ಪರಿಣಾಮ ದಿನದಾಟದ ಕೊನೆಯ ಅವಧಿಯಲ್ಲಿ ಔಟ್ ಆಗಿ ಪೆವಿಲಿಯನ್‌ನತ್ತ ನಿರ್ಗಮಿಸುತ್ತಿದ್ದ ವೇಳೆಯಲ್ಲಿ ತಾಳ್ಮೆ ಕಳೆದುಕೊಂಡ ಕೊಹ್ಲಿ ಗೇಲಿ ಮಾಡುತ್ತಿದ್ದ ಪ್ರೇಕ್ಷಕರತ್ತ ವಾಗ್ವಾದಕ್ಕಿಳಿದಿರುವ ಘಟನೆಯು ನಡೆದಿದೆ.
ಈ ಸಂಬಂಧ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
36 ರನ್ ಗಳಿಸಿದ್ದ ಕೊಹ್ಲಿ ಮಗದೊಮ್ಮೆ ಆಫ್-ಸ್ಟಂಪ್ ಆಚೆಗಿನ ಎಸೆತದಲ್ಲಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಮೊದಲ ದಿನದಾಟದಲ್ಲಿ ಸ್ಯಾಮ್ ಕೊನ್‌ಸ್ಟಸ್ ಅವರ ಭುಜಕ್ಕೆ ಕೊಹ್ಲಿ ಡಿಕ್ಕಿ ಹೊಡೆದಿದ್ದರು. ಐಸಿಸಿ ನಿಯಮಾವಳಿಯ ಲೆವೆಲ್ ಒನ್ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೊಹ್ಲಿಗೆ ಪಂದ್ಯ ಶುಲ್ಕದ ಶೇ 20ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಹಾಕಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.