ADVERTISEMENT

IPL 2024: ಯಶ್‌, ಕೃಣಾಲ್ ದಾಳಿಗೆ ಗುಜರಾತ್‌ ಕುಸಿತ, ಲಖನೌಗೆ ಸತತ ಮೂರನೇ ಗೆಲುವು

ಪಿಟಿಐ
Published 7 ಏಪ್ರಿಲ್ 2024, 17:53 IST
Last Updated 7 ಏಪ್ರಿಲ್ 2024, 17:53 IST
<div class="paragraphs"><p>ಲಖನೌ ಸೂಪರ್ ಜೈಂಟ್ಸ್‌ ತಂಡದ ಆಟಗಾರರ ಸಂಭ್ರಮ</p></div>

ಲಖನೌ ಸೂಪರ್ ಜೈಂಟ್ಸ್‌ ತಂಡದ ಆಟಗಾರರ ಸಂಭ್ರಮ

   

ಲಖನೌ: ವೇಗದ ಬೌಲರ್‌ ಯಶ್ ಠಾಕೂರ್‌ (3.1–1–30–5) ಮತ್ತು ಎಡಗೈ ಸ್ಪಿನ್ನರ್‌ ಕೃಣಾಲ್ ಪಾಂಡ್ಯ(11ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಲಖನೌ ಸೂಪರ್‌ ಜೈಂಟ್ಸ್ ತಂಡ ಭಾನುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ತಂಡವನ್ನು 33 ರನ್‌ಗಳಿಂದ ಸೋಲಿಸಿತು. ಇದು ಲಖನೌಗೆ ಸತತ ಮೂರನೇ ಜಯ.

25 ವರ್ಷದ ಯಶ್‌, ಐಪಿಎಲ್‌ನ ಈ ಆವೃತ್ತಿಯಲ್ಲಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎನಿಸಿದರು. ನಾಯಕ ಶುಭಮನ್ ಗಿಲ್ ಅವರ ವಿಕೆಟ್‌ ಕೂಡ ಇದರಲ್ಲಿ ಒಳಗೊಂಡಿತ್ತು.

ADVERTISEMENT

ಏಕನಾ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕೆ.ಎಲ್‌.ರಾಹುಲ್ ಬಳಗ, ಮಾರ್ಕಸ್‌ ಸ್ಟೊಯಿನಿಸ್‌ (58, 43 ಎಸೆತ) ಅವರ ಅರ್ಧ ಶತಕ ಮತ್ತು ಪೂರನ್ ಅವರ ಬಿರುಸಿನ 32 (22ಎಸೆತ)  ರನ್‌ಗಳ ನೆರವಿನಿಂದ 5 ವಿಕೆಟ್‌ಗೆ 163 ರನ್ ಹೊಡೆಯಿತು. ಆದರೆ ಎಲ್‌ಎಸ್‌ಜಿ ಬೌಲರ್‌ಗಳು ಮತ್ತೊಮ್ಮೆ ಈ ಸಾಧಾರಣ ಮೊತ್ತವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪವರ್‌ಪ್ಲೇ  ಅವಧಿಯಲ್ಲಿ ವಿಕೆಟ್‌ ನಷ್ಟವಿಲ್ಲದೇ 56 ರನ್ ಗಳಿಸಿ ಉತ್ತಮ ಆರಂಭ ಮಾಡಿದ್ದ ಗಿಲ್‌ ಬಳಗ ನಂತರ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋಯಿತು. ಏಳು ಎಸೆತಗಳಿರುವಂತೆ 129 ರನ್‌ಗಳಿಗೆ ಆಲೌಟ್‌ ಆಯಿತು. ಇದು ಲಖನೌ ತಂಡಕ್ಕೆ ಗುಜರಾತ್‌ ಟೈಟನ್ಸ್ ವಿರುದ್ಧ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಮೊದಲ ಜಯ ಕೂಡ.

ವೃದ್ಧಿಮಾನ್ ಸಹಾ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸಿದ ಸಾಯಿ ಸುದರ್ಶನ್ (31) ಬಿಟ್ಟರೆ,  ಕೊನೆಯಲ್ಲಿ ರಾಹುಲ್ ತೆವಾಟಿಯಾ (30) ಮಾತ್ರ ಕೆಲಮಟ್ಟಿಗೆ ಪ್ರತಿರೋಧ ತೋರಿದರು. ರವಿ ಬಿಷ್ಣೋಯಿ ಎಂಟು ರನ್ನಿಗೆ ಒಂದು ವಿಕೆಟ್‌ ಪಡೆದರು. ಕೇನ್‌ ವಿಲಿಯಮ್ಸನ್‌ ಅವರನ್ನು ತಮ್ಮದೇ ಬೌಲಿಂಗ್‌ನಲ್ಲಿ ಅಮೋಘವಾಗಿ ಕ್ಯಾಚ್‌ ಮಾಡಿದರು.

ಉಳಿದ ಬೌಲರ್‌ಗಳ ಉತ್ತಮ ಸಾಧನೆಯಿಂದಾಗಿ, ಶರವೇಗದ ಬೌಲಿಂಗ್ ಮಾಡುವ ಮಯಂಕ್ ಯಾದವ್ ಅವರಿಗೆ ಹೆಚ್ಚು ಕೆಲಸ ಬೀಳಲಿಲ್ಲ. ಅವರು ಒಂದು ಓವರ್ ಮಾತ್ರ ಮಾಡಿ 13 ರನ್ ನೀಡಿದರು.

ಇದಕ್ಕೆ ಮೊದಲು, ಆತಿಥೇಯ ಲಖನೌ ಹೋರಾಟದ ಮೊತ್ತ ಗಳಿಸಿತು. ತಂಡದ ವೇಗಿ ಉಮೇಶ್ ಯಾದವ್ ಆರಂಭದಲ್ಲೇ ಕ್ವಿಂಟನ್ ಡಿ ಕಾಕ್ ವಿಕೆಟ್‌ ಪಡೆದರು. ಇನ್ನೊಂದು ಓವರ್‌ನಲ್ಲಿ ಅವರು ದೇವದತ್ತ ಪಡಿಕ್ಕಲ್ ವಿಕೆಟ್ ಕೂಡ ಗಳಿಸಿದರು. ಆತಿಥೇಯ ತಂಡವು  18 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. 

ಕೆ.ಎಲ್‌.ರಾಹುಲ್ (33; 31ಎ) ಅವರೊಂದಿಗೆ ಸೇರಿಕೊಂಡ ಸ್ಟೊಯಿನಿಸ್ ಇನಿಂಗ್ಸ್‌ಗೆ ಬಲ ತುಂಬಿ ಮೂರನೇ ವಿಕೆಟ್‌ಗೆ 73 ರನ್‌ ಸೇರಿಸಿದರು. ಕೊನೆಯ ಹಂತದ ಓವರ್‌ಗಳಲ್ಲಿ ನಿಕೊಲಸ್ ಪೂರನ್ ಅಬ್ಬರಿಸಿದರು.

ಕರ್ನಾಟಕದ ಬಿ.ಆರ್‌.ಶರತ್‌ ಅವರು ಗುಜರಾತ್‌ ಟೈಟನ್ಸ್‌ ತಂಡದಲ್ಲಿ ಪದಾರ್ಪಣೆ ಮಾಡಿದರು.

ಸಂಕ್ಷಿಪ್ತ ಸ್ಕೋರು: ಲಖನೌ ಸೂಪರ್‌ ಜೈಂಟ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 163 (ಕೆ.ಎಲ್. ರಾಹುಲ್ 33, ಮಾರ್ಕಸ್ ಸ್ಟೊಯಿನಿಸ್ 58, ನಿಕೊಲಸ್ ಪೂರನ್ ಔಟಾಗದೆ 32, ಆಯುಷ್ ಬಡೋನಿ 20, ಉಮೇಶ್ ಯಾದವ್ 22ಕ್ಕೆ2, ದರ್ಶನ್ ನಾಯ್ಕಂಡೆ 21ಕ್ಕೆ2);

ಗುಜರಾತ್ ಟೈಟನ್ಸ್‌: 18.5 ಓವರುಗಳಲ್ಲಿ 130 (ಸಾಯಿ ಸುದರ್ಶನ್ 31, ರಾಹುಲ್ ತೆವಾಟಿಯಾ 30; ಯಶ್ ಠಾಕೂರ್ 30ಕ್ಕೆ5, ಕೃಣಾಲ್ ಪಾಂಡ್ಯ 11ಕ್ಕೆ3). ಪಂದ್ಯದ ಆಟಗಾರ: ಯಶ್‌ ಠಾಕೂರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.