ADVERTISEMENT

ಬಾರ್ಡರ್-ಗವಾಸ್ಕರ್ ಟ್ರೋಫಿ |ಕೊನೆಯ 2 ಟೆಸ್ಟ್‌ ಪಂದ್ಯಗಳಿಗೂ ಮೊಹಮ್ಮದ್ ಶಮಿ ಅಲಭ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಡಿಸೆಂಬರ್ 2024, 14:17 IST
Last Updated 23 ಡಿಸೆಂಬರ್ 2024, 14:17 IST
<div class="paragraphs"><p>ಮೊಹಮ್ಮದ್ ಶಮಿ</p></div>

ಮೊಹಮ್ಮದ್ ಶಮಿ

   

–ಪಿಟಿಐ ಚಿತ್ರ

ನವದೆಹಲಿ: ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಪೂರ್ಣಪ್ರಮಾಣದಲ್ಲಿ ಫಿಟ್ನೆಸ್‌ ಪಡೆಯದ ಕಾರಣ ಬಾರ್ಡರ್‌–ಗಾವಸ್ಕರ್ ಟ್ರೋಫಿ ಸರಣಿಯ ಕೊನೆಯ ಎರಡು ಪಂದ್ಯಗಳಿಗೂ ಅಲಭ್ಯರಾಗಿದ್ದಾರೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸೋಮವಾರ ತಿಳಿಸಿದೆ.

ADVERTISEMENT

ಕಳೆದ ವರ್ಷದ ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಶಮಿ ಅವರು ಕೊನೆಯ ಬಾರಿ ಭಾರತ ತಂಡಕ್ಕೆ ಆಡಿದ್ದರು. ಪಾದದ ಶಸ್ತ್ರಚಿಕಿತ್ಸೆ ನಂತರ ಚೇತರಿಸಿದ ಅವರು ಕಳೆದ ತಿಂಗಳು ರಣಜಿ ಟ್ರೋಫಿ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಬಂಗಾಳ ತಂಡದಲ್ಲಿ ಆಡುವ ಮೂಲಕ ಪುನರಾಗಮನ ಮಾಡಿದ್ದರು. ರಣಜಿ ಪಂದ್ಯದಲ್ಲಿ ಅವರು 43 ಓವರ್ ಬೌಲಿಂಗ್ ಮಾಡಿದ್ದರು.

ಈ ಮಧ್ಯೆ ಅವರನ್ನು ಭಾರತ ತಂಡಕ್ಕೆ ಸೇರ್ಪಡೆ ಮಾಡಬೇಕೆಂಬ ಒತ್ತಡ ಹೆಚ್ಚಿತ್ತು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಅವರು ಎಲ್ಲ 9 ಪಂದ್ಯಗಳಲ್ಲಿ ಆಡಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲೂ 34 ವರ್ಷ ವಯಸ್ಸಿನ ಈ ಬೌಲರ್‌ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಶನಿವಾರ ದೆಹಲಿ ವಿರುದ್ಧ ಮೊದಲ ಪಂದ್ಯ ಆಡಿರಲಿಲ್ಲ.

ಅವರ ಫಿಟ್ನೆಸ್‌ ಊಹಾಪೋಹಗಳಿಗೆ ಕಾರಣವಾಗಿತ್ತು. ಬ್ರಿಸ್ಬೇನ್ (3ನೇ) ಟೆಸ್ಟ್ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಎನ್‌ಸಿಎದ ಫಿಜಿಯೊಗೆ ಕರೆಮಾಡಿ ಶಮಿ ಫಿಟ್ನೆಸ್‌ ವಿಷಯದಲ್ಲಿ ಸ್ಪಷ್ಟತೆ ನೀಡುವಂತೆ ಕೇಳಿದ್ದರು.

ಸೈಯದ್ ಮುಷ್ತಾಕ್ ಟ್ರೋಫಿ ಪಂದ್ಯಗಳನ್ನು ಆಡಿದ ನಂತರ ಅವರ ಪಾದಗಳಲ್ಲಿ ಊತ ಕಾಣಿಸುತಿತ್ತು. ಸೋಮವಾರ ಬಿಸಿಸಿಐ ಅಂತಿಮ ನಿರ್ಧಾರಕ್ಕೆ ಬಂದಿದ್ದು ಅವರನ್ನು ಹಾಲಿ ಸರಣಿಯಲ್ಲಿ ಆಡಿಸದಿರಲು ನಿರ್ಧರಿಸಿದೆ.

‘ಶಮಿ ಅವರ ಈಗಿನ ಸ್ಥಿತಿಯ ಬಗ್ಗೆ ಮೌಲ್ಯಮಾಪನದ ಆಧಾರದಲ್ಲಿ ಅವರಿಗೆ ಬೌಲಿಂಗ್ ಭಾರ ಹೊರಲು ಇನ್ನೂ ಹೆಚ್ಚಿನ ಸಮಯ ತಗಲಬಹುದು ಎಂದು ಬಿಸಿಸಿಐನ ವೈದ್ಯಕೀಯ ತಂಡ ನಿರ್ಧಾರಕ್ಕೆ ಬಂದಿದೆ. ಇದರ ಆಧಾರದಲ್ಲಿ ಅವರು ಬಿಜಿಟಿ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಫಿಟ್‌ ಆಗಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಶಮಿ 64 ಟೆಸ್ಟ್‌ ಪಂದ್ಯಗಳಲ್ಲಿ 229 ವಿಕೆಟ್‌ಗಳನ್ನು ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್‌ ಮತ್ತು 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.