ಸೂರ್ಯಕುಮಾರ್ ಯಾದವ್
(ಚಿತ್ರ ಕೃಪೆ: X/@BCCI)
ದುಬೈ: ಟೀಮ್ ಇಂಡಿಯಾದ ಟ್ವೆಂಟಿ-20 ಕ್ರಿಕೆಟ್ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು 'ಹಂದಿ' ಎಂದು ಕರೆಯುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ವಿಚಿತ್ರ ವಾದ ಮಂಡಿಸಿದ್ದಾರೆ.
'ದೇಶಕ್ಕಾಗಿ ಉತ್ಸಾಹದಿಂದ ಆಡುವ ಯಾವುದೇ ಕ್ರೀಡಾಪಟುವಿಗೆ ನಾನು ಅಗೌರವವನ್ನು ತೋರಿಲ್ಲ' ಎಂದು ಅವರು ಹೇಳಿದ್ದಾರೆ.
'ಆದರೆ ಶಾಹೀದ್ ಅಫ್ರಿದಿ ನಾಯಿಯಂತೆ ಬೊಗಳುತ್ತಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದಾಗ ಅಲ್ಲಿನ ಮಾಧ್ಯಮಗಳು ಏಕೆ ಹೊಗಳುತ್ತಿದ್ದರು' ಎಂದು ಪ್ರಶ್ನಿಸಿದ್ದಾರೆ.
'ಘನತೆ ಹಾಗೂ ಗೌರವದ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ಅದನ್ನು ತಿರಸ್ಕರಿಸಬೇಕಲ್ಲವೇ' ಎಂದು ಕೇಳಿದ್ದಾರೆ.
ಪಾಕಿಸ್ತಾನದ ಖಾಸಗಿ ಟಿ.ವಿ ಚಾನೆಲ್‌ನ ಏಷ್ಯಾ ಕಪ್ ಸಂವಾದದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹಂದಿ ಎಂದು ಕರೆಯುವ ಮೂಲಕ ಮೊಹಮ್ಮದ್ ಯೂಸುಫ್ ತೀವ್ರ ಮುಜುಗರಕ್ಕೊಳಗಾಗಿದ್ದರು.
ಈ ಸಂಬಂಧ ಭಾರತೀಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿದ್ದು, ಯೂಸುಫ್ ಅವರನ್ನು ಟ್ರೋಲ್‌ಗೆ ಗುರಿಪಡಿಸಲಾಗಿದೆ. ಭಾರತದ ಮಾಜಿ ಆಟಗಾರರು ಯೂಸುಫ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಏಷ್ಯಾ ಕಪ್‌ನಲ್ಲಿ ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರರು ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಯೂಸುಫ್, 'ಭಾರತಕ್ಕೆ ಸಿನಿ ಪ್ರಪಂಚದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅಂಪೈರ್‌ಗಳನ್ನು ಬಳಸಿಕೊಂಡು ಪಂದ್ಯ ಗೆಲ್ಲಲು ಯತ್ನಿಸುವುದು ನಾಚಿಕೆಗೇಡಿನ ಸಂಗತಿ' ಎಂದು ಹೇಳಿದ್ದರಲ್ಲದೆ ಸೂರ್ಯ ಅವರನ್ನು 'ಹಂದಿ' ಎಂದು ಕರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.