ಮೊಹಮ್ಮದ್ ಸಿರಾಜ್, ಜೋ ರೂಟ್
(ಪಿಟಿಐ ಚಿತ್ರ)
ಲಂಡನ್: ಭಾರತದ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು 'ನೈಜ ಹೋರಾಟಗಾರ' ಎಂದು ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್ ಬಣ್ಣಿಸಿದ್ದಾರೆ.
'ಮೈದಾನದಲ್ಲಿ ಮೊಹಮ್ಮದ್ ಸಿರಾಜ್ ತಮ್ಮ ಸರ್ವಸ್ವವನ್ನು ಅರ್ಪಿಸುತ್ತಾರೆ, ಕೆಲವೊಮ್ಮೆ ನಕಲಿ ಕೋಪವನ್ನು ಪ್ರದರ್ಶಿಸುತ್ತಾರೆ' ಎಂದು ಹೇಳಿದ್ದಾರೆ.
'ಸಿರಾಜ್ ನಿಜವಾದ ಹೋರಾಟಗಾರ. ಅವರಂತಹ ವ್ಯಕಿತ್ವ ಹೊಂದಿರುವ ಆಟಗಾರನು ತಂಡದಲ್ಲಿರಲು ಎಲ್ಲರೂ ಬಯಸುತ್ತಾರೆ. ಅವರು ಭಾರತಕ್ಕಾಗಿ ತಮ್ಮ ಸರ್ವಸ್ವವನ್ನು ನೀಡುತ್ತಾರೆ. ಅದಕ್ಕಾಗಿ ಅವರಿಗೆ ಶ್ರೇಯ ಸಲ್ಲಬೇಕು' ಎಂದಿದ್ದಾರೆ.
'ಕೆಲವೊಮ್ಮೆ ನಕಲಿ ಕೋಪವನ್ನು ಪ್ರದರ್ಶಿಸುತ್ತಾರೆ. ಅದು ನಮಗೆ ಅರ್ಥವಾಗುತ್ತದೆ. ನಿಜವಾಗಿಯೂ ಅವರು ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಕಠಿಣ ಪ್ರಯತ್ನವನ್ನು ಮಾಡುತ್ತಾರೆ' ಎಂದು ಹೇಳಿದ್ದಾರೆ.
'ಸಿರಾಜ್ ಕೌಶಲ್ಯಯುತ ಬೌಲರ್ ಆಗಿದ್ದು, ಅದರಿಂದಲೇ ಅಷ್ಟೊಂದು ವಿಕೆಟ್ ಗಳಿಸಲು ಸಾಧ್ಯವಾಗಿದೆ' ಎಂದೂ ಸಹ ರೂಟ್ ಗುಣಗಾನ ಮಾಡಿದ್ದಾರೆ.
'ಸಿರಾಜ್ ಯಾವಾಗಲೂ ನಗುಮುಖದಿಂದಲೇ ವರ್ತಿಸುತ್ತಾರೆ. ಅವರ ವಿರುದ್ಧ ಆಡುವುದನ್ನು ನಾನು ಇಷ್ಟಪಡುತ್ತೇನೆ. ಅಭಿಮಾನಿಗಳಿಗೆ ಅದಕ್ಕಿಂತಲೂ ಹೆಚ್ಚು ಬೇಕಾಗಿಲ್ಲ. ಯುವ ಆಟಗಾರರಿಗೆ ತಮ್ಮ ಪ್ರದರ್ಶನದಿಂದಲೇ ಮಾದರಿಯಾಗಿದ್ದಾರೆ' ಎಂದಿದ್ದಾರೆ.
ಬ್ಯಾಟಿಂಗ್ ಮಾಡಲು ಕ್ರಿಸ್ ವೋಕ್ಸ್ ರೆಡಿ...
'ಭುಜ ನೋವಿನಿಂದ ಬಳಲುತ್ತಿರುವ ಕ್ರಿಸ್ ವೋಕ್ಸ್, ಅನಿವಾರ್ಯವಾದ್ದಲ್ಲಿ ತಂಡಕ್ಕಾಗಿ ಬ್ಯಾಟಿಂಗ್ ಮಾಡಲು ತಯಾರಿದ್ದಾರೆ' ಎಂದು ರೂಟ್ ಖಚಿತಪಡಿಸಿದ್ದಾರೆ.
ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ಗೆಲುವಿಗೆ ನಾಲ್ಕು ವಿಕೆಟ್ ಬಾಕಿ ಇರುವಂತೆಯೇ 35 ರನ್‌ಗಳ ಅವಶ್ಯಕತೆಯಿದೆ.
ಗಾಯಾಳು ವೋಕ್ಸ್ ಬ್ಯಾಟಿಂಗ್ ಮಾಡುತ್ತಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ರೂಟ್, 'ನೀವು ಅವರನ್ನು ಬಿಳಿ ಜೆರ್ಸಿಯಲ್ಲಿ ನೋಡಿರಬಹುದು. ತಂಡಕ್ಕೆ ಅಗತ್ಯವಿದ್ದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧವಾಗಿದ್ದಾರೆ. ಈ ಸರಣಿಯು ಅಷ್ಟೊಂದು ಮಹತ್ವವನ್ನುಪಡೆದುಕೊಂಡಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.