
ಎಂ.ಎಸ್ ಧೋನಿ
ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿಯವರು, ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ವರ್ಷಗಳೇ ಕಳೆದಿವೆ. ಆದರೆ, ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ.
ಎಂ.ಎಸ್. ಧೋನಿಯವರ ಐಪಿಎಲ್ ನಿವೃತ್ತಿ ಕುರಿತಂತೆ ಆಗಾಗ ಊಹಾಪೋಹಗಳು ಹರಿದಾಡುತ್ತಿರುತ್ತವೆ. ಆದರೆ, 2026ರ ಐಪಿಎಲ್ ಆವೃತ್ತಿ ಅವರ ಕೊನೆಯ ಸೀಸನ್ ಆಗುವ ಸಾಧ್ಯತೆ ಇದೆ. ಅದಕ್ಕೆ ಕಾರಣ ಅವರಿಗೆ ಈಗಾಗಲೇ 44 ವರ್ಷ ವಯಸ್ಸಾಗಿರುವುದು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ತೆಗೆದುಕೊಂಡಿರುವ ನಿರ್ಧಾರಗಳು.
ಟ್ರೇಡ್ ಮೂಲಕ ಸಂಜು ಖರೀದಿ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ದೊಡ್ಡ ಟ್ರೇಡ್‌ನ ಭಾಗವಾಗಿ ರಾಜಸ್ಥಾನ ರಾಯಲ್ಸ್ ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಬರೋಬ್ಬರಿ ₹18 ಕೋಟಿಗೆ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಸಿಎಸ್‌ಕೆ ಭಾಗವಾಗಿದ್ದ ರವೀಂದ್ರ ಜಡೇಜಾರನ್ನು ಹಾಗೂ ಯುವ ಆಟಗಾರ ಸ್ಯಾಮ್ ಕರನ್‌ರನ್ನು ಆರ್‌ಆರ್ ತಂಡಕ್ಕೆ ಬಿಟ್ಟುಕೊಟ್ಟಿದೆ.
ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿರುವ ಸಂಜು ಸ್ಯಾಮ್ಸನ್‌ರನ್ನು ಖರೀದಿಸುವ ಮೂಲಕ ಸಿಎಸ್‌ಕೆ ತಂಡ ವಿಕೆಟ್ ಕೀಪಿಂಗ್ ಜೊತೆಗೆ ಋತುರಾಜ್ ಗಾಯಕವಾಡ್ ಅವರಿಗೆ ಮಾರ್ಗದರ್ಶನ ನೀಡಲು ಸಹಾಯವಾಗುವಂತೆ ಯೋಜನೆ ರೂಪಿಸಿದೆ.
ಅನ್ಕ್ಯಾಪ್ಡ್ ಆಟಗಾರನಿಗೆ ₹14.2 ಕೋಟಿ
ಧೋನಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಜೊತೆಗೆ ಫಿನಿಷರ್ ಆಗಿಯೂ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಸಂಜು ವಿಕೆಟ್ ಕೀಪರ್ ಆಗಿ ಧೋನಿ ಸ್ಥಾನ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಅವರು ಅಗ್ರಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಆಟಗಾರ. ಆ ಕಾರಣಕ್ಕಾಗಿಯೇ ವಿಕೆಟ್ ಕೀಪಿಂಗ್ ಜೊತೆಗೆ ಫಿನಿಷ್ ಮಾಡುವ ಸಾಮರ್ಥ್ಯ ಹೊಂದಿರುವ 19 ವರ್ಷದ ಕಾರ್ತಿಕ್ ಶರ್ಮಾರಿಗೆ ಬರೋಬ್ಬರಿ ₹14.2 ಕೋಟಿ ನೀಡಿ ಖರೀದಿಸಿದೆ.
ಆ ಮೂಲಕ ಧೋನಿಯವರ ಫಿನಿಷರ್ ಜವಾಬ್ದಾರಿ ನಿಭಾಯಿಸಲು ಈ ಆಟಗಾರ ಸೂಕ್ತ ಎಂದು ಸಿಎಸ್‌ಕೆ ಫ್ರಾಂಚೈಸಿ ತೀರ್ಮಾನಿಸಿದೆ. ಒಟ್ಟಾರೆಯಾಗಿ, ಧೋನಿಯವರ ನಾಯಕತ್ವ, ಫಿನಿಷಿಂಗ್ ಹಾಗೂ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ₹32.20 ಕೋಟಿ ಹಣ ಖರ್ಚು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.