ADVERTISEMENT

ಜಿಂಬಾಬ್ವೆ ಎದುರು ಪರಾಕ್ರಮ: ನ್ಯೂಜಿಲೆಂಡ್‌ಗೆ ಟೆಸ್ಟ್ ಕ್ರಿಕೆಟ್‌ನ 3ನೇ ದೊಡ್ಡ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಆಗಸ್ಟ್ 2025, 14:47 IST
Last Updated 9 ಆಗಸ್ಟ್ 2025, 14:47 IST
<div class="paragraphs"><p>ನ್ಯೂಜಿಲೆಂಡ್‌ ತಂಡದ ಆಟಗಾರರು</p></div>

ನ್ಯೂಜಿಲೆಂಡ್‌ ತಂಡದ ಆಟಗಾರರು

   

ಕೃಪೆ: @ICC

ಬುಲವಾಯೊ (ಜಿಂಬಾಬ್ವೆ): ಆತಿಥೇಯ ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲೂ ಪರಾಕ್ರಮ ಮೆರೆದ ನ್ಯೂಜಿಲೆಂಡ್‌, ಎರಡು ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.

ADVERTISEMENT

ಬುಲವಾಯೊದಲ್ಲಿ ನಡೆದ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 359 ರನ್‌ ಅಂತರದ ಜಯ ಸಾಧಿಸಿದ ನ್ಯೂಜಿಲೆಂಡ್‌, ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಮೂರನೇ ಅತಿದೊಡ್ಡ ಗೆಲುವು ಗಳಿಸಿದ ದಾಖಲೆ ಬರೆಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ, ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 125 ರನ್‌ಗೆ ಆಲೌಟ್‌ ಆಯಿತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌, ಡೆವೋನ್‌ ಕಾನ್ವೇ (153 ರನ್‌), ಹೆನ್ರಿ ನಿಕೋಲಸ್‌ (ಅಜೇಯ 150 ರನ್‌) ಹಾಗೂ ರಚಿನ್‌ ರವೀಂದ್ರ (ಅಜೇಯ 165 ರನ್) ಸಿಡಿಸಿದ ಅಮೋಘ ಶತಕಗಳ ಬಲದಿಂದ ಕೇವಲ 3 ವಿಕೆಟ್‌ಗೆ 601 ರನ್ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

476 ರನ್‌ಗಳ ಭಾರಿ ಹಿನ್ನಡೆಯೊಂದಿಗೆ ಬ್ಯಾಟಿಂಗ್‌ ಇಳಿದ ಜಿಂಬಾಬ್ವೆ, ಎರಡನೇ ಇನಿಂಗ್ಸ್‌ನಲ್ಲೂ ಸುಧಾರಿತ ಪ್ರದರ್ಶನ ನೀಡಲಿಲ್ಲ. 3ನೇ ಕ್ರಮಾಂಕದ ಬ್ಯಾಟರ್‌ ನಿಕ್‌ ವೆಲ್ಚ್‌ 47 ರನ್‌ ಗಳಿಸಿದ್ದು ಬಿಟ್ಟರೆ, ಯಾರೊಬ್ಬರೂ ಕಿವೀಸ್‌ ದಾಳಿ ಎದುರು ಎದೆಯೊಡ್ಡಿ ನಿಲ್ಲಲಿಲ್ಲ. ನಾಯಕ ಕ್ರೇಗ್ ಇರ್ವಿನ್‌ 17 ರನ್‌ ಗಳಿಸಿದರು. ಉಳಿದ ಯಾರೂ ಎರಡಂಕಿಯನ್ನೂ ಗಳಿಸಲಿಲ್ಲ. ಹೀಗಾಗಿ, 117 ರನ್‌ಗೆ ಎರಡನೇ ಇನಿಂಗ್ಸ್‌ನಲ್ಲೂ ಸರ್ವಪತನ ಕಂಡಿತು.

ನ್ಯೂಜಿಲೆಂಡ್‌ ಪರ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆದಿದ್ದ ಝಕೆರಿ ಫೌಕ್ಸ್‌, ಈ ಬಾರಿ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದರು. ಕಳೆದ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಪಡೆದಿದ್ದ ಮ್ಯಾಟ್‌ ಹೆನ್ರಿ ಎರಡು ವಿಕೆಟ್‌ ಪಡೆದರು. ಜೇಕಬ್‌ ಡಫ್ಫಿ (2) ಮತ್ತು ಮ್ಯಾಥ್ಯೂ ಫಿಷರ್‌ (1) ಉಳಿದ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು.

ಹೀಗಾಗಿ, ಇನಿಂಗ್ಸ್‌ ಹಾಗೂ 359 ರನ್‌ ಅಂತರದ ಜಯ ಸಾಧಿಸಿದ ನ್ಯೂಜಿಲೆಂಡ್‌, ದೀರ್ಘ ಮಾದರಿಯಲ್ಲಿ ಅತಿದೊಡ್ಡ ಜಯ ಸಾಧಿಸಿದ ತಂಡಗಳ ಸಾಲಿನಲ್ಲಿ ವೆಸ್ಟ್ ಇಂಡೀಸ್‌ ಪಡೆಯ 65 ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯಿತು.

ಟೆಸ್ಟ್ ಕ್ರಿಕೆಟ್‌ನ‌ಲ್ಲಿ ಅತಿ ದೊಡ್ಡ ಜಯ

1. ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ಗೆ ಇನಿಂಗ್ಸ್‌ ಹಾಗೂ 579 ರನ್‌ ಜಯ (1938)
ಮೊದಲ ಇನಿಂಗ್ಸ್‌:
ಇಂಗ್ಲೆಂಡ್‌ 903/7 ಡಿಕ್ಲೇರ್‌, ಆಸ್ಟ್ರೇಲಿಯಾ 201ಕ್ಕೆ ಆಲೌಟ್‌
ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ 123ಕ್ಕೆ ಆಲೌಟ್‌

2. ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾಗೆ ಇನಿಂಗ್ಸ್‌ ಹಾಗೂ 360 ರನ್‌ ಜಯ (2002)
ಮೊದಲ ಇನಿಂಗ್ಸ್‌
: ಆಸ್ಟ್ರೇಲಿಯಾ 652/7 ಡಿಕ್ಲೇರ್‌, ದಕ್ಷಿಣ ಆಫ್ರಿಕಾ 159ಕ್ಕೆ ಆಲೌಟ್‌
ಎರಡನೇ ಇನಿಂಗ್ಸ್‌: ದಕ್ಷಿಣ ಆಫ್ರಿಕಾ 133ಕ್ಕೆ ಆಲೌಟ್‌

3. ಜಿಂಬಾಬ್ವೆ ಎದುರು ನ್ಯೂಜಿಲೆಂಡ್‌ಗೆ ಇನಿಂಗ್ಸ್‌ ಹಾಗೂ 359 ರನ್‌ ಜಯ (2025)
ಮೊದಲ ಇನಿಂಗ್ಸ್‌
: ಜಿಂಬಾಬ್ವೆ 125ಕ್ಕೆ ಆಲೌಟ್‌, ನ್ಯೂಜಿಲೆಂಡ್‌ 601/3 ಡಿಕ್ಲೇರ್‌
ಎರಡನೇ ಇನಿಂಗ್ಸ್‌: ಜಿಂಬಾಬ್ವೆ  117ಕ್ಕೆ ಆಲೌಟ್‌

4. ಭಾರತದ ವಿರುದ್ಧ ವೆಸ್ಟ್ ಇಂಡೀಸ್‌ಗೆ ಇನಿಂಗ್ಸ್‌ ಹಾಗೂ 336 ರನ್‌ ಜಯ (1958/59)
ಮೊದಲ ಇನಿಂಗ್ಸ್‌
: ವೆಸ್ಟ್ ಇಂಡೀಸ್‌ 614/5 ಡಿಕ್ಲೇರ್‌, ಭಾರತ 124ಕ್ಕೆ ಆಲೌಟ್‌
ಎರಡನೇ ಇನಿಂಗ್ಸ್‌: ಭಾರತ 154ಕ್ಕೆ ಆಲೌಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.