ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಭಾರತದ ಆಟಗಾರರು (ಒಳಚಿತ್ರದಲ್ಲಿ ಪಿಸಿಬಿ ಲೋಗೊ)
ಲಾಹೋರ್: ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿಯ ಸಮಾರೋಪ ಸಮಾರಂಭದಲ್ಲಿ ಸಿಇಒ ಮತ್ತು ಟೂರ್ನಿಯ ನಿರ್ದೇಶಕ ಸುಮೇರ್ ಅಹ್ಮದ್ ಸೈಯ್ಯದ್ ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ತನ್ನ ಪ್ರತಿಭಟನೆ ದಾಖಲಿಸಿದೆ.
ಅಹ್ಮದ್ ಅವರನ್ನು ಟ್ರೋಫಿ ಪ್ರದಾನ ಸಮರಂಭದ ವೇಳೆ ವೇದಿಕೆಗೆ ಕರೆಯದ ಸಂಬಂಧ ಐಸಿಸಿ ನೀಡಿರುವ ವಿವರಣೆಯಿಂದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಸಮಾಧಾನಗೊಂಡಿಲ್ಲ ಎಂದು ಪಿಸಿಬಿಯ ಮೂಲ ತಿಳಿಸಿದೆ.
‘ಮೊಹ್ಸಿನ್ ನಖ್ವಿ ಅವರನ್ನು ವೇದಿಕೆಗೆ ಆಮಂತ್ರಿಸಲು ಐಸಿಸಿ ಸಿದ್ಧತೆ ನಡೆಸಿತ್ತು. ಆದರೆ ಅವರು ಫೈನಲ್‌ಗೆ ಬರದ ಕಾರಣ ಅದು ತನ್ನ ಯೋಜನೆ ಬದಲಾಯಿಸಿತು’ ಎಂದು ಮೂಲವೊಂದು ತಿಳಿಸಿದೆ. ಆದರೆ ಈ ಸಮಜಾಯಿಸಿ ತಿರಸ್ಕರಿಸಿರುವ ಪಿಸಿಬಿ, ತನಗೆ ಆತಿಥ್ಯದ ಸ್ಥಾನಮಾನ ಇದ್ದರೂ ಟೂರ್ನಿಯ ವೇಳೆ ಐಸಿಸಿ ಹಲವು ತಪ್ಪುಗಳನ್ನು ಮಾಡಿದೆ ಎಂದಿದ್ದಾರೆ.
ಭಾರತ– ಬಾಂಗ್ಲಾದೇಶ ಪಂದ್ಯದ ನೇರ ಪ್ರಸಾರದ ವೇಳೆ ಸಿಟಿ2025 ಲೋಗೊ ಬದಲಾವಣೆ, ಲಾಹೋರಿನಲ್ಲಿ ಆಸ್ಟ್ರೇಲಿಯಾ– ಇಂಗ್ಲೆಂಡ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆಯನ್ನು ಕೆಲವು ಸೆಕೆಂಡುಗಳ ಕಾಲ ನುಡಿಸಿದ್ದೂ ಇದರಲ್ಲಿ ಸೇರಿದೆ ಎಂದು ಅದು ಹೇಳಿದೆ. ರಾಷ್ಟ್ರಗೀತೆ ಪಟ್ಟಿಯಲ್ಲಾದ ವ್ಯತ್ಯಾಸದಿಂದ ಈ ಅಚಾತುರ್ಯ ನಡೆದಿದೆ ಎಂದು ಐಸಿಸಿ ಹೇಳಿತ್ತು.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಭಾರತದ ಆಟಗಾರರಿಗೆ ವೈಟ್ ಜಾಕೆಟ್ ಮತ್ತು ಅಧಿಕಾರಿಗಳಿಗೆ ಪದಕ ಪ್ರದಾನ ಮಾಡಿದರು. ಐಸಿಸಿ ಅಧ್ಯಕ್ಷ ಜಯ್ ಶಾ ಅವರು ನಾಯಕ ರೋಹಿತ್ ಶರ್ಮಾ ಅವರಿಗೆ ಟ್ರೋಫಿ ಪ್ರದಾನ ಮಾಡಿದರಲ್ಲದೇ, ಆಟಗಾರರಿಗೆ ಪದಕ ಪ್ರದಾನ ಮಾಡಿದ್ದರು.
ಬಿಸಿಸಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಸಿಇಒ ರೋಜರ್ ಟೂಸ್ ಅವರೂ ವೇದಿಕೆಯಲ್ಲಿದ್ದರು.
ಶೋಯಬ್ ಅಖ್ತರ್ ಅಸಮಾಧಾನ
ಕರಾಚಿ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು ಹಾಜರಾಗದಿರುವುದಕ್ಕೆ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಜಯಿಸಿತು. ಆದರೆ ನಾನು ಗಮನಿಸಿದಂತೆ ಪಿಸಿಬಿಯ ಯಾವುದೇ ಪ್ರತಿನಿಧಿಯು ಟ್ರೋಫಿ ಪ್ರದಾನ ಸಮಾರಂಭದಲ್ಲಿ ಹಾಜರಾಗಿರಲಿಲ್ಲ. ಪಾಕಿಸ್ತಾನು ಈ ಟೂರ್ನಿಗೆ ಆತಿಥ್ಯ ವಹಿಸಿತ್ತು. ಆದರೂ ಯಾಕೆ ಯಾವ ಪ್ರತಿನಿಧಿಯೂ ಇರಲಿಲ್ಲ? ಇದೊಂದು ವಿಶ್ವಮಟ್ಟದ ವೇದಿಕೆ. ನೀವು (ಪಿಸಿಬಿ) ಅಲ್ಲಿ ಇರಬೇಕಿತ್ತು. ಇದು ನನ್ನ ಯೋಚನೆಗೆ ಮೀರಿದ್ದು. ಆದರೆ ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಈ ಪ್ರಕರಣದಿಂದ ನನಗೆ ಬೇಸರವಾಗಿದೆ’ ಎಂದು ಶೋಯಬ್ ‘ಎಕ್ಸ್’ನಲ್ಲಿ ಸಂದೇಶ ಹಾಕಿದ್ದಾರೆ.
ಕಾರ್ಯಕ್ರಮದಲ್ಲಿ ಐಸಿಸಿ ಮುಖ್ಯಸ್ಥ ಜಯ್ ಶಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಭಾರತದ ಆಟಗಾರರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.