ADVERTISEMENT

IPL 2021 Auction: ಕೇರಳ ವೇಗಿ ಶ್ರೀಶಾಂತ್ ಐಪಿಎಲ್ ಕನಸು ಭಗ್ನ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2021, 18:09 IST
Last Updated 12 ಫೆಬ್ರುವರಿ 2021, 18:09 IST
ಎಸ್. ಶ್ರೀಶಾಂತ್
ಎಸ್. ಶ್ರೀಶಾಂತ್   

ಮುಂಬೈ: ಕೇರಳದ ಕ್ರಿಕೆಟಿಗ ಎಸ್‌. ಶ್ರೀಶಾಂತ್ ಅವರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯಲ್ಲಿ ಆಡುವ ಅವಕಾಶ ಲಭಿಸಿಲ್ಲ.

ಇದೇ 18ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಅದ ಕ್ಕಾಗಿ ಹರಾಜಾಗುವ 292 ಆಟಗಾರರ ಅಂತಿಮ ಪಟ್ಟಿಯನ್ನು ಐಪಿಎಲ್ ಆಡಳಿತ ಸಮಿತಿಯು ಬಿಡು ಗಡೆ ಮಾಡಿದೆ. ಅದರಲ್ಲಿ ಶ್ರೀಶಾಂತ್ ಹೆಸರು ಇಲ್ಲ.

ಶ್ರೀಶಾಂತ್ ಮೇಲೆ 2013ರ ಐಪಿಎಲ್‌ನಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಆರೋಪ ಇತ್ತು. ಅದಕ್ಕಾಗಿ ನಿಷೇಧ ಶಿಕ್ಷೆಯನ್ನು ಎದುರಿಸಿರುವ ಶ್ರೀಶಾಂತ್, ಇತ್ತೀಚೆಗಷ್ಟೇ ಆರೋಪದಿಂದ ಮುಕ್ತಗೊಂಡು ದೇಶೀಯ ಕ್ರಿಕೆಟ್‌ಗೆ ಮರಳಿದ್ದರು.

ADVERTISEMENT

10 ಆಟಗಾರರಿಗೆ ₹ 2 ಕೋಟಿ ಮೂಲಬೆಲೆ: ಈ ಸಲದ ಹರಾಜಿನಲ್ಲಿ ಭಾರತದ ಇಬ್ಬರು ಸೇರಿದಂತೆ ಹತ್ತು ಆಟಗಾರರ ಮೂಲಬೆಲೆಯನ್ನು ₹ 2 ಕೋಟಿ ಮೂಲಬೆಲೆ ನಿಗದಿ ಮಾಡಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ.

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಇಂಗ್ಲೆಂಡ್‌ನ ಮೊಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಪ್ಲಂಕೆಟ್, ಜೇಸನ್ ರಾಯ್, ಮಾರ್ಕ್ ವುಡ್, ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ಗರಿಷ್ಠ ಮೂಲ ದರ ನಿಗದಿಯಾಗಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ. ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಕೇದಾರ ಜಾಧವ್ ಇದ್ದಾರೆ.

ಒಟ್ಟು 1,114 ಆಟಗಾರರು ನೋಂದಣಿ ಮಾಡಿಕೊಂಡಿದ್ದರು. 8 ತಂಡಗಳು ಸಂಭಾವ್ಯ ಆಟಗಾರರ ಪಟ್ಟಿಯನ್ನು ನೀಡಿದ ಬಳಿಕ ಆಟಗಾರರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.

ಟೆಸ್ಟ್ ಪರಿಣತರಾದ ಹನುಮ ವಿಹಾರಿ (₹ 1 ಕೋಟಿ) ಮತ್ತು ಚೇತೆಶ್ವರ್ ಪೂಜಾರ (₹ 50ಲಕ್ಷ) ಅವರೂ ಪಟ್ಟಿಯಲ್ಲಿದ್ದಾರೆ.

ಅರ್ಜುನ್ ತೆಂಡೂಲ್ಕರ್‌ಗೆ ₹20 ಲಕ್ಷ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರೂ ಐಪಿಎಲ್ ಆಟಗಾರರ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರಿಗೆ ₹ 20 ಲಕ್ಷ ಮೂಲಬೆಲೆಯನ್ನು ನಿಗದಿಗೊಳಿಸಲಾಗಿದೆ.

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಮುಂಬೈ ತಂಡದಲ್ಲಿ ಅರ್ಜುನ್‌ಗೆ ಸ್ಥಾನ ಲಭಿಸಿರಲಿಲ್ಲ. ಅವರು ಸಂಭವನೀಯರ ಪಟ್ಟಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.