ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್
ಕೃಪೆ: ಪಿಟಿಐ
ಪರ್ತ್: ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ತಮ್ಮ ಸಂಬಂಧ ಎಂದಿನಂತೆ ಗಟ್ಟಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಹರಿದಾಡುತ್ತಿರುವ ವದಂತಿಗಳಂತೆ ಏನೂ ಆಗಿಲ್ಲ ಎಂದು ಭಾರತದ ಏಕದಿನ ಕ್ರಿಕೆಟ್ ತಂಡದ ನೂತನ ನಾಯಕ ಶುಭಮನ್ ಗಿಲ್ ಹೇಳಿದ್ದಾರೆ.
ಟೀಂ ಇಂಡಿಯಾವನ್ನು 2023ರ ಏಕದಿನ ಮಾದರಿಯಲ್ಲಿ ಫೈನಲ್‌ಗೇರಿಸಿದ್ದ, 2024ರ ಟಿ20 ವಿಶ್ವಕಪ್ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿ (ಏಕದಿನ) ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಗಿಲ್‌ಗೆ ಹೊಣೆ ನೀಡಲಾಗಿದೆ. ರೋಹಿತ್‌ಗೂ ಮುನ್ನ ಕೊಹ್ಲಿ, ಭಾರತ ತಂಡವನ್ನು ಮುನ್ನಡೆಸಿದ್ದರು.
ರೋಹಿತ್ ಹಾಗೂ ಕೊಹ್ಲಿ ಅವರು ಟಿ20 ಮತ್ತು ಟೆಸ್ಟ್ ಮಾದರಿಗೆ ಈಗಾಗಲೇ ವಿದಾಯ ಹೇಳಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಷ್ಟೇ ಮುಂದುವರಿದಿರುವ ಈ ಇಬ್ಬರು, 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆಡುವ ಯೋಜನೆಯಲ್ಲಿದ್ದಾರೆ. ಆದರೆ, ಅಷ್ಟೊತ್ತಿಗೆ ರೋಹಿತ್‌ಗೆ 40 ವರ್ಷ ಹಾಗೂ ಕೊಹ್ಲಿಗೆ 38 ವರ್ಷವಾಗಲಿರುವ ಕಾರಣ, ಆ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಹೇಗೆ ಆಡಲಿದ್ದಾರೆ ಎಂಬುದು ನಿರ್ಣಾಯಕವಾಗಲಿದೆ.
ನಾಯಕನಾಗಿ ಮೊದಲ ಸವಾಲು
ಏಕದಿನ ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ಗಿಲ್ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಮೊದಲ ಪಂದ್ಯವು ನಾಳೆಯಿಂದ (ಭಾನುವಾರ) ಪರ್ತ್‌ನಲ್ಲಿ ನಡೆಯಲಿದೆ.
ಅದಕ್ಕೂ ಮುನ್ನ ಸಾನ್ ನದಿ ತೀರದಲ್ಲಿ ಇಂದು (ಶನಿವಾರ) ನಡೆದ ಮಾಧ್ಯಮಗೋಷ್ಠಿಯಲ್ಲಿ, ವದಂತಿಗಳನ್ನು ಅಲ್ಲಗಳೆಯುವಂತೆ ಮಾತನಾಡಿದ್ದಾರೆ ಗಿಲ್.
'ಹೊರಗೆ ಒಂದು ನಿರೂಪಣೆ ಸಾಗುತ್ತಿದೆ. ಆದರೆ, ರೋಹಿತ್ ಶರ್ಮಾ ಜೊತೆಗಿನ ನನ್ನ ಸಂಬಂಧದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಾನು ಯಾವಾಗ ಏನೇ ಕೇಳಿದರೂ ಅವರು ನೆರವಿಗೆ ನಿಲ್ಲುತ್ತಾರೆ' ಎಂದಿದ್ದಾರೆ.
'ವಿರಾಟ್ ಹಾಗೂ ರೋಹಿತ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದೇನೆ. 'ನೀವು ತಂಡ ಮುನ್ನಡೆಸುತ್ತಿದ್ದರೆ ಏನು ಮಾಡುತ್ತಿದ್ದಿರಿ ಎಂದೇ ಕೇಳುತ್ತೇನೆ'. ಸಲಹೆಗಳನ್ನು ನೀಡಲು ಅವರು ಹಿಂದೇಟು ಹಾಕುವುದಿಲ್ಲ' ಎಂದು ಗಿಲ್ ಹೇಳೀದ್ದಾರೆ.
25 ವರ್ಷ ಗಿಲ್, ಏಕದಿನ ಮಾದರಿಯಲ್ಲಿ ಈವರೆಗೆ 55 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 59.04ರ ಸರಾಸರಿಯಲ್ಲಿ 2,775 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ದ್ವಿಶತಕ, 8 ಶತಕ ಹಾಗೂ 15 ಅರ್ಧಶತಕಳಿವೆ.
ದೊಡ್ಡ ಜವಾಬ್ದಾರಿ ತಮ್ಮ ಮುಂದಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ಗಿಲ್, ಇಬ್ಬರು ಮಾಜಿ ನಾಯಕರ ಸಹಕಾರದ ಅಗತ್ಯವಿದೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ. 'ತಂಡವನ್ನು ಮುಂದಕ್ಕೆ ಕೊಂಡೊಯ್ಯುವ ಕುರಿತು, ವಿರಾಟ್ ಮತ್ತು ರೋಹಿತ್ ಅವರೊಂದಿಗೆ ಸಾಕಷ್ಟು ಮಾತುಕತೆ ನಡೆಸಿದ್ದೇನೆ. ಅವರ ಕಲಿಕೆ ಮತ್ತು ಅನುಭವಗಳು ನಮಗೆ ನೆರವಾಗಲಿವೆ' ಎಂದಿದ್ದಾರೆ.
ನಾಯಕರಾಗಿ ಕೊಹ್ಲಿ, ರೋಹಿತ್ ಸಾಧನೆ
ವಿರಾಟ್ ಕೊಹ್ಲಿ
ಪಂದ್ಯ: 95
ಜಯ: 65
ಸೋಲು: 27
ಟೈ: 1
ರದ್ದು: 2
ಜಯದ ಪ್ರಮಾಣ: ಶೇ. 70.43
ರೋಹಿತ್ ಶರ್ಮಾ
ಪಂದ್ಯ: 56
ಜಯ: 42
ಸೋಲು: 12
ಟೈ: 1
ರದ್ದು: 1
ಜಯದ ಪ್ರಮಾಣ: ಶೇ. 77.27
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.