ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್
ನವದೆಹಲಿ: ಭಾರತ ತಂಡದಲ್ಲಿ ರೋಹಿತ್ ಶರ್ಮಾ ಅವರು ಕಾಪಾಡಿಕೊಂಡಿದ್ದ ಡ್ರೆಸ್ಸಿಂಗ್ ರೂಮ್‌ನ ಶಾಂತತೆಯನ್ನು ಮುಂದುವರೆಸಲು ಪ್ರಯತ್ನಿಸುತ್ತೇನೆ ಎಂದು ಟೀಂ ಇಂಡಿಯಾ ಏಕದಿನ ತಂಡಕ್ಕೆ ನೂತನ ನಾಯಕನಾಗಿ ನೇಮಕಗೊಂಡಿರುವ ಶುಭಮನ್ ಗಿಲ್ ಗುರುವಾರ ಹೇಳಿದ್ದಾರೆ.
ಈಗಾಗಲೇ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ 25 ವರ್ಷದ ಗಿಲ್, ಅಕ್ಟೋಬರ್ 19 ರಿಂದ 25ರವರೆಗೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದಾರೆ.
ಏಕದಿನ ನಾಯಕತ್ವ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಶುಭಮನ್ ಗಿಲ್, 'ರೋಹಿತ್ ಭಾಯ್ ಅವರ ಶಾಂತತೆ ಮತ್ತು ಅವರು ತಂಡದಲ್ಲಿ ಸೃಷ್ಟಿಸಿದ್ದ ಸ್ನೇಹಪರ ವಾತಾವರಣ ನಿರ್ಮಿಸುತ್ತಿದ್ದ ಬಗೆಯನ್ನು ಅಳವಡಿಸಿಕೊಳ್ಳಲು ನಾನು ಕೂಡ ಬಯಸುತ್ತೇನೆ' ಎಂದು ಹೇಳಿದರು.
ಅಂತರರಾಷ್ಟ್ರೀಯ ಟಿ–20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಮುಂದಿನ ದಿನಗಳಲ್ಲಿ ಏಕದಿನ ಪಂದ್ಯಾವಳಿಗಳಲ್ಲಿ ತಂಡದಲ್ಲಿ ಇರುತ್ತಾರಾ? ಇಲ್ಲವಾ? ಎಂಬ ಗೊಂದಲಕ್ಕೂ ಗಿಲ್ ತೆರೆ ಎಳೆದಿದ್ದಾರೆ.
'ಇಬ್ಬರು ಕೂಡ ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಬಹಳ ಕಡಿಮೆ ಜನರಿಗೆ ಮಾತ್ರ ಇಷ್ಟೊಂದು ಕೌಶಲ್ಯ ಇರಲು ಸಾಧ್ಯ. ನಮಗೆ ಅವರ ಅಗತ್ಯವಿದೆ' ಎಂದು ಗಿಲ್ ಪ್ರತಿಕ್ರಿಯೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.