ADVERTISEMENT

ಮಾಸ್ಟರ್ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್ 100ನೇ ಶತಕ ಸಿಡಿಸಿ ಇಂದಿಗೆ 10 ವರ್ಷ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2022, 9:33 IST
Last Updated 16 ಮಾರ್ಚ್ 2022, 9:33 IST
ಸಚಿನ್ ತೆಂಡೂಲ್ಕರ್‌
ಸಚಿನ್ ತೆಂಡೂಲ್ಕರ್‌   

ನವದೆಹಲಿ: ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ನೇ ಶತಕ ಸಿಡಿಸಿ ಇಂದಿಗೆ 10 ವರ್ಷಗಳು ಕಳೆದಿವೆ.

ಹೌದು, 2012ರ ಮಾರ್ಚ್‌ 16ರಂದು ಢಾಕಾದಲ್ಲಿ ನಡೆದ ಏಪ್ಯಾಕಪ್‌ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸಚಿನ್ ಶತಕ ಗಳಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಜತೆಗೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರೆನಿಸಿಕೊಂಡರು.

ಈ ಪಂದ್ಯದಲ್ಲಿ ಸಚಿನ್ 147 ಎಸೆತಗಳಲ್ಲಿ 114 ರನ್ ಗಳಿಸಿದ್ದರು. ಇದರಲ್ಲಿ 12 ಬೌಂಡರಿ, 1 ಸಿಕ್ಸರ್ ಸೇರಿದ್ದವು. ಶತಕಕ್ಕಾಗಿ ಸಚಿನ್ 138 ಎಸೆತಗಳನ್ನು ಆಡಿದರು. ಆದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಬಾಂಗ್ಲಾ ಪಡೆ 49.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.

ADVERTISEMENT

ಸಚಿನ್‌, 2012ರ ಡಿಸೆಂಬರ್‌ನಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 463 ಏಕದಿನ ಪಂದ್ಯಗಳನ್ನು ಆಡಿರುವ ಅವರು 18,426 ರನ್ ಗಳಿಸಿದ್ದಾರೆ. ಬಳಿಕ 2013ರ ನವೆಂಬರ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 15,921 ರನ್ ಕಲೆ ಹಾಕಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಗಳಿಸಿದ ಆಟಗಾರರು

ಸಚಿನ್ ತೆಂಡೂಲ್ಕರ್ (ಭಾರತ) – 100

ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) –71

ವಿರಾಟ್ ಕೊಹ್ಲಿ (ಭಾರತ) –70

ಕುಮಾರ ಸಂಗಾಕ್ಕರ (ಶ್ರೀಲಂಕಾ) –63

ಜ್ಯಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) –62

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.