ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಿಕ್ಕಿರಿದು ಸೇರಿದ್ದ ಆರ್‌ಸಿಬಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು
ಚಿತ್ರ: ಪುಷ್ಕರ್ ವಿ.
ಬೆಂಗಳೂರು: ಹದಿನೆಂಟು ವರ್ಷದ ಬಳಿಕ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವಕ್ಕೆ ಬುಧವಾರ ಸಾಗರೋಪಾದಿಯಲ್ಲಿ ಜನ ಹರಿದುಬಂದಿದ್ದು, ಆ ವೇಳೆ ಉಂಟಾದ ಕಾಲ್ತುಳಿತದಿಂದ 11 ಮಂದಿ ದುರಂತ ಸಾವು ಕಂಡರು.
ಆರ್‌ಸಿಬಿ ತಂಡ ನಗರಕ್ಕೆ ಬಂದಿಳಿಯುತ್ತಿದ್ದಂತೆ ಕಡಲಾಗಿದ್ದ ಸಂಭ್ರಮ, ಒಂದರ್ಧ ಗಂಟೆ ಕಳೆಯುವ ಹೊತ್ತಿಗೆ ಸಾವಿನ ಮನೆಯ ಶೋಕಾಚರಣೆಯ ಕಡೆಗೆ ತಿರುಗಿತು. ಕ್ರೀಡಾಂಗಣ ಹಾಗೂ ವಿಧಾನಸೌಧದ ಆವರಣದಲ್ಲಿ ನೆರೆದಿದ್ದ ಯುವ ಸಮೂಹಕ್ಕೆ ಈ ಯಾವುದೂ ಗಮನಕ್ಕೆ ಬರದೇ, ಕೇಕೆ ಹಾಕುತ್ತಲೇ ಇದ್ದರು. ಇತ್ತ ಕಾಲ್ತುಳಿತದಿಂದ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರೆ, ಅತ್ತ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸರ್ಕಾರದಿಂದ, ಬಳಿಕ ಕ್ರೀಡಾಂಗಣದಲ್ಲಿ ಆರ್‌ಸಿಬಿ ಫ್ರಾಂಚೈಸಿಯಿಂದ ತಂಡದ ಆಟಗಾರರಿಗೆ ಸನ್ಮಾನವೂ ನಡೆಯಿತು.
ನೂಕುನುಗ್ಗಲು ಹಾಗೂ ಕಾಲ್ತುಳಿತದಿಂದಾಗಿ 47 ಗಾಯಾಳುಗಳು ವೈದೇಹಿ ಆಸ್ಪತ್ರೆ, ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
ಕ್ರೀಡಾಂಗಣದ ಕೆಲವು ಗೇಟ್‌ಗಳ ಬಳಿ ಕಾಲ್ತುಳಿತ ಉಂಟಾದ ತಕ್ಷಣ ಆಕ್ರಂದನ, ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು. ನೂಕುನುಗ್ಗಲು ವೇಳೆ ಹಲವರು ಅಸ್ವಸ್ಥಗೊಂಡು ಕುಸಿದು ಬಿದ್ದರು. ಇನ್ನೂ ಕೆಲವರಿಗೆ
ಕೈ–ಕಾಲಿಗೆ ಗಾಯವಾಯಿತು.
ಸ್ಥಳದಲ್ಲಿದ್ದವರು ಅಂಗಿ ಕಳಚಿ ಗಾಯಗೊಂಡವರಿಗೆ ಗಾಳಿ ಬೀಸಲು ಪ್ರಯತ್ನಿಸಿದರು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ರಕ್ಷಣೆಯೂ ಸಾಧ್ಯವಾಗದೇ ಗಾಯಾಳುಗಳು ನರಳಾಡಿದರು. ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟರು.
ಗಾಯಗೊಂಡವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಇರಲಿಲ್ಲ. ಆಂಬುಲೆನ್ಸ್ ಇಲ್ಲದೆ ಗಾಯಾಳುಗಳನ್ನು ಪೊಲೀಸರು ಕೈಯಲ್ಲೇ ಎತ್ತಿಕೊಂಡು ಹೋಗಿ ರಕ್ಷಣೆ ಮಾಡಲು ಮುಂದಾದರು. ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಬಾಲಕ ಮೃತಪಟ್ಟರೆ, ಉಳಿದವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧದ ಆವರಣಕ್ಕೆ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಬಂದಿದ್ದರು.
ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ 35 ಸಾವಿರ ಆಸನಗಳ ವ್ಯವಸ್ಥೆಯಿದೆ. ಆದರೆ, ಮೂರು ಲಕ್ಷಕ್ಕೂ ಹೆಚ್ಚು ಜನರು ಬಂದಿದ್ದರು. ಇದರಿಂದ ಕೇಂದ್ರ ವಲಯದ ಕಬ್ಬನ್‌ಪಾರ್ಕ್ ಸುತ್ತಮುತ್ತ, ಮಹಾತ್ಮ ಗಾಂಧಿ ರಸ್ತೆ, ಕಸ್ತೂರ ಬಾ ರಸ್ತೆ, ಕ್ವೀನ್ಸ್ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್ ವೃತ್ತ, ಚಾಲುಕ್ಯ ವೃತ್ತ, ವಿಧಾನಸೌಧ ಸುತ್ತಮುತ್ತ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆರ್‌ಸಿಬಿ ಆಟಗಾರರನ್ನು ನೋಡಲು ಗೇಟ್ ಹಾಗೂ ಬ್ಯಾರಿಕೇಡ್ ಮೇಲೇರಲು ಮುಂದಾಗಿ ಹಲವರು ಕೈ–ಕಾಲು ಮುರಿದುಕೊಂಡಿದ್ದಾರೆ.
ಕ್ರೀಡಾಂಗಣದ ವಿವಿಧ ದ್ವಾರಗಳ ಬಳಿಯೇ ಉಚಿತ ಟಿಕೆಟ್ ನೀಡಲಾಗುವುದು ಎಂದು ಆರ್‌ಸಿಬಿ ತನ್ನ ವೆಬ್‌ಸೈಟ್‌ನಲ್ಲಿ ಬುಧವಾರ ಮಧ್ಯಾಹ್ನ ಮಾಹಿತಿ ನೀಡಿತ್ತು. ಅದಕ್ಕೂ ಮೊದಲು ವಿಧಾನಸೌಧ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಬಹುದು ಎಂದು ಭಾವಿಸಿ ಎರಡೂ ಸ್ಥಳಗಳಲ್ಲೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.
ಕಬ್ಬನ್ ರಸ್ತೆ ಕಡೆಯಿಂದ ಕ್ರೀಡಾಂಗಣಕ್ಕೆ ಪ್ರವೇಶಿಸುವ ಮುಖ್ಯದ್ವಾರದ ಬಳಿ ಮೊದಲು ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಗುಂಪು ಚದುರಿಸಲು ಲಾಠಿ ಬೀಸಿದ್ದರಿಂದ ಭಯದಲ್ಲಿ ಜನರು ಓಡಲು ಆರಂಭಿಸಿದರು. ಆಗ ನೆಲಕ್ಕೆ ಬಿದ್ದವರು ಅಸ್ವಸ್ಥಗೊಂಡರು.
‘ಗೇಟ್ ನಂಬರ್ 12ರ ಬಳಿಯೂ ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು. ಸ್ಲ್ಯಾಬ್‌ವೊಂದು ಕೆಳಕ್ಕೆ ಬಿತ್ತು. ಜನರು ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದರಿಂದ ಅವಘಡ ಸಂಭವಿಸಿದೆ. ಇನ್ನು ಆಟಗಾರರ ಪ್ರವೇಶ ದ್ವಾರದ ಬಳಿ ಕಿಕ್ಕಿರಿದು ಸೇರಿದ್ದರು. ಪೊಲೀಸರಿಗೂ ಅವರನ್ನು ನಿಯಂತ್ರಿಸುವುದು ಅಸಾಧ್ಯವಾಗಿತ್ತು’ ಎಂದು ಪ್ರತ್ಯಕ್ಷದರ್ಶಿ ಪವನ್ ಹೇಳಿದರು.
ಪಟ್ಟು ಹಿಡಿದ ಅಭಿಮಾನಿಗಳು: ಕ್ರೀಡಾಂಗಣದಲ್ಲಿ ಸಂಜೆ 5ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿತ್ತು. ನಿಗದಿತ ಸಮಯಕ್ಕೂ ಮೊದಲೇ ಸಾವಿರಾರು ಮಂದಿ ಆರ್‌ಸಿಬಿ ಅಭಿಮಾನಿಗಳು ಕ್ರೀಡಾಂಗಣದ ಬಳಿ ಸೇರಿದ್ದರು. ಕ್ರೀಡಾಂಗಣದ ಗೇಟ್ ಸಂಖ್ಯೆ 5 ಮತ್ತು 6ರ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ನಂತರ, ಗೇಟ್ ನಂಬರ್ 6ರಲ್ಲಿ ಕ್ರೀಡಾಂಗಣದ ಒಳಗೆ ನುಗ್ಗಲು ಯತ್ನಿಸಿದರು. ಅಲ್ಲಿಯೂ ಹಲವರು ಗಾಯಗೊಂಡರು.
‘ಗೇಟ್ ನಂ 18ರ ಬಳಿ ಅಭಿಮಾನಿಗಳಿಂದ ನೂಕುನುಗ್ಗಲು ಸಂಭವಿಸಿತು. ಇದರಿಂದಾಗಿ ಹಲವರು ಗಂಭೀರವಾಗಿ ಗಾಯಗೊಂಡರು. ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಲಾಠಿ ಬೀಸಿದರು. ಅತ್ತ, ಗೇಟ್ ನಂಬರ್ 12ರಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಆಗ, ಕ್ರೀಡಾಂಗಣದ ಸಿಬ್ಬಂದಿ ಗೇಟ್ ತೆರೆದು ಒಳಕ್ಕೆ ಬಿಟ್ಟರು. ಬ್ಯಾರಿಕೇಡ್ ತಳ್ಳಿ ಒಳಕ್ಕೆ ನುಗ್ಗಲು ಆರಂಭಿಸಿದಾಗ ಕಾಲ್ತುಳಿತ ಸಂಭವಿಸಿದೆ. ಈ ಸ್ಥಳದಲ್ಲಿ ಮಕ್ಕಳು, ಅವರ ತಂದೆ–ತಾಯಿ, ಯುವತಿಯರು, ಯುವಕರು ಗಾಯಗೊಂಡರು’ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು.
‘ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರು. ಒಂಬತ್ತು ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕ್ರೀಡಾಂಗಣದ ಗೇಟ್ ನಂ: 3, 6, 7, 10, 14, 21ರಲ್ಲಿ ನೂಕಾಟ, ತಳ್ಳಾಟ ನಡೆದಿತ್ತು’ ಎಂದು ಮೂಲಗಳು ಹೇಳಿವೆ.
ಲಾಠಿ ಬೀಸಿದ ಪೊಲೀಸರು, ಚಪ್ಪಲಿ ಬಿಟ್ಟು ಓಡಿದ ಜನರು...: ಕಾಲ್ತುಳಿತದ ಬಳಿಕ ಚಪ್ಪಲಿ, ಬ್ಯಾಗ್‌ಗಳನ್ನು ಬಿಟ್ಟು ಜನರು ಓಡಿದರು. ಕ್ರೀಡಾಂಗಣದ ಹಲವು ಗೇಟ್‌ಗಳ ಎದುರು ಚಪ್ಪಲಿಗಳ ರಾಶಿ ಬಿದ್ದಿದೆ. ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಪೊಲೀಸರು ಲಾಠಿ ಬೀಸಿದರು. ಗಾಯಗೊಂಡವರನ್ನು ಪೊಲೀಸರು ತಮ್ಮ ಜೀಪ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದರು.
ಮಧ್ಯಾಹ್ನ 1.30ರವರೆಗೂ ಮೆಟ್ರೊ ನಿಲ್ದಾಣಗಳಲ್ಲಿ, ಮೆಟ್ರೊ ರೈಲಿನಲ್ಲಿ, ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜನಸಂದಣಿ ಸಾಮಾನ್ಯವಾಗೇ ಇತ್ತು. ‘ಆರ್‌ಸಿಬಿ ತಂಡದ ಆಟಗಾರರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬರುತ್ತಾರೆ’, ‘ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಾಗತಿಸುತ್ತಾರೆ’, ‘ವಿಧಾನಸೌಧದಲ್ಲಿ ಅವರನ್ನು ಸನ್ಮಾನಿಸಲಾಗುತ್ತದೆ’, ‘ಅಲ್ಲಿಂದ ತೆರೆದ ಬಸ್‌ನಲ್ಲಿ ಅವರ ಮೆರವಣಿಗೆ ನಡೆಯುತ್ತದೆ’ ಎಂಬ ಮಾಹಿತಿ ಸುದ್ದಿವಾಹಿನಿಗಳಲ್ಲಿ ಬಿತ್ತರವಾಯಿತು. ಮಧ್ಯಾಹ್ನ 2ರ ವೇಳೆಗೆ ಜನರು ಈ ಸ್ಥಳಗಳತ್ತ ದೌಡಾಯಿಸಲಾರಂಭಿಸಿದರು.
ಭದ್ರತೆ ಕಾರಣಕ್ಕೆ ತೆರೆದ ಬಸ್‌ನಲ್ಲಿ ಮೆರವಣಿಗೆ ನಡೆಸಲಾಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ಕೆಲವೇ ನಿಮಿಷಗಳಲ್ಲಿ ಮೆರವಣಿಗೆ ರದ್ದಾಗಿದೆ ಎಂಬ ಸುದ್ದಿ ಹರಿದಾಡಿತು. ವಿರೋಧ ಪಕ್ಷಗಳ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್ ಮಾಡಿದವು. ಮೆರವಣಿಗೆ ನಡೆಯುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಮುಂದುವರೆದ ಕಾರಣ, ಆಟಗಾರರನ್ನು ಕಣ್ತುಂಬಿಕೊಳ್ಳಲು ಬಹುತೇಕ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದತ್ತ ಬರಲಾರಂಭಿಸಿದರು.
ಕ್ರೀಡಾಂಗಣಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಅದರ ಬೆನ್ನಲ್ಲೇ ಆರ್‌ಸಿಬಿಯ ಅಧಿಕೃತ ಎಕ್ಸ್ ಖಾತೆಯಲ್ಲೂ, ‘ಉಚಿತ ಪ್ರವೇಶ. ಆದರೆ ಸೀಮಿತ ಆಸನಗಳು’ ಎಂದು ಪೋಸ್ಟ್ ಮಾಡಲಾಯಿತು. ಈ ಮಧ್ಯೆ ಕ್ರೀಡಾಂಗಣ ಪ್ರವೇಶಕ್ಕೆ ಅಭಿಮಾನಿಗಳು ನುಗ್ಗಿದರು.
ಕ್ರಿಕೆಟ್ ಜೀನಿ ಆ್ಯಪ್‌ನಲ್ಲಿ ಕ್ರೀಡಾಂಗಣ ಪ್ರವೇಶದ ಟಿಕೆಟ್ ಖರೀದಿಸಬಹುದು ಎಂಬ ಮಾಹಿತಿ ಸಂಜೆ 5ರ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಆದರೆ ಆ್ಯಪ್ ಸರ್ವರ್ ಡೌನ್ ಆಗಿದ್ದರಿಂದ, ಕ್ರೀಡಾಂಗಣದ ಬಳಿ ಸಾಲುಗಟ್ಟಿ ನಿಂತಿದ್ದವರಲ್ಲಿ ಗೊಂದಲ ಉಂಟಾಯಿತು. ಹೀಗಾಗಿ ಹಲವರು ಕ್ರೀಡಾಂಗಣ ಪ್ರವೇಶಕ್ಕೆ ನೂಕುನುಗ್ಗಲು ಉಂಟಾಯಿತು.
ವಿಧಾನಸೌಧ ಎದುರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ವಿಧಾನಸೌಧದ ಗೇಟ್, ಗ್ರೀಲ್‌ಗಳನ್ನು ಹತ್ತಿ ಒಳ ನುಗ್ಗಿದರು. ಕೆಲವರು ಮರವನ್ನೂ ಏರಿದ್ದರು. ಕಬ್ಬನ್ ರಸ್ತೆಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇತ್ತು.
ಕಾಲ್ತುಳಿತದಿಂದ ಸಾವಿನ ಸಂಖ್ಯೆ ಏರಿಕೆ ಆಗುತ್ತಿದ್ದಂತೆಯೇ ಪೊಲೀಸರು, ಧ್ವನಿವರ್ಧಕಗಳ ಮೂಲಕ ಕ್ರೀಡಾಂಗಣದಿಂದ ಹೊರಕ್ಕೆ ಹೋಗುವಂತೆ ಮನವಿ ಮಾಡಿದರು. ‘ಕಾಲ್ತುಳಿದಿಂದ ಸಾವುಗಳು ಸಂಭವಿಸಿವೆ. ಕೂಡಲೇ ಮನೆಗೆ ಹೋಗಿ’. ಆಂಬುಲೆನ್ಸ್ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದು ಕಂಡು ಬಂತು.
ಆರ್‌ಸಿಬಿ ಆಟಗಾರರು ಕ್ರೀಡಾಂಗಣಕ್ಕೆ ಬಂದ ಕೂಡಲೇ ಅಭಿಮಾನಿಗಳ ಜಯಘೋಷ ಹೆಚ್ಚಾಗಿತ್ತು. ಪೊಲೀಸರು ಮನವಿ ಮಾಡಿದರೂ, ಅಭಿಮಾನಿಗಳು ಹೊರಗಡೆ ಹೋಗಲು ಹಿಂದೇಟು ಹಾಕಿದ್ದರು. ಆಗಲೂ ಕೆಲವರು ತಳ್ಳಾಟ ನಡೆದು ಅಸ್ವಸ್ಥಗೊಂಡರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2025ರ ಐಪಿಎಲ್ ಟೂರ್ನಿಯ ವಿವಿಧ ಪಂದ್ಯಗಳನ್ನು ಯಶಸ್ವಿಯಾಗಿ ಸಂಘಟನೆ ಮಾಡಲಾಗಿತ್ತು. ಪಂದ್ಯ ನೋಡಲು ಬರುವಷ್ಟೇ ಸಂಖ್ಯೆಯಲ್ಲಿ ಅಭಿಮಾನಿಗಳು ವಿಜಯೋತ್ಸವಕ್ಕೆ ಬರುತ್ತಾರೆಂದು ಭಾವಿಸಿ ಪೊಲೀಸರು ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಹೊರಗಿನ ಸಿಬ್ಬಂದಿಯನ್ನು ಕರೆಸಿಕೊಂಡಿರಲಿಲ್ಲ. ಕಾಲ್ತುಳಿತದ ಘಟನೆಯ ಬಳಿಕ ಬೇರೆ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಬಂದರು. ಜನರು ಕಿಕ್ಕಿರಿದು ಸೇರಿದ್ದರಿಂದ ಕ್ರೀಡಾಂಗಣದ ಬಳಿಗೆ ಪೊಲೀಸರಿಗೆ ತಲುಪುವುದೂ ಕಷ್ಟವಾಗಿತ್ತು.
‘ಇಂತಹ ದೊಡ್ಡ ಕಾರ್ಯಕ್ರಮ ಆಯೋಜಿಸುವ ಮುನ್ನ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಬೇಕು. ಮಾಹಿತಿ ಮತ್ತು ಶಿಫಾರಸುಗಳನ್ನು ಆಧರಿಸಿಯೇ ಕಾರ್ಯಕ್ರಮದ ಸ್ಥಳ ನಿಗದಿ ಮಾಡಬೇಕು. ಆದರೆ ಈ ಶಿಷ್ಟಾಚಾರವನ್ನು ಪಾಲಿಸದೆಯೇ, ದಿಢೀರ್ ಎಂದು ಕಾರ್ಯಕ್ರಮ ಆಯೋಜಿಸಿದ್ದೇ ಅನಾಹುತಕ್ಕೆ ದಾರಿಯಾಯಿತು’ ಎಂದು ರಾಜ್ಯ ಸರ್ಕಾರದ ಶಿಷ್ಟಾಚಾರ ವಿಭಾಗದ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.
‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸುವ ಬಗ್ಗೆ ಸಂಬಂಧಿತ ಇಲಾಖೆಗಳಿಗೆ ಮಾಹಿತಿ ನೀಡಿರಲಿಲ್ಲ. ಈ ಕಾರಣದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿರಲಿಲ್ಲ. ಲಕ್ಷಾಂತರ ಜನರು ಕ್ರೀಡಾಂಗಣದತ್ತ ಬಂದಿದ್ದರಿಂದ, ಅವರನ್ನು ನಿಯಂತ್ರಿಸುವುದು ಕಷ್ಟವಾಯಿತು. ಸಂಜೆ 6ರ ನಂತರ ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಯಿತು. ಮೊದಲೇ ಮಾಹಿತಿ ನೀಡಿದ್ದರೆ, ಈ ಗಡಿಬಿಡಿಯನ್ನು ತಪ್ಪಿಸಬಹುದಿತ್ತು. ಯಾರನ್ನು ಕ್ರೀಡಾಂಗಣದ ಒಳಗೆ ಬಿಡಬೇಕು, ಯಾರನ್ನು ಬಿಡಬಾರದು ಎಂಬುದರ ಬಗ್ಗೆ ಪೊಲೀಸರಿಗೂ ಸ್ಪಷ್ಟ ಮಾಹಿತಿ ಒದಗಿಸಿರಲಿಲ್ಲ’ ಎಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ತಲಾ ₹10 ಲಕ್ಷ ಪರಿಹಾರ’
ಬೆಂಗಳೂರು: ‘ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ರಾತ್ರಿ ಮಾತನಾಡಿದ ಅವರು, ‘ಘಟನೆಯಲ್ಲಿ 47 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ’ ಎಂದರು. ‘ಈ ದುರಂತದ ಬಗ್ಗೆ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶ ನೀಡಲಾಗಿದೆ. 15 ದಿನಗಳ ಒಳಗೆ ತನಿಖಾ ವರದಿ ಸಲ್ಲಿಸಲು ತಿಳಿಸಲಾಗಿದೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
ಮುಖ್ಯಮಂತ್ರಿ ಅವರು ಹೇಳಿಕೆ ನೀಡಿದ ಬೆನ್ನಹಿಂದೆಯೇ ಮ್ಯಾಜಿಸ್ಟ್ರೀಯಲ್ ವಿಚಾರಣಾಧಿಕಾರಿಯನ್ನಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರನ್ನು ನೇಮಿಸಿ ಆದೇಶ ಹೊರಬಿತ್ತು.
ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಆರ್‌ಸಿಬಿ– ಕೆಎಸ್‌ಸಿಎ ಬುಧವಾರ ರಾತ್ರಿ ಪ್ರಕಟಿಸಿದೆ.
ದುರ್ಘಟನೆಗೆ ತೀವ್ರ ಕಳವಳ, ಸಂತಾಪ ವ್ಯಕ್ತಪಡಿಸಿರುವುದಾಗಿ ಕೆಎಸ್‌ಸಿಎ ಮುಖ್ಯ ಹಣಕಾಸು ಅಧಿಕಾರಿ ಶಿವಾಜಿ ಲೋಖರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್‌ಸಿಬಿ ಸಂತಾಪ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಕಾಲ್ತುಳಿತದಲ್ಲಿ 11 ಜನರು ಬಲಿಯಾಗಿರುವುದರ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸಂತಾಪ ಸೂಚಿಸಿದೆ. ರಾತ್ರಿ 9.24ರ ಸುಮಾರಿಗೆ ವಾಟ್ಸ್‌ಆ್ಯಪ್ ಮೂಲಕ ಸುದ್ದಿಮಾಧ್ಯಮಗಳಿಗೆ ಹೇಳಿಕೆ ನೀಡಿದೆ.
‘ತಂಡ ಬೆಂಗಳೂರಿಗೆ ಬಂದ ನಂತರ ನಡೆದ ಕಾರ್ಯಕ್ರಮಗಳ ವೇಳೆ ಸಂಭವಿಸಿದ ದುರ್ಘಟನೆಗಳ ಕುರಿತು ಮಾಧ್ಯಮಗಳಿಂದ ತಿಳಿಯಿತು. ಸಂಭವಿಸಿದ ಜೀವಹಾನಿಗೆ ಆರ್‌ಸಿಬಿ ತೀವ್ರ ಶೋಕ ವ್ಯಕ್ತಪಡಿಸುತ್ತದೆ. ಮೃತ ವ್ಯಕ್ತಿಗಳ ಕುಟುಂಬಗಳ ಬಗ್ಗೆ ಸಂತಾಪ ವ್ಯಕ್ತಪಡಿಸುತ್ತದೆ. ಪರಿಸ್ಥಿತಿ ತಿಳಿದಾಕ್ಷಣ ತ್ವರಿತವಾಗಿ ಕಾರ್ಯಕ್ರಮ ಬದಲಿಸಿ. ಸ್ಥಳೀಯ ಆಡಳಿತದ ಮಾರ್ಗಸೂಚಿ, ಸಲಹೆ ಅನುಸರಿಸಿದ್ದೇವೆ’ ಎಂದು ತಿಳಿಸಿದೆ.
ಭೂಮಿಕ್ (20)
ಸಹನಾ (19)
ಪೂರ್ಣಚಂದ್ರ (32)
ಚಿನ್ಮಯಿ (19)
ದಿವ್ಯಾಂಶಿ (13)
ಶ್ರವಣ್ (20)
ದೇವಿ (19)
ಶಿವಲಿಂಗ್ (17)
ಮನೋಜ್ (33)
ಅಕ್ಷತಾ
20 ವರ್ಷದ ಮತ್ತೊಬ್ಬರು ಮೃತಪಟ್ಟಿದ್ದು, ಹೆಸರು ಪತ್ತೆಯಾಗಿಲ್ಲ
ಪೂರ್ವಸಿದ್ಧತೆ ಮಾಡಿಕೊಳ್ಳದಿರುವುದು ಮತ್ತು ಯಾವುದೇ ಮುನ್ನೆಚ್ಚರಿಕೆ ವಹಿಸದಿರುವುದೇ ಈ ಮಹಾದುರಂತಕ್ಕೆ ಕಾರಣ. ದುರಂತದ ಹೊಣೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊತ್ತುಕೊಳ್ಳಬೇಕು.–ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಕಾಂಗ್ರೆಸ್ ಸರ್ಕಾರದ ವಿವೇಚನಾರಹಿತ ದುರಾಡಳಿತ ಅಮಾಯಕ ಜೀವಗಳನ್ನ ಬಲಿ ತೆಗೆದುಕೊಂಡಿದೆ. ಆರ್‌ಸಿಬಿ ತಂಡದ ಗೆಲುವಿನಲ್ಲಿ ಕ್ರೆಡಿಟ್ ಪಡೆಯಲು ಹೋಗಿ ಅನಾಹುತ ಮಾಡಿದೆ.–ಆರ್. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.