
ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು
(ಚಿತ್ರ ಕೃಪೆ: ಐಸಿಸಿ)
ರಾವಲ್ಪಿಂಡಿ: ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯ ಬೆನ್ನಲ್ಲೇ ಶ್ರೀಲಂಕಾ, ಜಿಂಬಾಬ್ವೆ ತಂಡವನ್ನೊಳಗೊಂಡ ತ್ರಿಕೋನ ಟಿ20 ಅಂತರರಾಷ್ಟ್ರೀಯ ಸರಣಿಯ ವೇಳಾಪಟ್ಟಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪರಿಷ್ಕರಿಸಿದೆ.
ಎದುರಾಳಿ ತಂಡಗಳು ಭದ್ರತಾ ಕಳವಳ ವ್ಯಕ್ತಪಡಿಸಿದ್ದರಿಂದ ತ್ರಿಕೋನ ಸರಣಿಯ ಆರಂಭಿಕ ಪಂದ್ಯದ ದಿನಾಂಕವನ್ನು ನವೆಂಬರ್ 17ರಿಂದ 18ಕ್ಕೆ ಮರುನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.
ಅಲ್ಲದೆ ಟೂರ್ನಿಯ ಎಲ್ಲ ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ಮಾತ್ರ ಆಯೋಜಿಸಲು ನಿರ್ಧರಿಸಲಾಗಿದೆ. ಹಾಗೆಯೇ ತ್ರಿಕೋನ ಟಿ20 ಸರಣಿಯ ಎರಡನೇ ಪಂದ್ಯವನ್ನು ನವೆಂಬರ್ 20ಕ್ಕೆ ಮುಂದೂಡಲಾಗಿದೆ.
ಈ ಮುನ್ನ ನವೆಂಬರ್ 29ರ ಫೈನಲ್ ಸೇರಿದಂತೆ ಐದು ಪಂದ್ಯಗಳನ್ನು ಲಾಹೋರ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು.
ಶ್ರೀಲಂಕಾ ಕ್ರಿಕೆಟ್ ಹಾಗೂ ಜಿಂಬಾಬ್ವೆ ಕ್ರಿಕೆಟ್ ಮಂಡಳಿಗಳ ಜೊತೆ ಸಮಾಲೋಚಿಸಿ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂದು ಪಿಸಿಬಿ ಹೇಳಿದೆ.
2026ರ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಈ ಟೂರ್ನಿಯು ಪೂರ್ವ ಸಿದ್ಧತಾ ಸರಣಿಯಾಗಲಿದೆ ಎಂದು ಪಿಸಿಬಿ ತಿಳಿಸಿದೆ.
ಈ ಮೊದಲು ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಮರಳಲು ಶ್ರೀಲಂಕಾದ ಎಂಟು ಮಂದಿ ಆಟಗಾರರು ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ಸರಣಿಯನ್ನು ಕೈಬಿಡದಂತೆ ಮತ್ತು ಆಟ ಮುಂದುವರಿಸುವಂತೆ ಆಟಗಾರರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಎಚ್ಚರಿಸಿತ್ತು. ಇದಾದ ಬೆನ್ನಲ್ಲೇ ಪಿಸಿಬಿ ಏಕದಿನ ಸರಣಿ ವೇಳಾಪಟ್ಟಿಯನ್ನು ಪರಿಷ್ಕರಿಸಿತ್ತು.
ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.