
ಹುಬ್ಬಳ್ಳಿ: ನೃಪತುಂಗ ಬೆಟ್ಟದಿಂದ ಬೀಸಿ ಬರುವ ಗಾಳಿಯೂ ಈಗ ಕ್ರಿಕೆಟ್ ಕಂಪು ಸೂಸುತ್ತಿದೆ. ಬಿರುಬಿಸಿಲಿನಲ್ಲಿ ಬೆವರಿನ ಜಳಕ ಮಾಡುತ್ತಲೇ ಕ್ರಿಕೆಟ್ ಅಭಿಮಾನಿಗಳು ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದ ಸುತ್ತ ಜಮಾಯಿಸುತ್ತಿದ್ದಾರೆ. ಅದಕ್ಕೆ ಕಾರಣ ಇದೇ ಮೊದಲ ಬಾರಿ ಇಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ ಇಲ್ಲಿ ನಡೆಯಲಿದೆ.
ಮಂಗಳವಾರ ಜಮ್ಮು–ಕಾಶ್ಮೀರ ಎದುರು ಆರಂಭವಾಗಲಿರುವ ಈ ಹಣಾಹಣಿಯಲ್ಲಿ ಆಡಲಿರುವ ಕರ್ನಾಟಕ ತಂಡದಲ್ಲಿರುವ ತಾರೆಗಳನ್ನು ಕಣ್ತುಂಬಿಕೊಳ್ಳಲು ಜನರು ಕಾತುರರಾಗಿದ್ದಾರೆ. 11 ವರ್ಷಗಳ ನಂತರ ಫೈನಲ್‌ಗೆ ಲಗ್ಗೆಯಿಟ್ಟಿರುವ ಬಳಗದಲ್ಲಿ ಭಾರತ ತಂಡದ ಆಟಗಾರರಾದ ಕೆ.ಎಲ್. ರಾಹುಲ್, ಕರುಣ್ ನಾಯರ್, ಮಯಂಕ್ ಅಗರವಾಲ್, ಪ್ರಸಿದ್ಧಕೃಷ್ಣ ಮತ್ತು ನಾಯಕ ದೇವದತ್ತ ಪಡಿಕ್ಕಲ್ ಪ್ರಮುಖ ಆಕರ್ಷಣೆಯಾಗಿದ್ದಾರೆ.
2014–15ರಲ್ಲಿ ಕೊನೆಯ ಬಾರಿ ಕರ್ನಾಟಕವು ಟ್ರೋಫಿ ಗೆದ್ದಿತ್ತು. ಆಗ ತಂಡದಲ್ಲಿದ್ದ ರಾಹುಲ್, ಕರುಣ್, ಮಯಂಕ್ ಹಾಗೂ ಸ್ಪಿನ್–ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಇವರೆಲ್ಲರೂ ಅಮೋಘ ಲಯದಲ್ಲಿದ್ದಾರೆ. ಅನುಭವ, ಕೌಶಲ ಮತ್ತು ಈ ಟೂರ್ನಿಯುದ್ದಕ್ಕೂ ತೋರಿದ ಅಮೋಘ ಆಟದಿಂದಾಗಿ ದೇವದತ್ತ ಪಡಿಕ್ಕಲ್ ನಾಯಕತ್ವದ ಕರ್ನಾಟಕವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಗುಂಪು ಹಂತದ ಕೊನೆಯಲ್ಲಿ ನಾಯಕತ್ವ ಬದಲಾವಣೆಯಾಗಿತ್ತು. ಮಯಂಕ್ ಅವರ ಸ್ಥಾನಕ್ಕೆ ಎಡಗೈ ಬ್ಯಾಟರ್ ದೇವದತ್ತ ನಾಯಕರಾದರು. ಸೆಮಿಫೈನಲ್ ಪಂದ್ಯದಲ್ಲಿ ಲಖನೌ ವಿರುದ್ಧ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ರನ್ ಗಳಿಸಿತ್ತು. ಅದರಲ್ಲಿ ದೇವದತ್ತ ದ್ವಿಶತಕವೂ ಸೇರಿತ್ತು.
ತಮ್ಮ ಎರಡನೇ ಋತುವಿನಲ್ಲಿ ಆಡುತ್ತಿರುವ ಸ್ಮರಣ್ ರವಿಚಂದ್ರನ್ ಈ ಬಾರಿ ಸಹಸ್ರ ರನ್ ಸಾಧನೆ ಮಾಡುವತ್ತ ಸಾಗಿದ್ದಾರೆ. ಕರುಣ್ ಮತ್ತು ರಾಹುಲ್ ತಮ್ಮ ಟೆಸ್ಟ್ ಕ್ರಿಕೆಟ್ ಅನುಭವವನ್ನು ಧಾರೆಯೆರೆದಿದ್ದಾರೆ.
ಶ್ರೇಯಸ್ ಗೋಪಾಲ್ ಈ ಬಾರಿ ತಮ್ಮ ಪೂರ್ಣ ಸಾಮರ್ಥ್ಯ ಮೆರೆಯುತ್ತಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಆವರ ಆಟ ಅಮೋಘ. ರಾಯಚೂರು ಹುಡುಗ ವಿದ್ಯಾಧರ್ ಪಾಟೀಲ ಈ ಋತುವಿನಲ್ಲಿ ಕರ್ನಾಟಕಕ್ಕೆ ಲಭಿಸಿರುವ ಭರವಸೆಯ ಆಲ್‌ರೌಂಡರ್ ಆಗಿದ್ದಾರೆ. ವೇಗದ ಬೌಲಿಂಗ್‌ನಲ್ಲಿ ಪ್ರಸಿದ್ಧಕೃಷ್ಣ, ವಿದ್ವತ್ ಕಾವೇರಪ್ಪ, ವೈಶಾಖ್ ಅವರೊಂದಿಗೆ ಉತ್ತಮ ಜೊತೆ ನೀಡಿರುವ ಆಟಗಾರ, ಕೆಳಕ್ರಮಾಂಕದಲ್ಲಿ ತಂಡವನ್ನು ಗೆಲುವಿನ ಗಡಿ ಮುಟ್ಟಿಸುವ ಉಪಯುಕ್ತ ಬ್ಯಾಟರ್ ಕೂಡ ಆಗಿದ್ದಾರೆ.
ಸ್ಪಿನ್ ಪ್ರತಿಭೆಗಳಾದ ಶಿಖರ್ ಶೆಟ್ಟಿ ಮತ್ತು ಮೊಹ್ಸಿನ್ ಖಾನ್ ಅವರಿಗೆ ವೃತ್ತಿಜೀವನದ ಆರಂಭದಲ್ಲಿಯೇ ರಣಜಿ ಫೈನಲ್ ಆಡುವ ಅವಕಾಶ ಲಭಿಸಿದೆ. ಈ ಹಂತಕ್ಕೆ ತಂಡವು ತಲುಪುವಲ್ಲಿ ಅವರ ಬೌಲಿಂಗ್ ಕೂಡ ಪ್ರಮುಖ ಪಾತ್ರ ವಹಿಸಿದೆ. ಬಿ ಗುಂಪಿನಲ್ಲಿ ಕರ್ನಾಟಕವು 3 ಜಯ, 3 ಡ್ರಾ ಮತ್ತು ಒಂದು ಸೋಲಿನೊಂದಿಗೆ ನಾಕೌಟ್ ಪ್ರವೇಶಿಸಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ಮುಂಬೈ ಎದುರು ಸಾಧಿಸಿದ ಅಮೋಘ ಜಯವು ರಣಜಿ ಇತಿಹಾಸದ ಅವಿಸ್ಮರಣೀಯ ಪಂದ್ಯಗಳಲ್ಲಿ ಒಂದು. ಅದರಲ್ಲೂ ರಾಹುಲ್ ಆಟದ ಸೊಬಗು ಮನಗೆದ್ದಿತ್ತು.
ಹಸಿರು ಗರಿಕೆಗಳು ಇರುವ ಪಿಚ್‌ನಲ್ಲಿ ತಮ್ಮ ಸಾಮರ್ಥ್ಯ ಮೆರೆಯಲು ಜಮ್ಮು–ಕಾಶ್ಮೀರದ ಮಧ್ಯಮವೇಗಿ ಅಕೀಬ್ ನಬಿ ದಾರ್ ಸಿದ್ಧರಾಗಿದ್ದಾರೆ. ಇಡೀ ಟೂರ್ನಿಯಲ್ಲಿ 59 ವಿಕೆಟ್ ಪಡೆದಿದ್ದಾರೆ. ಬಂಗಾಳ ವಿರುದ್ಧದ ಸೆಮಿಫೈನಲ್‌ನಲ್ಲಿ ನಬಿ ಸಹಿತ ತಂಡದ ಎಲ್ಲರೂ ಅಮೋಘ ಆಟವಾಡಿದ್ದರು. ತಂಡ ಮೊದಲ ಸಲ ಫೈನಲ್ ಪ್ರವೇಶಿಸಿದ್ದು, ಎಂಟು ಸಲದ ಚಾಂಪಿಯನ್ ತಂಡದ ಎದುರು ಗೆಲ್ಲುವ ಆತ್ಮವಿಶ್ವಾಸವೂ ಸೋಮವಾರ ಅಭ್ಯಾಸ ಮಾಡುತ್ತಿದ್ದ ಆಟಗಾರರ ಹಾವಭಾವಗಳಲ್ಲಿ ಎದ್ದು ಕಂಡಿತು.
ಆದರೆ ತಂಡದ ಇಬ್ಬರು ಆಟಗಾರರು ಗಾಯಗೊಂಡಿರುವುದು ಚಿಂತೆಯ ವಿಷಯವಾಗಿದೆ. ಎಡಗೈ ಸ್ಪಿನ್ನರ್ ವಂಶಜ್ ಶರ್ಮಾ ಅವರು ಅಭ್ಯಾಸ ಮಾಡುವ ಸಂದರ್ಭದಲ್ಲಿ ಸ್ನಾಯುಸೆಳೆತದಿಂದ ಬಳಲಿದರು. ಆರಂಭಿಕ ಬ್ಯಾಟರ್ ಶುಭಂ ಖಜೂರಿಯಾ ಅವರೂ ತಾಲೀಮು ಮಾಡುವ ಸಂದರ್ಭದಲ್ಲಿ ಬೆನ್ನುನೋವಿನಿಂದ ಬಳಲಿದರು. ಅವರನ್ನು ಮೈದಾನದಿಂದ ಸ್ಟ್ರೆಚರ್ ಮೂಲಕ ಚಿಕಿತ್ಸೆಗಾಗಿ ವೈದ್ಯಕೀಯ ಕೋಣೆಗೆ ಕರೆತರಲಾಯಿತು. ಅವರಿಬ್ಬರೂ ಕಣಕ್ಕಿಳಿಯುವ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ.
ಇದೆಲ್ಲದರ ನಡುವೆ ಹುಬ್ಬಳ್ಳಿ ಕ್ರಿಕೆಟ್‌ಪ್ರಿಯರು ಐತಿಹಾಸಿಕ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಪಂದ್ಯ ಆರಂಭ: ಬೆಳಿಗ್ಗೆ 9
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್
ಕರ್ನಾಟಕ: ದೇವದತ್ತ ಪಡಿಕ್ಕಲ್ (ನಾಯಕ), ಮಯಂಕ್ ಅಗರವಾಲ್, ಕೆ.ಎಲ್.ರಾಹುಲ್, ಕರುಣ್ ನಾಯರ್, ಆರ್.ಸ್ಮರಣ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವೈಶಾಖ ವಿಜಯಕುಮಾರ್, ವಿದ್ಯಾಧರ ಪಾಟೀಲ, ಪ್ರಸಿದ್ಧ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಅನೀಶ್ ಕೆ.ವಿ, ಶ್ರೀಜಿತ್ ಕೆ.ಎಲ್ (ವಿಕೆಟ್ ಕೀಪರ್), ವಿದ್ವತ್ ಕಾವೇರಪ್ಪ.
ಜಮ್ಮು–ಕಾಶ್ಮೀರ ತಂಡ: ಪಾರಸ್ ಡೋಗ್ರಾ (ನಾಯಕ), ಶುಭಂ ಖಜೂರಿಯಾ, ಯಾವರ್ ಹಸನ್, ಶುಭಂ ಸಿಂಗ್ ಪುಂಡಿರ್, ಅಬ್ದುಲ್ ಸಮದ್, ಕನ್ಹಯ್ಯ ವಾಧ್ವಾನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್, ಅಕೀಬ್ ನಬಿ ದಾರ್, ಯುಧ್‌ವೀರ್ ಸಿಂಗ್, ವಂಶಜ್ ಶರ್ಮಾ, ಸುನಿಲ್ ರಾಮ್ ಕುಮಾರ್, ಕವಲ್ ಪ್ರೀತ್ ಸಿಂಗ್, ಸಾಹಿತ್ ಲೋತ್ರಾ, ದಿಕ್ಷಾಂತ್ ಕುಂಡಾಲ್ (ವಿಕೆಟ್ ಕೀಪರ್), ಉಮರ್ ನಜೀರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.