ADVERTISEMENT

ರಣಜಿ ಟ್ರೋಫಿ: ಫಾಲೋ ಆನ್ ತಪ್ಪಿಸಲು ಅನೀಶ್ ಹೋರಾಟ

ಮುನ್ನಡೆಯ ವಿಶ್ವಾಸದಲ್ಲಿ ಮಧ್ಯಪ್ರದೇಶ: ಸಾರಾಂಶ್ ಜೈನ್ ಪರಿಣಾಮಕಾರಿ ದಾಳಿ

ಗಿರೀಶ ದೊಡ್ಡಮನಿ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
<div class="paragraphs"><p>ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ&nbsp; ನಡೆಯುತ್ತಿರುವ&nbsp; &nbsp;ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಶುಕ್ರವಾರ ಕರ್ನಾಟಕದ ಅನೀಶ್ ಹಾಗೂ ಶ್ರೇಯಸ್ ಗೋಪಾಲ್ ಅವರು ಮಧ್ಯ ಪ್ರದೇಶದ ವಿರುದ್ದ ಜೊತೆಯಾಟವಾಡಿದರು&nbsp; &nbsp;</p></div>

ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ  ನಡೆಯುತ್ತಿರುವ   ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಶುಕ್ರವಾರ ಕರ್ನಾಟಕದ ಅನೀಶ್ ಹಾಗೂ ಶ್ರೇಯಸ್ ಗೋಪಾಲ್ ಅವರು ಮಧ್ಯ ಪ್ರದೇಶದ ವಿರುದ್ದ ಜೊತೆಯಾಟವಾಡಿದರು   

   

– ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ

ಬೆಂಗಳೂರು: ಕರ್ನಾಟಕ ತಂಡಕ್ಕೆ ಮಧ್ಯಪ್ರದೇಶದ ಎದುರಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ ಆರು ರನ್‌ಗಳು ಮಾತ್ರ ಬೇಕು. 

ADVERTISEMENT

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣ (1)ದಲ್ಲಿ ನಡೆಯುತ್ತಿರುವ ಎಲೀಟ್ ಬಿ ಗುಂಪಿನ ಪಂದ್ಯದ ಎರಡನೇ ದಿನದ ಅಂತ್ಯಕ್ಕೆ ಆತಿಥೇಯರ ಬಳಗದಲ್ಲಿ ಉಳಿದ ಆತಂಕ ಇದು.  ಮಧ್ಯಪ್ರದೇಶ ತಂಡವು ಗಳಿಸಿದ 323 ರನ್‌ಗಳಿಗೆ ಉತ್ತರವಾಗಿ ಕರ್ನಾಟಕವು ಶುಕ್ರವಾರ ದಿನದಾಟದ ಮುಕ್ತಾಯಕ್ಕೆ 58 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 168 ರನ್ ಗಳಿಸಿದೆ. ಫಾಲೋ ಆನ್ ನಿಯಮದ ಪ್ರಕಾರ 174 ರನ್ ಗಳಿಸಬೇಕು.  

ಪ್ರವಾಸಿ ಬಳಗದ ಸ್ಪಿನ್ನರ್ ಸಾರಾಂಶ್ ಜೈನ್ (42ಕ್ಕೆ3) ಮತ್ತು ಮಧ್ಯಮವೇಗಿ ಆರ್ಯನ್ ಪಾಂಡೆ (25ಕ್ಕೆ2) ಅವರ ದಾಳಿಯ ಮುಂದೆ ಕರ್ನಾಟಕವು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ ಆತಿಥೇಯ ತಂಡದ ಗೌರವವನ್ನು ಆರಂಭಿಕ ಆಟಗಾರ  ಕೆ.ವಿ. ಅನೀಶ್ (ಬ್ಯಾಟಿಂಗ್ 80; 153ಎ, 4X8) ಅವರು ದಿಟ್ಟ ಬ್ಯಾಟಿಂಗ್ ಬಲದಿಂದ ಕಾಪಾಡಿದರು. ಅವರಿಗೆ ಶ್ರೇಯಸ್ ಗೋಪಾಲ್ (41;76ಎ) ಉತ್ತಮ ಜೊತೆ ನೀಡಿದರು. 6ನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 82 ರನ್ ಸೇರಿಸಿದರು. 60 ರನ್‌ಗಳಿಗೇ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಚೇತರಿಕೆ ನೀಡಿದರು.  ಅನೀಶ್ ಪ್ರಥಮದರ್ಜೆ ಪಂದ್ಯದಲ್ಲಿ ತಮ್ಮ ಮೊದಲ ಅರ್ಧಶತಕವನ್ನು 107 ಎಸೆತಗಳಲ್ಲಿ ದಾಖಲಿಸಿದರು. 

ಉರುಳಿದ ಬ್ಯಾಟರ್‌ಗಳು: ಊಟದ ವಿರಾಮಕ್ಕೆ 20 ನಿಮಿಷಗಳ ಮುನ್ನ ಮಧ್ಯಪ್ರದೇಶ ಇನಿಂಗ್ಸ್‌ಗೆ ತೆರೆಯೆಳೆಯುವಲ್ಲಿ ಕರ್ನಾಟಕದ ವೇಗಿ ವಿದ್ಯಾಧರ್ ಪಾಟೀಲ (56ಕ್ಕೆ3) ಹಾಗೂ ವಿದ್ವತ್ ಕಾವೇರಪ್ಪ (50ಕ್ಕೆ2) ಯಶಸ್ವಿಯಾದರು.  ಅನೀಶ್ ಜೊತೆಗೆ ಇನಿಂಗ್ಸ್‌ ಆರಂಭಿಸಿದ ನಾಯಕ ಮಯಂಕ್ ಏಳು ಎಸೆತ ಎದುರಿಸಿದರು. ಆರ್ಯನ್ ಎಸೆತದಲ್ಲಿ ಸಾಗರ್ ಸೋಳಂಕಿಗೆ  ಕ್ಯಾಚ್ ಕೊಟ್ಟರು. ಗುರುವಾರ ತಮ್ಮ ಆರೋಗ್ಯದಲ್ಲಿ ಏರುಪೇರಾದ ಕಾರಣ  ಮೈದಾನ ತೊರೆದು ಎರಡು ಅವಧಿ ವಿಶ್ರಾಂತಿ ಪಡೆದಿದ್ದ ಮಯಂಕ್ ಎರಡನೇ ದಿನದಲ್ಲಿ ಕಣಕ್ಕೆ ಮರಳಿದರು. 

ಊಟದ ವಿರಾಮದ ನಂತರದ ಮೊದಲ ಎಸೆತದಲ್ಲಿಯೇ ದೇವದತ್ತ ಪಡಿಕ್ಕಲ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಸಾರಾಂಶ್ ಜೈನ್ ತಮ್ಮ ಖಾತೆ ತೆರೆದರು.  ದೇವದತ್ತ  ಅವರು ಅಂಪೈರ್ ತೀರ್ಮಾನಕ್ಕೆ ಅಸಮಾಧಾನಗೊಂಡಂತೆ ಕಂಡರು.  ದೇವದತ್ತ ಈಚೆಗೆ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ 758 ರನ್ ಗಳಿಸಿದ್ದರು.

ಕರುಣ್ ನಾಯರ್ (12 ರನ್) ಒಂಟಿ ಓಟಕ್ಕಾಗಿ ಅವಸರಪಟ್ಟು ರನ್‌ಔಟ್ ಆದರು. ಕೆ.ಎಲ್. ಶ್ರೀಜಿತ್ (7ರನ್) ಅವರ ವಿಕೆಟ್ ಕುಲದೀಪ್ ಸೇನ್ ಪಾಲಾಯಿತು. 

ಆಟಕ್ಕೆ ಕುದುರಿಕೊಂಡಿದ್ದ ಅಭಿನವ್ ಮನೋಹರ್ (14 ರನ್) ಅವರಿಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಸಾರಾಂಶ್ ಯಶಸ್ವಿಯಾದರು. ಹಿಮಾಂಶು ಮಂತ್ರಿ ಅವರ ಸ್ಟಂಪಿಂಗ್‌  ಇಲ್ಲಿ ಫಲ ನೀಡಿತು.  ಮಧ್ಯಪ್ರದೇಶದ ಕೋಚ್ ಚಂದ್ರಕಾಂತ್ ಪಂಡಿತ್ ಅವರ ತಂತ್ರಗಾರಿಕೆಯನ್ನು ಬೌಲರ್‌ಗಳು ಅಚ್ಚುಕಟ್ಟಾಗಿ ಜಾರಿಗೊಳಿಸಿದರು. ಶ್ರೇಯಸ್ ಗೋಪಾಲ್ ಅವರನ್ನು ಎಲ್‌ಬಿಡಬ್ಲ್ಯು ಮಾಡಿದ ಸಾರಾಂಶ್ ಜೊತೆಯಾಟವನ್ನೂ ಮುರಿದರು.  

ಒಂದು ಬದಿಯಲ್ಲಿ ಅನೀಶ್ ಬ್ಯಾಕ್‌ಫುಟ್‌ ಪಂಚ್, ಸ್ವೀಪ್, ಫ್ರಂಟ್‌ಫೂಟ್ ಹೊಡೆತಗಳನ್ನು ಪ್ರಯೋಗಿಸುತ್ತ ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವ ಪ್ರಯತ್ನ ಮಾಡಿದರು. ಇನ್ನೊಂದೆಡೆ ಕ್ರೀಸ್‌ಗೆ ಬಂದ ಕೆಳಕ್ರಮಾಂಕದ ಬ್ಯಾಟರ್‌ಗಳ ವಿಕೆಟ್ ಪಡೆಯುವಲ್ಲಿ ಬೌಲರ್‌ಗಳು ಯಶಸ್ವಿಯಾದರು.  

ಮಧ್ಯಪ್ರದೇಶ ತಂಡವು ಗುರುವಾರ 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 244 ರನ್ ಗಳಿಸಿತ್ತು. ಎರಡನೇ ದಿನದಾಟದಲ್ಲಿ ಈ ಮೊತ್ತಕ್ಕೆ 79 ರನ್ ಸೇರಿಸುವಲ್ಲಿ ತಂಡವು ಯಶಸ್ವಿಯಾಯಿತು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಮಧ್ಯಪ್ರದೇಶ: 116.1 ಓವರ್‌ಗಳಲ್ಲಿ 323 (ಸಾರಾಂಶ್ ಜೈನ್ 32, ಅಕ್ಷತ್ ರಘುವಂಶಿ 22, ಸಾಗರ್ ಸೋಳಂಕಿ 20, ವಿದ್ವತ್ ಕಾವೇರಪ್ಪ 50ಕ್ಕೆ2, ವಿದ್ಯಾಧರ್ ಪಾಟೀಲ 56ಕ್ಕೆ3, ವೈಶಾಖ ವಿಜಯಕುಮಾರ್ 71ಕ್ಕೆ2, ಶಿಖರ್ ಶೆಟ್ಟಿ 70ಕ್ಕೆ1, ಶ್ರೇಯಸ್ ಗೋಪಾಲ್ 56ಕ್ಕೆ2)

ಕರ್ನಾಟಕ: 58 ಓವರ್‌ಗಳಲ್ಲಿ 8ಕ್ಕೆ168  (ಕೆ.ವಿ. ಅನೀಶ್ ಬ್ಯಾಟಿಂಗ್ 80, ಅಭಿನವ್ ಮನೋಹರ್ 14, ಶ್ರೇಯಸ್ ಗೋಪಾಲ್ 41, ಆರ್ಯನ್ ಪಾಂಡೆ 25ಕ್ಕೆ2, ಸಾರಾಂಶ್ ಜೈನ್ 42ಕ್ಕೆ3, ಕುಲದೀಪ್ ಸೇನ್ 32ಕ್ಕೆ1, ಸಾಗರ್ ಸೋಳಂಕಿ 21ಕ್ಕೆ1) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.