ADVERTISEMENT

Ranji Trophy 2025 | ವಿದ್ವತ್‌ ಮಿಂಚು: ಕರ್ನಾಟಕಕ್ಕೆ ಮೂರಂಕ

ಗೋವಾ ವಿರುದ್ಧದ ರಣಜಿ ಪಂದ್ಯ ನಿರೀಕ್ಷೆಯಂತೆಯೇ ಡ್ರಾದಲ್ಲಿ ಅಂತ್ಯ

ಜಿ.ಶಿವಕುಮಾರ
Published 28 ಅಕ್ಟೋಬರ್ 2025, 23:30 IST
Last Updated 28 ಅಕ್ಟೋಬರ್ 2025, 23:30 IST
<div class="paragraphs"><p>ಗೋವಾ ತಂಡದ ಮೋಹಿತ್‌ ಅವರ ವಿಕೆಟ್‌ ಪಡೆದ ಕರ್ನಾಟಕದ ವಿದ್ವತ್‌ ಕಾವೇರಪ್ಪ ಸಂಭ್ರಮ &nbsp; </p></div>

ಗೋವಾ ತಂಡದ ಮೋಹಿತ್‌ ಅವರ ವಿಕೆಟ್‌ ಪಡೆದ ಕರ್ನಾಟಕದ ವಿದ್ವತ್‌ ಕಾವೇರಪ್ಪ ಸಂಭ್ರಮ  

   

ಚಿತ್ರ: ಕೃಷ್ಣ ಕುಮಾರ್ ಪಿ.ಎಸ್

ಶಿವಮೊಗ್ಗ: ಗೆಲುವು ಕೈಗೆಟಕುವುದಿಲ್ಲ ಎಂಬುದು ಗೊತ್ತಿದ್ದರೂ ಕೈಕಟ್ಟಿ ಕೂರದ ಕರ್ನಾಟಕದ ಆಟಗಾರರು ಅಂತಿಮ ದಿನದಾಟದ ಎರಡನೇ ಅವಧಿವರೆಗೂ ನಡೆಸಿದ ಪ್ರಯತ್ನ ಫಲಿಸಲಿಲ್ಲ.

ADVERTISEMENT

ಗೋವಾ ತಂಡದ ಮಂಥನ್‌ ಖುತ್ಕರ್‌ (ಔಟಾಗದೆ 55; 135ಎ, 5ಬೌಂ) ಮತ್ತು ಅಭಿನವ್‌ ತೇಜ್‌ರಾಣಾ (ಔಟಾಗದೆ 73; 126ಎ, 9ಬೌಂ) ದಿಟ್ಟ ಆಟ ಆಡಿದ್ದರಿಂದ ಬೇರೆ ದಾರಿಯೇ ಕಾಣದಂತಾದ ಆತಿಥೇಯರು ಇಲ್ಲಿನ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯಗೊಂಡ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟರು. ಇದರೊಂದಿಗೆ ಖಾತೆಗೆ ಮೂರು ಅಂಕ ಸೇರ್ಪಡೆ ಮಾಡಿಕೊಂಡು ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ಇಲ್ಲಿ ಒಂದು ಅಂಕವನ್ನಷ್ಟೇ ಪಡೆದ ಸ್ನೇಹಲ್‌ ಕೌತಂಕರ್‌ ಪಡೆ ಎರಡನೇ ಸ್ಥಾನಕ್ಕೆ ಕುಸಿಯಿತು.

ಮಯಂಕ್‌ ಅಗರವಾಲ್‌ ಬಳಗ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 371ರನ್‌ಗಳಿಗೆ ಉತ್ತರವಾಗಿ ಗೋವಾ 87.2 ಓವರ್‌ಗಳಲ್ಲಿ 217ರನ್‌ಗಳಿಗೆ ಆಲೌಟ್‌ ಆಯಿತು. ಫಾಲೋ ಆನ್‌ ಪಡೆದು ಎರಡನೇ ಇನಿಂಗ್ಸ್‌ ಆರಂಭಿಸಿದ ಈ ತಂಡ 46 ಓವರ್‌ಗಳಲ್ಲಿ 1 ವಿಕೆಟ್‌ಗೆ 143ರನ್‌ ಗಳಿಸಿತು. 

ದಿನದ ಮೊದಲ ಒಂದು ಗಂಟೆಯಲ್ಲೇ ಗೋವಾ ಆಲೌಟ್‌ ಆಗಿದ್ದರಿಂದ ಕರ್ನಾಟಕ ಗೆಲುವಿನ ಕನಸು ಕಂಡಿತ್ತು. ಎರಡನೇ ಇನಿಂಗ್ಸ್‌ನ 6ನೇ ಓವರ್‌ನ ಎರಡನೇ ಎಸೆತದಲ್ಲಿ ವೈಶಾಖ್‌, ಸುಯಶ್ ಪ್ರಭುದೇಸಾಯಿ (13: 15ಎ, 2ಬೌಂ) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದಾಗ ಈ ಕನಸಿಗೆ ರೆಕ್ಕೆಯೂ ಮೂಡಿತ್ತು. ಆದರೆ ಮಂಥನ್‌ ಮತ್ತು ಅಭಿನವ್‌ ರಕ್ಷಣಾತ್ಮಕ ಆಟದ ಮೂಲಕ ಆತಿಥೇಯರ ಎಲ್ಲಾ ಲೆಕ್ಕಾಚಾರಗಳನ್ನೂ ತಲೆಕೆಳಗಾಗಿಸಿದರು. ಇವರು ಮುರಿಯದ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 244 ಎಸೆತಗಳಲ್ಲಿ 123ರನ್‌ ಗಳಿಸಿದರು.

ವಿದ್ವತ್‌ ಮಿಂಚು: ಕರ್ನಾಟಕ ತಂಡದ ಮಧ್ಯಮ ವೇಗಿ ವಿದ್ವತ್‌ ಕಾವೇರಪ್ಪ (51ಕ್ಕೆ5) ದಿನದಾಟದ ಆರಂಭದಲ್ಲಿ ಮಿಂಚು ಹರಿಸಿದರು. ತಾವೆಸೆದ ಮೊದಲ ಓವರ್‌ನಲ್ಲೇ ಅರ್ಜುನ್‌ ತೆಂಡೂಲ್ಕರ್‌ (47; 122ಎ, 6ಬೌಂ, 1ಸಿ) ವಿಕೆಟ್‌ ಉರುಳಿಸಿ ಸಂಭ್ರಮಿಸಿದರು. ಸೋಮವಾರ ಆತಿಥೇಯರನ್ನು ಕಾಡಿದ್ದ ಅರ್ಜುನ್‌, ವಿದ್ವತ್‌ ಪ್ರಯೋಗಿಸಿದ ಬೌನ್ಸರ್‌ ಅಸ್ತ್ರಕ್ಕೆ ಅವಕ್ಕಾದರು. ವಿಕೆಟ್‌ ಕೀಪರ್‌ ಕೆ.ಎಲ್‌.ಶ್ರೀಜಿತ್‌ಗೆ ಕ್ಯಾಚ್‌ ಕೊಟ್ಟು ಹೊರನಡೆದರು. 

ಆದರೆ ಮೋಹಿತ್‌ ರೆಡ್ಕರ್‌ (53; 77ಎ, 3ಬೌಂ, 3ಸಿ) ಪ್ರವಾಸಿ ಪಡೆಗೆ ಆಸರೆಯಾಗುವ ಲಕ್ಷಣ ತೋರಿದ್ದರು. ವಿದ್ವತ್‌ ಬೌಲ್‌ ಮಾಡಿದ 79ನೇ ಓವರ್‌ನ ಎರಡನೇ ಎಸೆತದಲ್ಲಿ ಮಿಡ್‌ ಆನ್‌ ಕ್ಷೇತ್ರದಲ್ಲಿ ನಿಂತಿದ್ದ ಆರ್‌.ಸ್ಮರಣ್‌ ಸುಲಭ ಕ್ಯಾಚ್‌ ಕೈಚೆಲ್ಲಿದರು. ಈ ಜೀವದಾನದ ಲಾಭ ಪಡೆದ ಮೋಹಿತ್‌, ಕರ್ನಾಟಕದ ಬೌಲರ್‌ಗಳನ್ನು ಕೆಲ ಹೊತ್ತು ದಂಡಿಸಿದರು. ವೈಶಾಖ್‌ ವಿಜಯಕುಮಾರ್‌ ಹಾಕಿದ 86ನೇ ಓವರ್‌ನ 5ನೇ ಎಸೆತವನ್ನು ಎಕ್ಸ್ಟ್ರಾ ಕವರ್‌ನತ್ತ ಸಿಕ್ಸರ್‌ಗೆ ಅಟ್ಟಿ ಅರ್ಧಶತಕ ಪೂರೈಸಿದರು.

ಮರು ಓವರ್‌ನಲ್ಲಿ ವಿದ್ವತ್‌ ಬೆನ್ನು ಬೆನ್ನಿಗೆ ವಿಕೆಟ್‌ ಕೆಡವಿ ಗೋವಾ ತಂಡಕ್ಕೆ ಬಲವಾದ ಪೆಟ್ಟು ನೀಡಿದರು. ಎರಡನೇ ಎಸೆತದಲ್ಲಿ ಮೋಹಿತ್‌ ವಿಕೆಟ್‌ ಉರುಳಿಸಿದ ಅವರು 5ನೇ ಎಸೆತದಲ್ಲಿ ವಿಕೆಟ್‌ ಕೀಪರ್‌ ಸಮರ್‌ ದುಭಾಶಿಗೆ (6) ಪೆವಿಲಿಯನ್‌ ಹಾದಿ ತೋರಿಸಿದರು.

ವೈಶಾಖ್‌ 88ನೇ ಓವರ್‌ನಲ್ಲಿ ದಾಳಿಗಿಳಿದಾಗ ಫಾಲೋ ಆನ್‌ ತಪ್ಪಿಸಿಕೊಳ್ಳಲು ಗೋವಾ ತಂಡಕ್ಕೆ 8 ರನ್‌ಗಳು ಬೇಕಿದ್ದವು. ಮೊದಲ ಎಸೆತವನ್ನು ಬೌಂಡರಿಗಟ್ಟಿದ ವಿ.ಕೌಶಿಕ್‌, ಮರು ಎಸೆತದಲ್ಲಿ ಬೌಲ್ಡ್‌ ಆದರು. ಆಗ ಕರ್ನಾಟಕದ ಪಾಳಯದಲ್ಲಿ ಸಂತಸದ ಹೊನಲು ಹರಿಯಿತು. 

ಕರುಣೆ ತೋರಿದ ವರುಣ  

ಸೌರಾಷ್ಟ್ರ ವಿರುದ್ಧದ ಮೊದಲ‌ ಪಂದ್ಯದಲ್ಲಿ ಇನಿಂಗ್ಸ್‌ ಹಿನ್ನಡೆ ಅನುಭವಿಸಿ ಒಂದು ಅಂಕವನ್ನಷ್ಟೇ ಪಡೆದಿದ್ದ ಮಯಂಕ್‌ ಅಗರವಾಲ್‌ ಬಳಗಕ್ಕೆ ಗೋವಾ ವಿರುದ್ಧ ಗೆಲುವು ಇಲ್ಲವೇ ಇನಿಂಗ್ಸ್‌ ಮುನ್ನಡೆ ಅಗತ್ಯವಿತ್ತು. ಶಿವಮೊಗ್ಗದಲ್ಲಿ ಸೋಮವಾರ ಮತ್ತು ಮಂಗಳವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರಿಂದ ಆತಿಥೇಯರಲ್ಲಿ ಆತಂಕವೂ ಮನೆ ಮಾಡಿತ್ತು. ಒಂದೊಮ್ಮೆ ಎಡೆಬಿಡದೆ ಮಳೆ ಸುರಿದಿದ್ದರೆ ಪಂದ್ಯ ರದ್ದಾಗಿ ಉಭಯ ತಂಡಗಳಿಗೆ ತಲಾ ಒಂದು ಅಂಕವಷ್ಟೇ ಲಭಿಸುತ್ತಿತ್ತು. ಆದರೆ ವರುಣ ಕರುಣೆ ತೋರಿದ್ದರಿಂದ ಎರಡು ದಿನದಾಟ ಸಾಂಗವಾಗಿ ನೆರವೇರಿ ಕರ್ನಾಟಕದ ಇನಿಂಗ್ಸ್‌ ಮುನ್ನಡೆ ಹಾದಿ ಸುಗಮವಾಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.