
ಮಧ್ಯಪ್ರದೇಶ ತಂಡದ ಹಿಮಾಂಶು ಮಂತ್ರಿ ಅಜೇಯ ಅರ್ಧಶತಕ ಸಿಡಿಸಿದರು
-ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಬೆಂಗಳೂರು: ಎಂಟು ರನ್‌ಗಳಿಂದ ಶತಕ ತಪ್ಪಿಸಿಕೊಂಡ ಕೆ.ವಿ. ಅನೀಶ್ ಅವರು ಕರ್ನಾಟಕವನ್ನು ಫಾಲೋ ಆನ್ ಆಂತಕದಿಂದಲೂ ಪಾರು ಮಾಡಿದರು. ಆದರೆ ಮಧ್ಯಪ್ರದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ 132 ರನ್ ಮುನ್ನಡೆ ಗಳಿಸುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
‘ಗಾಯಕ್ಕೆ ಉಪ್ಪು ಸವರಿದ’ ಹಾಗೆ ಬ್ಯಾಟರ್ ಹಿಮಾಂಶು ಮಂತ್ರಿ (ಬ್ಯಾಟಿಂಗ್ 89; 203ಎಸೆತ, 4X4) ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಜಯಿಸುವ ಅವಕಾಶವನ್ನೂ ಕರ್ನಾಟಕದಿಂದ ದೂರ ಎಳೆದೊಯ್ದರು.
ಮೂರನೇ ದಿನದಾಟದ ಅಂತ್ಯಕ್ಕೆ ಮಧ್ಯಪ್ರದೇಶ ತಂಡವು 336 ರನ್‌ಗಳ ಭಾರಿ ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಇನ್ನೊಂದು ದಿನ ಮಾತ್ರ ಬಾಕಿ ಇದ್ದು, ಪ್ರವಾಸಿ ತಂಡವು ಭಾನುವಾರ ಬೆಳಿಗ್ಗೆ ಇನ್ನಷ್ಟು ಹೊತ್ತು ಬ್ಯಾಟಿಂಗ್ ಮಾಡಿ ಮುನ್ನಡೆಯ ಅಂತರವನ್ನು ಹೆಚ್ಚಿಸುವ ಸಾಧ್ಯತೆ ಇದೆ. ನಾಲ್ಕನೇ ದಿನದ ಪಿಚ್‌ನಲ್ಲಿ ಬ್ಯಾಟಿಂಗ್ ಸುಲಭವಲ್ಲ. ಆದ್ದರಿಂದ ಆತಿಥೇಯ ತಂಡವು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸುವ ಸಾಧ್ಯತೆಯೇ ಹೆಚ್ಚು.
ಮಧ್ಯಮವೇಗಿ ವಿದ್ಯಾಧರ್ ಪಾಟೀಲ (39ಕ್ಕೆ3) ಮತ್ತು ಶಿಖರ್ ಶೆಟ್ಟಿ (41ಕ್ಕೆ2) ಅವರ ಪರಿಣಾಮಕಾರಿ ದಾಳಿಯ ನಡುವೆಯೂ ಮಧ್ಯಪ್ರದೇಶ ಎರಡನೇ ಇನಿಂಗ್ಸ್‌ನಲ್ಲಿ 71 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 204 ರನ್ ಗಳಿಸಿತು. ಮಂತ್ರಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಒಂಬತ್ತನೇ ಅರ್ಧಶತಕವನ್ನು 109 ಎಸೆತಗಳಲ್ಲಿ ಪೂರ್ಣಗೊಳಿಸಿದರು. ಅವರಿಗೆ ಉತ್ತಮ ಜೊತೆ ನೀಡಿದ ಶುಭಂ ಶರ್ಮಾ 32; 49ಎ, 4X3 ) ಮತ್ತು ಬೀಸಾಟಕ್ಕೆ ಸಿದ್ಧವಾಗಿ ಬಂದಿದ್ದ ರಜತ್ ಪಾಟೀದಾರ್ ಅವರನ್ನು ಒಂದೇ ಓವರ್‌ನಲ್ಲಿ ಕ್ಲೀನ್‌ಬೌಲ್ಡ್ ಮಾಡುವಲ್ಲಿ ವಿದ್ಯಾಧರ್ ಯಶಸ್ವಿಯಾದರು. ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ವೆಂಕಟೇಶ್ ಅಯ್ಯರ್ (1 ರನ್) ಅವರ ಕಣ್ತಪ್ಪಿಸಿ ಸ್ಟಂಪ್ ಎಗರಿಸುವಲ್ಲಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಸಫಲರಾದರು.
ಆರಂಭಿಕ ಬ್ಯಾಟರ್ ಯಶ್ ದುಬೆ ಮತ್ತು ಅಕ್ಷತ್ ರಘುವಂಶಿ ಅವರ ವಿಕೆಟ್‌ಗಳು ಯುವ ಸ್ಪಿನ್ನರ್ ಶಿಖರ್ ಶೆಟ್ಟಿ ಅವರ ಖಾತೆ ಸೇರಿದವು. ಚಹಾ ನಂತರ ಸಾಗರ್ ಸೋಳಂಕಿ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ವಿದ್ಯಾಧರ್ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಮೆರೆದರು. ಇದೆಲ್ಲದರ ನಡುವೆ ಮಂತ್ರಿ ಗಟ್ಟಿಯಾಗಿ ನಿಂತರು. ಅವರು 49 ರನ್ ಗಳಿಸಿದ್ದ ಸಂದರ್ಭದಲ್ಲಿ ಮೊದಲ ಸ್ಲಿಪ್‌ನಲ್ಲಿದ್ದ ಬದಲೀ ಫೀಲ್ಡರ್ ನಿಕಿನ್ ಜೋಸ್ ಅವರು ಮಂತ್ರಿಯ ಕ್ಯಾಚ್ ಪಡೆಯವಲ್ಲಿ ಯಶಸ್ವಿಯಾಗಲಿಲ್ಲ.
ತಪ್ಪಿದ ಅನೀಶ್ ಶತಕ: ಶನಿವಾರ ಬೆಳಿಗ್ಗೆಯ ಅಹ್ಲಾದಕರ ವಾತಾವರಣದಲ್ಲಿ ಕರ್ನಾಟಕದ ಬ್ಯಾಟಿಂಗ್ ಮುಂದುವರಿಯಿತು. ಶುಕ್ರವಾರ ತಂಡವು 8 ವಿಕೆಟ್‌ಗಳಿಗೆ 168 ರನ್ ಗಳಿಸಿತ್ತು. ಈ ಮೊತ್ತಕ್ಕೆ 24 ರನ್ ಸೇರಿಸಲು ಮಾತ್ರ ಬ್ಯಾಟರ್‌ಗಳಿಗೆ ಸಾಧ್ಯವಾಯಿತು. ಅದರಲ್ಲಿ ಅನೀಶ್ ಅವರ ಪಾಲು 12 ರನ್‌ಗಳು. ಸ್ಪಿನ್ನರ್ ಸಾರಾಂಶ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ಅನೀಶ್ ಮೊದಲ ಸ್ಲಿಪ್ ಫೀಲ್ಡರ್‌ಗೆ ಕ್ಯಾಚ್ ಆದರು. ಇನಿಂಗ್ಸ್‌ಗೂ ತೆರೆಬಿತ್ತು.
ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ: 116.1 ಓವರ್‌ಗಳಲ್ಲಿ 323. ಕರ್ನಾಟಕ: 64.1 ಓವರ್‌ಗಳಲ್ಲಿ 191 (ಕೆ.ವಿ. ಅನೀಶ್ 92, ವೈಶಾಖ ವಿಜಯಕುಮಾರ್ 5, ವಿದ್ವತ್ ಕಾವೇರಪ್ಪ ಔಟಾಗದೇ 8, ಆರ್ಯನ್ ಪಾಂಡೆ 35ಕ್ಕೆ2, ಸಾರಾಂಶ್ ಜೈನ್ 42ಕ್ಕೆ4, ಕುಲದೀಪ್ ಸೇನ್ 45ಕ್ಕೆ2) ಎರಡನೇ ಇನಿಂಗ್ಸ್: ಮಧ್ಯಪ್ರದೇಶ: 71 ಓವರ್‌ಗಳಲ್ಲಿ 6ಕ್ಕೆ204 (ಯಶ್ ದುಬೆ 17, ಹಿಮಾಂಶು ಮಂತ್ರಿ ಬ್ಯಾಟಿಂಗ್ 89, ಶುಭಂ ಶರ್ಮಾ 32, ಸಾರಾಂಶ್ ಜೈನ್ ಗಾಯಗೊಂಡು ನಿವೃತ್ತಿ 15, ಸಾಗರ್ ಸೋಳಂಕಿ 13, ಆರ್ಯನ್ ಪಾಂಡೆ ಬ್ಯಾಟಿಂಗ್ 13, ವಿದ್ಯಾಧರ್ ಪಾಟೀಲ 39ಕ್ಕೆ3, ಶಿಖರ್ ಶೆಟ್ಟಿ 41ಕ್ಕೆ2, ಶ್ರೇಯಸ್ ಗೋಪಾಲ್ 52ಕ್ಕೆ1)
ಕರ್ನಾಟಕದ ವಿದ್ಯಾಧರ್ ಪಾಟೀಲ ಮೂರು ವಿಕೆಟ್‌ಗಳನ್ನು ಪಡೆದರು ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಕರ್ನಾಟಕ ತಂಡದ ಬ್ಯಾಟರ್ ಕರುಣ್ ನಾಯರ್ ಅವರು ಫೀಲ್ಡಿಂಗ್ ಮಾಡುವಾಗ ಚೆಂಡು ಬಡಿದು ಗಾಯಗೊಂಡಿದ್ದಾರೆ. ಅವರ ಎಡಗೈ ತೋರುಬೆರಳು ಮತ್ತು ಮಧ್ಯದ ಬೆರಳಿಗೆ ಗಾಯವಾಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬೆರಳುಗಳ ಗಾಯಕ್ಕೆ ಕೆಲವು ಹೊಲಿಗೆಗಳನ್ನು ಹಾಕಲಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ. ಅವರು ಪಂದ್ಯದಲ್ಲಿ ಮತ್ತೆ ಕಣಕ್ಕಿಳಿಯುವ ಕುರಿತು ತಂಡದ ವ್ಯವಸ್ಥಾಪನ ಬಳಗವು ಭಾನುವಾರ ಬೆಳಿಗ್ಗೆ ನಿರ್ಧಾರ ಕೈಗೊಳ್ಳಲಿದೆ. ಪಂದ್ಯದ ಮೊದಲ ದಿನ ಕೀಪಿಂಗ್ ಮಾಡುವಾಗ ಗಾಯಗೊಂಡಿದ್ದ ಕೆ.ಎಲ್. ಶ್ರೀಜಿತ್ ಅವರು ಬ್ಯಾಟಿಂಗ್ ಮಾಡಲು ಫಿಟ್ ಆಗಿದ್ದಾರೆ. ಆದರೆ ಮೂರನೇ ದಿನದಾಟದಲ್ಲಿ ಅವರು ಕೀಪಿಂಗ್ ಮಾಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.