
ಮುಂಬೈ: ವೇಗದ ಜೋಡಿ ಪ್ರಸಿದ್ಧಕೃಷ್ಣ ಹಾಗೂ ವಿದ್ವತ್ ಕಾವೇರಪ್ಪ ಅವರ ಅಮೋಘ ಬೌಲಿಂಗ್ ಮುಂದೆ ಮುಂಬೈ ತಂಡವು ಕುಸಿಯಿತು. ಇದರಿಂದಾಗಿ ಕರ್ನಾಟಕ ತಂಡವು ಇಲ್ಲಿ ಶುಕ್ರವಾರ ಆರಂಭವಾದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಮೊದಲ ಇನಿಂಗ್ಸ್ ಮುನ್ನಡೆಯ ಹೊಸ್ತಿಲಿಗೆ ಬಂದು ನಿಂತಿದೆ.
ಎಂಸಿಎ–ಬಿಕೆಸಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆತಿಥೇಯ ಮುಂಬೈ ತಂಡವು ಬ್ಯಾಟಿಂಗ್ ಮಾಡಿತು. ಆದರೆ ತಂಡದ ಈ ನಿರ್ಧಾರವು ತಿರುಗುಬಾಣವಾಯಿತು. ಭಾರತ ತಂಡದಲ್ಲಿ ಆಡಿರುವ ಅನುಭವಿ ಪ್ರಸಿದ್ಧ (21ಕ್ಕೆ3), ವಿದ್ವತ್ (38ಕ್ಕೆ3) ಮತ್ತು ಅವರಿಗೆ ತಕ್ಕ ಬೆಂಬಲ ನೀಡಿದ ಲೆಗ್‌ಸ್ಪಿನ್ನರ್ ಶ್ರೇಯಸ್ (4ಕ್ಕೆ3) ಅವರ ದಾಳಿಗೆ 48.1 ಓವರ್‌ಗಳಲ್ಲಿ 120 ರನ್‌ಗಳ ಅಲ್ಪಮೊತ್ತಕ್ಕೆ ಮುಂಬೈ ಕುಸಿಯಿತು. ಆರಂಭಿಕ ಬ್ಯಾಟರ್ ಅಖಿಲ್ ಹೆರ್ವಾಡ್ಕರ್ (60; 138ಎ, 4X9) ಅವರು ಏಕಾಂಗಿ ಹೋರಾಟ ಮಾಡಿದರು.
ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ (ಔಟಾಗದೇ 54) ಅವರ ಜವಾಬ್ದಾರಿಯುತ ಆಟದ ಬಲದಿಂದ ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕವು 26 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 110 ರನ್ ಗಳಿಸಿತು. ಪ್ರಥಮ ಇನಿಂಗ್ಸ್ ಮುನ್ನಡೆಗೆ ಇನ್ನು 10 ರನ್‌ಗಳಷ್ಟೇ ಬೇಕಿದೆ. ಮಯಂಕ್ ಅವರೊಂದಿಗೆ ಕರುಣ್ ನಾಯರ್ (ಬ್ಯಾಟಿಂಗ್ 3) ಕ್ರೀಸ್‌ನಲ್ಲಿದ್ದಾರೆ.
ರಾಯಚೂರು ಹುಡುಗ ವಿದ್ಯಾಧರ್ ಪಾಟೀಲ ಅವರು ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ವಿಕೆಟ್‌ಕೀಪರ್ ಕೃತಿಕ್ ಕೃಷ್ಣ ಪಡೆದ ಕ್ಯಾಚ್‌ಗೆ ಯಶಸ್ವಿ ನಿರ್ಗಮಿಸಿದರು. ಎರಡು ಓವರ್‌ಗಳ ನಂತರ ವಿದ್ವತ್ ಬೌಲಿಂಗ್‌ನಲ್ಲಿ ಮುಷೀರ್ ಖಾನ್ ಅವರು ಕೆ.ಎಲ್. ರಾಹುಲ್ ಅವರಿಗೆ ಕ್ಯಾಚ್ ಆದರು. ಸಿದ್ಧೇಶ್ ಲಾಡ್ ಮತ್ತು ಶಾರ್ದೂಲ್ ಠಾಕೂರ್ ವಿಕೆಟ್ ಕೂಡ ವಿದ್ವತ್ ಖಾತೆ ಸೇರಿದವು.
ಇನ್ನೊಂದು ಬದಿಯಿಂದ ಪ್ರಸಿದ್ಧ ಕೃಷ್ಣ ಅವರ ಸ್ವಿಂಗ್ ಪ್ರಭಾವ ಬೀರಿತು. ಸೂರ್ಯಾಂಶ್ ಶೆಡಗೆ ಆಕಾಶ್ ಆನಂದ್ ಮತ್ತು ಶಮ್ಸ್ ಮುಲಾನಿ ಅವರ ವಿಕೆಟ್ ಗಳಿಸಿದರು. ಇದರಿಂದಾಗಿ ತಂಡವು 78 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತು.
ಕೆಳಕ್ರಮಾಂಕದ ಬ್ಯಾಟರ್‌ಗಳು ದೀರ್ಘ ಇನಿಂಗ್ಸ್ ಆಡಲು ಶ್ರೇಯಸ್ ಬಿಡಲಿಲ್ಲ. ಅವರ ಬೌಲಿಂಗ್‌ನಲ್ಲಿ ಆರಂಭಿಕ ಬ್ಯಾಟರ್ ಹೆರ್ವಾಡ್ಕರ್ ಕೊನೆಯವರಾಗಿ ಔಟಾದರು.
ಮಯಂಕ್ ಮಿಂಚು
ಕರ್ನಾಟಕ ತಂಡಕ್ಕೆ ಅನುಭವಿ ಜೋಡಿ ಕೆ.ಎಲ್. ರಾಹುಲ್ (28; 26ಎ, 4X6) ಮತ್ತು ಮಯಂಕ್ ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 10 ಓವರ್ ದಾಟುವಷ್ಟರಲ್ಲಿ 50 ರನ್‌ಗಳು ಸೇರಿದವು.
ಆದರೆ ಮೋಹಿತ್ ಅವಸ್ಥಿ ಅವರ ಎಸೆತದ ವೇಗ ಅಂದಾಜಿಸುವಲ್ಲಿ ಎಡವಿದ ರಾಹುಲ್ ಕ್ಲೀನ್‌ಬೌಲ್ಡ್ ಆದರು. ಜೊತೆಯಾಟ ಮುರಿಯಿತು. ನಾಯಕ ದೇವದತ್ತ ಪಡಿಕ್ಕಲ್ (17; 27ಎ, 4X2) ಅವರು ಆಟಕ್ಕೆ ಕುದುರಿಕೊಂಡಿದ್ದ ಹೊತ್ತಿನಲ್ಲಿ ಸೂರ್ಯಾಂಶ್ ಅವರ ಎಸೆತದಲ್ಲಿ ಆಕಾಶ್ ಆನಂದ್‌ಗೆ ಕ್ಯಾಚಿತ್ತರು. ಅವರು ಗುಂಪು ಹಂತದ ಕೊನೆ ಪಂದ್ಯದಲ್ಲಿ ಶತಕ ಬಾರಿಸಿ ಗೆಲುವಿಗೆ ಕಾರಣರಾಗಿದ್ದರು.
ಈ ಹಂತದಲ್ಲಿ ಮಯಂಕ್ ಅವರು ಜವಾಬ್ದಾರಿಯುತ ಆಟವಾಡಿದರು. ತಂಡವು ಕುಸಿಯದಂತೆ ತಡೆದರು. ಅವರೊಂದಿಗೆ ಕರುಣ್ ಕೂಡ ಸೇರಿಕೊಂಡರು.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್
ಮುಂಬೈ: 48.1 ಓವರ್‌ಗಳಲ್ಲಿ 120 (ಅಖಿಲ್ ಹೆರ್ವಾಡ್ಕರ್ 60, ಶಾರ್ದೂಲ್ ಠಾಕೂರ್ 16, ಸಿದ್ಧೇಶ್ ಲಾಡ್ 12, ಸೂರ್ಯಾಂಶ ಶೆಡಗೆ 12, ವಿದ್ವತ್ ಕಾವೇರಪ್ಪ 38ಕ್ಕೆ3, ಪ್ರಸಿದ್ಧಕೃಷ್ಣ 21ಕ್ಕೆ3, ಶ್ರೇಯಸ್ ಗೋಪಾಲ್ 4ಕ್ಕೆ3, ವಿದ್ಯಾಧರ್ ಪಾಟೀಲ 36ಕ್ಕೆ1)
ಕರ್ನಾಟಕ: 26 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 110 (ಕೆ.ಎಲ್. ರಾಹುಲ್ 28, ಮಯಂಕ್ ಅಗರವಾಲ್ ಬ್ಯಾಟಿಂಗ್ 54, ದೇವದತ್ತ ಪಡಿಕ್ಕಲ್ 17, ಮೋಹಿತ್ ಅವಸ್ತಿ 21ಕ್ಕೆ1, ಸೂರ್ಯಾಂಶ್ ಶೆಡಗೆ 16ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.