ADVERTISEMENT

Ranji Trophy: ಕರ್ನಾಟಕದ ಕನಸು ಭಗ್ನ; ಫೈನಲ್‌ನಲ್ಲಿ ಸೌರಾಷ್ಟ್ರ vs ಬಂಗಾಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2023, 10:47 IST
Last Updated 12 ಫೆಬ್ರುವರಿ 2023, 10:47 IST
ಅರ್ಪಿತ್ ವಾಸವಡ
ಅರ್ಪಿತ್ ವಾಸವಡ   

ಬೆಂಗಳೂರು: 2022-23ನೇ ಸಾಲಿನ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಕರ್ನಾಟಕದ ಕನಸು ಭಗ್ನಗೊಂಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೆಮಿಫೈನಲ್ ಮುಖಾಮುಖಿಯಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕ ನಾಲ್ಕು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.

ಈ ಮೂಲಕ ತವರಿನ ಅಂಗಣದಲ್ಲಿ ಮುಖಭಂಗಕ್ಕೊಳಗಾಗಿರುವ ಮಯಂಕ್ ಅಗರವಾಲ್ ಪಡೆ ಟೂರ್ನಿಯಿಂದಲೇ ನಿರ್ಗಮಿಸಿದೆ.

ADVERTISEMENT

ಮತ್ತೊಂದೆಡೆ ಮೊದಲ ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶದ ವಿರುದ್ಧ ಬಂಗಾಳ 306 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಫೆಬ್ರುವರಿ 16, ಸೋಮವಾರದಿಂದ ಆರಂಭವಾಗಲಿರುವ ಫೈನಲ್ ಪಂದ್ಯದಲ್ಲಿ ಬಂಗಾಳ ಮತ್ತು ಸೌರಾಷ್ಟ್ರ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ನಾಯಕ ಮಯಂಕ್ ದ್ವಿಶತಕದ ಹೋರಾಟ ವ್ಯರ್ಥ...
ನಾಯಕ ಮಯಂಕ್ ಅಗರವಾಲ್ ದ್ವಿಶತಕದ (249) ಬಲದೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 407 ರನ್ ಪೇರಿಸಿತ್ತು. ಶ್ರೀನಿವಾಸ್ ಶರತ್ 66 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.

ಇದಕ್ಕೆ ಉತ್ತರವಾಗಿ ನಾಯಕ ಅರ್ಪಿತ್ ವಾಸವಡ ದ್ವಿಶತಕದ ಬೆಂಬಲದೊಂದಿಗೆ ಸೌರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 527 ರನ್ ಗಳಿಸಿತು. ಈ ಮೂಲಕ 120 ರನ್‌ಗಳ ಮಹತ್ವದ ಮುನ್ನಡೆ ಗಳಿಸಿತು. ಶೆಲ್ಡನ್ ಜಾಕ್ಸನ್ ಸಹ ಅಮೋಘ ಶತಕ(160) ಗಳಿಸಿದರು. ಕರ್ನಾಟಕದ ಪರ ವಿದ್ವತ್ ಕಾವೇರಪ್ಪ ಐದು ವಿಕೆಟ್ ಗಳಿಸಿದರು.

ಮುಗ್ಗರಿಸಿದ ಕರ್ನಾಟಕ...
ದ್ವಿತೀಯ ಇನಿಂಗ್ಸ್‌ನಲ್ಲಿ ನಿಕಿನ್ ಜೋಸ್‌ ಶತಕದ (109) ಹೊರತಾಗಿಯೂ ಮುಗ್ಗರಿಸಿದ ಕರ್ನಾಟಕ ಕೇವಲ 234 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಮಯಂಕ್ 55 ರನ್ ಗಳಿಸಿದರು.

123ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿದ್ದ ಕರ್ನಾಟಕಕ್ಕೆ ಕೊನೆಯ ದಿನದಲ್ಲಿ ಸೌರಾಷ್ಟ್ರದ ಬೌಲರ್‌ಗಳಾದ ಚೇತನ್ ಸಕಾರಿಯಾ (45ಕ್ಕೆ 4) ಹಾಗೂ ಧರ್ಮೇಂದ್ರಸಿಂಹ ಜಡೇಜ (79ಕ್ಕೆ 4) ಬಲವಾದ ಪೆಟ್ಟು ಕೊಟ್ಟರು.

ಬಳಿಕ 115 ‌ರನ್‌ಗಳ ಗುರಿ ಬೆನ್ನಟ್ಟಿದ ಸೌರಾಷ್ಟ್ರ, ಆರು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು. ಕರ್ನಾಟಕ ಪರ ಕೆ. ಕೌತಮ್ ಮತ್ತು ವಾಸುಕಿ ಕೌಶಿಕ್ ತಲಾ ಮೂರು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.